ದಾವಣಗೆರೆಯಲ್ಲಿ ಗುರುವಾರ ಸಂಜೆ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರ ರಾಮನಾಥ್, ಬ್ರಹ್ಮಾಕುಮಾರಿ ಲೀಲಾಜಿ, ರೇಣುಕಾದೇವಿ, ಜಿ.ಎಂ. ಶಿವಕುಮಾರ್, ಕರಿಬಸಪ್ಪ ಕಣಕುಪ್ಪಿ, ಪಿ.ಬಿ. ಶಿವಕುಮಾರ್, ಕೆ.ಜಿ. ಮಾರುತಿ ರಾಮ್ ಇದ್ದರು. 
ದಾವಣಗೆರೆ

ಮನಸ್ಸು ಸದೃಢವಾಗಲು ಧ್ಯಾನ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಬ್ರಹ್ಮಾಕುಮಾರ ರಾಮನಾಥ್ ಹೇಳಿಕೆ
  • ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮ
  • ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ
ದಾವಣಗೆರೆ : ಶಾರೀರಿಕವಾಗಿ ಸದೃಢರಾಗಲು ದೈಹಿಕ ವ್ಯಾಯಾಮ ಮಾಡಬೇಕು, ಆದರೆ ಮನಸ್ಸು ಸದೃಢವಾಗಲು ಧ್ಯಾನದ ಅವಶ್ಯಕತೆ ಇದೆ ಎಂದು ಅಬು ಪರ್ವತದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧಾರ್ಮಿಕ ವಿಭಾಗದ ಮುಖ್ಯಸ್ಥ, ಹಿರಿಯ ರಾಜಯೋಗಿ ಬ್ರಹ್ಮಾಕುಮಾರ ರಾಮನಾಥ್ ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದ ದೇವರಾಜ ಅರಸು ಬಡಾವಣೆ ‘ಬಿ’ ಬ್ಲಾಕ್‌ನಲ್ಲಿರುವ ಶಿವಧ್ಯಾನ ಮಂದಿರದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದ ಅವರ ‘ಯೋಗ ಮತ್ತು ಪತಂಜಲಿ ಯೋಗ’ದಲ್ಲಿ ರಾಜಯೋಗದ ಮಹತ್ವದ ಬಗ್ಗೆ ಹೇಳಲಾಗಿದೆ. ರಾಜಯೋಗ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಎಲ್ಲರಿಗೂ ಉಚಿತವಾಗಿ ಕಲಿಸಿಕೊಡಲಾಗುತ್ತದೆ. ನಾವೆಲ್ಲರೂ ನಮ್ಮ ನಿಜಮನೆ ಪರಮಧಾಮದಿಂದ ಇಲ್ಲಿ ಬಂದು ಪಾತ್ರವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈಗ ವಾಪಸ್ ಮನೆಗೆ ಹೋಗಬೇಕಾಗಿದೆ. ಧ್ಯಾನ ಮಾಡಲು ನಮ್ಮನ್ನು ನಾವು ಆತ್ಮವೆಂದು ತಿಳಿದು ಪರಮ ಜ್ಯೋತಿ ಪರಮಾತ್ಮನ ಜತೆಗೆ ಸಂಬಂಧ ಬೆಳೆಸಬೇಕು. ಅಣುವಿನಲ್ಲಿ ನ್ಯೂಟ್ರಾನ್, ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಇರುವಂತೆ ಆತ್ಮ, ಮನಸ್ಸು, ಬುದ್ಧಿ, ಸಂಸ್ಕಾರಗಳಿಂದ ಕೂಡಿದೆ ಎಂದು ಹೇಳಿದರು.
ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಇವತ್ತಿನ ಸಮಯದಲ್ಲಿ ಧ್ಯಾನ ಅಥವಾ ರಾಜಯೋಗ ಬಹಳ ಅವಶ್ಯಕತೆ ಇದೆ. 2024 ರ ಡಿ. 6 ರಂದು ವಿಶ್ವಸಂಸ್ಥೆಯ ಜನರಲ್ ಅಸಂಬ್ಲಿಯು ಡಿ. 21ನ್ನು ವಿಶ್ವ ಧ್ಯಾನ ದಿನವೆಂದು ಘೋಷಿಸಿದೆ. ಈ ದಿನದ ಪ್ರಯುಕ್ತ 137 ದೇಶದ 8500 ಶಾಖೆಗಳಲ್ಲಿ ಧ್ಯಾನದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು. ರಾಜಯೋಗದ ಅಭ್ಯಾಸವನ್ನು ಹೇಗೆ ಮಾಡಬೇಕು ಎಂದು ವಿವರಿಸಿದರು.
ಸಿದ್ಧ ಸಮಾಧಿ ಯೋಗ ಕೇಂದ್ರದ ರೇಣುಕಾದೇವಿ, ಆರ್ಟ್ ಆಫ್ ಲಿವಿಂಗ್‌ನ ಜಿ.ಎಂ. ಶಿವಕುಮಾರ್, ಅಮೃತೇಶ್ವರಿ ಅಷ್ಟಾಂಗ ಯೋಗ ಕೇಂದ್ರದ ಕರಿಬಸಪ್ಪ ಕಣಕುಪ್ಪಿ, ಓಶೋ ಧ್ಯಾನ ಶಾಲೆಯ ಪಿ.ಬಿ. ಶಿವಕುಮಾರ್, ಪಿರಾಮಿಡ್ ಧ್ಯಾನ ಕೇಂದ್ರದ ಕೆ.ಜಿ. ಮಾರುತಿ ರಾಮ್, ಧ್ಯಾನ ಯೋಗದ ಬಗ್ಗೆ ವಿವರಣೆ ನೀಡಿದರು.
ದೊಡ್ಡಬಾತಿ ಕೇಂದ್ರದ ಸಂಚಾಲಕಿ ಗೌರಿ ಸ್ವಾಗತಿಸಿದರು. ಬ್ರಹ್ಮಾಕುಮಾರಿ ಶಾಂತಾ ಕಾರ್ಯಕ್ರಮ ನಿರೂಪಿಸಿದರು.