ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದಡಿ ಮುಖಂಡರು ದಾವಣಗೆರೆಯಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು. ಆಲೂರು ನಿಂಗರಾಜ್, ಎಚ್.ಸಿ. ಗುಡ್ಡಪ್ಪ, ಎಂ. ಹಾಲೇಶ್, ಮಂಜುನಾಥ್ ಕುಂದುವಾಡ, ಎಚ್. ಮಲ್ಲೇಶ್ ಇತರರಿದ್ದರು.  
ದಾವಣಗೆರೆ

ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಮಾದಿಗ ಒಕ್ಕೂಟದಿಂದ ಹೆಚ್ಚಿದ ಒಳಮೀಸಲಾತಿ ಕೂಗು
  • ನಗರದಲ್ಲಿ ಬೈಕ್ ರ‌್ಯಾಲಿ, ರಸ್ತೆ ತಡೆ ನಡೆಸಿದ ಮುಖಂಡರು
  • 280ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ-ಬಿಡುಗಡೆ
ದಾವಣಗೆರೆ: ಹಳೆಯ ಮೀಸಲಾತಿ ಬದಲಾಗಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ವರದಿಯಂತೆ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸಲು ಆಗ್ರಹಿಸಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ನೀಡಿದ್ದ ಕರೆಯಂತೆ ಶುಕ್ರವಾರ, ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆ ಆರರಿಂದಲೇ ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಹದಡಿ ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿ ವಿವಿಧೆಡೆ ಬೈಕ್ ರ‌್ಯಾಲಿ ನಡೆಸಿದ ಮುಖಂಡರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಅಶೋಕ ರಸ್ತೆ, ಮಂಡಿಪೇಟೆ, ಎಪಿಎಂಸಿ, ಹದಡಿ ರಸ್ತೆ, ಪಿಬಿ. ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಬಹುತೇಕ ಬಂದ್ ಆಗಿದ್ದವು. ಇತರೆ ಭಾಗಗಳಲ್ಲಿ ಎಂದಿನಂತೆ ವಹಿವಾಟು ನಡೆಯಿತು. ಪೆಟ್ರೋಲ್ ಬಂಕ್, ಬ್ಯಾಂಕ್‌ಗಳು, ಶಾಲೆ-ಕಾಲೇಜುಗಳು ಕಾರ್ಯ ನಿರ್ವಹಿಸಿದವು.
ಕೆಎಸ್‌ಆರ್‌ಟಿಸಿ, ಹಳೆ ಬಸ್ ನಿಲ್ದಾಣದ ಬಳಿ ಸಂಚರಿಸುತ್ತಿದ್ದ ಬಸ್, ಆಟೋ ಇತರೆ ವಾಹನಗಳನ್ನು ಪ್ರತಿಭಟನಾಕಾರರು ತಡೆದರು. ವಾಹನ ಕೆಳಗೆ ರಸ್ತೆಯಲ್ಲೇ ಮಲಗಿ ರಸ್ತೆ ತಡೆ ನಡೆಸಿದರು. ರಾಜ್ಯ ಸರ್ಕಾರ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಇತರರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನೀಲಿ ಶಲ್ಯ ಧರಿಸಿದ್ದ ಮುಖಂಡರು, ಪ್ರತಿಭಟನಾಕಾರರು ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸರ್ಕಾರದ ವಿರುದ್ಧ ಧ್ವನಿವರ್ಧಕದಲ್ಲಿ ಆಕ್ರೋಶ ಹೊರಹಾಕಿದರು. ಕೆಲವೆಡೆ ಟೈರ್ ಸುಡಲಾಯಿತು. ಆರ್‌ಎಂಸಿ ರಸ್ತೆಯಲ್ಲಿ ಪ್ರತಿಭಟನೆ ವೇಳೆ ಚಿಕ್ಕನಹಳ್ಳಿ ನಿಂಗಪ್ಪ ಎಂಬಾತ ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದರು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಜಯದೇವ ವೃತ್ತ ಸೇರಿ ಅನೇಕ ಕಡೆಗಳಲ್ಲಿ ರಸ್ತೆ ತಡೆ ನಡೆಸಿದ 280ಕ್ಕೂ ಹೆಚ್ಚು ಪ್ರತಿಭಟನಾಕಾರರು, ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಬಸ್‌ಗಳ ಮೂಲಕ ಪೊಲೀಸ್ ಕವಾಯತು ಮೈದಾನಕ್ಕೆ ಕರೆದೊಯ್ದು ಕೆಲ ತಾಸಿನ ನಂತರ ಬಿಡುಗಡೆಗೊಳಿಸಲಾಯಿತು. ಪೊಲೀಸರು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ಮುಖಂಡರು ಕಿಡಿ ಕಾರಿದರು.
ಮುಖಂಡರಾದ ಆಲೂರು ನಿಂಗರಾಜ್, ಎಚ್.ಸಿ. ಗುಡ್ಡಪ್ಪ, ಎಂ. ಹಾಲೇಶ್, ಮಂಜುನಾಥ್ ಕುಂದುವಾಡ, ಜೆ. ಮಂಜುನಾಥ್, ಎಚ್. ಮಲ್ಲೇಶ್ ಹರಿಹರ, ರಾಘವೇಂದ್ರ ಕಡೇಮನಿ, ಎಚ್.ಚಿದಾನಂದಪ್ಪ, ಜಿ. ಆಂಜಿನಪ್ಪ ಕಡತಿ, ಪಾಂಡೋಮಟ್ಟಿ ಪ್ರಭಾಕರ್, ಬಿ.ಜೆ. ಮಹಾಂತೇಶ್, ಚಿಕ್ಕನಹಳ್ಳಿ ಲಿಂಗರಾಜ, ಕೆ. ರವಿಕುಮಾರ್, ನಗರನಹಳ್ಳಿ ರಾಮಚಂದ್ರಪ್ಪ, ಎಚ್. ಉದಯ್‌ಕುಮಾರ್, ಎ.ಕೆ. ಭೂಮೇಶ್, ಜಿ.ಎಚ್. ತಮ್ಮಣ್ಣ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಾದಿಗ ಸಮಾಜ 30 ವರ್ಷದಿಂದ ಹೋರಾಟ ನಡೆಸುತ್ತ ಬಂದಿದೆ. ಈ ಸಮಾಜಕ್ಕೆ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಬೇಕು. ತಾಳ್ಮೆ ಪರೀಕ್ಷಿಸಬಾರದು. ಶುಕ್ರವಾರ ಸಂಜೆ ಸಂಪುಟ ಸಭೆಯಲ್ಲಿ ಸರ್ಕಾರದ ನಡೆ ಗಮನಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾದಿಗ ಸಮಾಜದ ಮುಖಂಡ ಆಲೂರು ನಿಂಗರಾಜ್ ಪತ್ರಿಕೆಗೆ ತಿಳಿಸಿದರು.