ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಘಟಕದ ಮುಖಂಡ ಆವರಗೆರೆ ಎಚ್.ಜಿ. ಉಮೇಶ್, ಎಸ್. ಮುರುಗೇಶ್, ವಿ. ಲಕ್ಷ್ಮಣ್, ಸತೀಶ್ ಅರವಿಂದ್ ಇದ್ದರು.
- ವೇತನ ಪರಿಷ್ಕರಣೆ ಬೀದಿ ಹೋರಾಟಕ್ಕೆ ಸಿಕ್ಕ ಫಲ
- ಮಾಸಿಕ 36 ಸಾವಿರ ರೂ. ವೇತನ ನೀಡಲಿ ಸರ್ಕಾರ
- ಜೆಸಿಟಿಯು ಮುಖಂಡ ಎಚ್.ಜಿ. ಉಮೇಶ್ ಆಗ್ರಹ
ದಾವಣಗೆರೆ: ಮಹಿಳೆಯರೇ ಹೆಚ್ಚು ಕಾರ್ಯ ನಿರ್ವಹಿಸುವ ಗಾರ್ಮೆಂಟ್, ಕೃಷಿ ಕೆಲಸ, ಬೀಡಿ ಕಾರ್ಮಿಕರಿಗೂ ಕೂಡ ಕನಿಷ್ಠ ವೇತನ ಜಾರಿಗೊಳಿಸಬೇಕು. ಈಗ ನಿಗದಿಪಡಿಸಿದ ಕನಿಷ್ಠ ವೇತನ ಪರಿಷ್ಕರಣೆಯ ಮೊತ್ತದಲ್ಲಿ ಗಂಟೆಯ ಕೆಲಸ ಆಧರಿಸಿ ಇದನ್ನು ನಿಗದಿ ಮಾಡಬೇಕು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಘಟಕದ ಮುಖಂಡ ಆವರಗೆರೆ ಎಚ್.ಜಿ. ಉಮೇಶ್ ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯು ಹೊರಡಿಸಿರುವ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಘಟಕ ಸ್ವಾಗತಿಸಿದೆ. ಅಸಂಘಟಿತ 99 ವಲಯಗಳ ಪೈಕಿ 19 ವಲಯಗಳನ್ನು ಕೈಬಿಟ್ಟು ಉಳಿದವಕ್ಕೆ ಇದನ್ನು ಅನ್ವಯಗೊಳಿಸಲಾಗಿದೆ. ಕೈಬಿಡಲಾದ ಕೆಲವು ಕಾರ್ಮಿಕರ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ರಿಟ್ ಅರ್ಜಿ ಹಾಗೂ ಇತರ ಪ್ರಕರಣಗಳಲ್ಲಿ ನೀಡಲಾದ ತೀರ್ಪಿನನ್ವಯ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಗೊಳಿಸಲಾಗಿತ್ತು. ಸುಪ್ರೀಂಕೋರ್ಟ್ ಮಾರ್ಗಸೂಚಿ ಅನುಸರಿಸಿ ಕನಿಷ್ಠ ವೇತನ ಲೆಕ್ಕಾಚಾರ ಮಾಡಲು ನ್ಯಾಯಾಲಯವು ನಿರ್ದೇಶನ ನೀಡಿತ್ತು. ಕಾರ್ಮಿಕ ಸಂಘಟನೆಗಳು ನಡೆಸಿದ ನಿರಂತರ ಬೀದಿ ಹೋರಾಟ ಮತ್ತು ಕಾನೂನು ಹೋರಾಟಕ್ಕೆ ಫಲ ದೊರೆತಿದೆ ಎಂದು ತಿಳಿಸಿದರು.
ಕನಿಷ್ಠ ವೇತನ ಕಾಯ್ದೆಯಡಿ ಕೌಶಲ, ಕುಶಲ ಹಾಗೂ ಅರೆಕುಶಲ ಎಂಬ ಮೂರು ವಲಯಗಳನ್ನು ಮಾಡಿ ವೇತನ ದರದ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಇದನ್ನು ಜಾರಿಗೊಳಿಸುವ ಮುನ್ನ ಪರಿಷ್ಕರಣೆ ಮಾಡಿ ಎಲ್ಲ ಕಾರ್ಮಿಕರಿಗೂ ಮಾಸಿಕ 36 ಸಾವಿರ ರೂ. ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರಾದ ಎಸ್. ಮುರುಗೇಶ್, ವಿ. ಲಕ್ಷ್ಮಣ್, ಸತೀಶ್ ಅರವಿಂದ್ ಇದ್ದರು.