ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಎರಡು ಕೋಮುಗಳ ಮಧ್ಯೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. 
ದಾವಣಗೆರೆ

ಈಶ್ವರ ದೇವರ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಪ್ರಮುಖ ಮುಖ್ಯಾಂಶಗಳು

  • ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿಯಲ್ಲಿ ಘಟನೆ
  • ಅನ್ಯಕೋಮಿನ ಧ್ವಜ ತೆರವು
  • ಬಿಗುವಿನ ವಾತಾವರಣ
ಸಾಸ್ವೆಹಳ್ಳಿ : ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಗ್ರಾಮದಲ್ಲಿ ಅನ್ಯ ಕೋಮಿನ ಕಿಡಿಗೇಡಿಗಳು ಶುಕ್ರವಾರ ರಾತ್ರಿ ಈಶ್ವರ ದೇವರ ಭಾವಚಿತ್ರವಿರುವ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿ ಸುಟ್ಟಿದ್ದರಿಂದ ಶನಿವಾರ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವ ಸೋಮವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಗ್ರಾಮದ ಅಗಸೆ ಬಾಗಿಲಿಗೆ ಈಶ್ವರನ ಭಾವಚಿತ್ರವಿರುವ ಫ್ಲೆಕ್ಸ್ ಕಟ್ಟಲಾಗಿತ್ತು.
ಫ್ಲೆಕ್ಸ್ ಸುಟ್ಟಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸತೊಡಗಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಹೊನ್ನಾಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಫ್ಲೆಕ್ಸ್ ತೆರವುಗೊಳಿಸಲು ಮುಂದಾದರು. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ತೆರವುಗೊಳಿಸದಂತೆ ತಡೆದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿ, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಘಟನಾ ಸ್ಥಳದ ಬಳಿ ಇದ್ದ ಅನ್ಯ ಕೋಮಿನ ಧ್ವಜವನ್ನು ತೆರವುಗೊಳಿಸಬೇಕು. ರಾಜಕೀಯ ಒತ್ತಡಕ್ಕೆ ಮಣಿಯದೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು. ನಂತರ ಧ್ವಜ ತೆರವುಗೊಳಿಸಲಾಯಿತು.
ಯುವಕ ವಶಕ್ಕೆ
ಘಟನೆ ಸಂಬಂಧ ಪೊಲೀಸರು ಸಾಸ್ವೆಹಳ್ಳಿ ಗ್ರಾಮದ ಸುಹೇಲ್ ಎಂಬ ಯುವಕನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದರು.
‘ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಗ್ರಾಮದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದು ಇನ್ನೂ 3-4 ಜನರಿಗಾಗಿ ಹುಡುಕಾಟ ನಡೆದಿದೆ’ ಎಂದು ಚನ್ನಗಿರಿ ಉಪ ವಿಭಾಗದ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ತಿಳಿಸಿದರು.
ಡಿವೈಎಸ್ಪಿ ಜತೆಗೆ ಹೊನ್ನಾಳಿ ಪಿಐ ಸುನೀಲ್ ಕುಮಾರ್, ಪಿಎಸ್‌ಐ ಎನ್. ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಎರಡು ಕೋಮುಗಳ ನಡುವೆ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
"

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಮು ಸೌಹಾರ್ದದ ನೆಪದಲ್ಲಿ ಹಿಂದುಗಳನ್ನು ಹತ್ತಿಕ್ಕಲೆಂದೇ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ. ಸಾಸ್ವೆಹಳ್ಳಿಯಲ್ಲಿ ನಡೆದಿರುವ ದುಷ್ಕೃತ್ಯದಲ್ಲಿ ಭಾಗಿಯಾದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಿ.