ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ವಿರೋಧಿಸಿ ಕರ್ನಾಟಕ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘವು ದಾವಣಗೆರೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿತು. ರಾಜ್ಯಾಧ್ಯಕ್ಷ ಕೆ.ಎಚ್.ಆನಂದರಾಜು, ಎಂ.ವೆಂಕಟೇಶ್, ಟಿ. ಶ್ರೀಧರ, ರಹಮತ್, ಪ್ರವೀಣ್ ಇತರರಿದ್ದರು.
- ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹ
- ಕಾರ್ಪೋರೇಟ್ ಋಣಭಾರದಲ್ಲಿದೆ ಕೇಂದ್ರ ಸರ್ಕಾರ
- ಔಷಧ ಮಾರಾಟ ಪರವಿದ್ದ ಹಿಂದಿನ ಕಾಯ್ದೆ ಜಾರಿಯಾಗಲಿ
ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ವಿರೋಧಿಸಿ ಹಾಗೂ 1976ರ ಎಸ್‌ಪಿಇ ಕಾಯ್ದೆ ರಕ್ಷಣೆಗೆ ಆಗ್ರಹಿಸಿ ಕರ್ನಾಟಕ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ(ಕೆಎಸ್‌ಎಂಎಸ್‌ಆರ್‌ಎ) ವು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು, ಎಸಿ ಸಂತೋಷ್ ಅವರ ಮೂಲಕ ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿಪತ್ರ ಸಲ್ಲಿಸಿದರು.
ಕೇಂದ್ರೀಯ ಟ್ರೇಡ್ ಯೂನಿಯನ್‌ಗಳು, ಸ್ವತಂತ್ರ ಕೈಗಾರಿಕಾ ಫೆಡರೇಷನ್‌ಗಳು ಹಾಗೂ ಲಕ್ಷಾಂತರ ಕಾರ್ಮಿಕರ ವಿರೋಧದ ನಡುವೆಯೂ ನರೇಂದ್ರ ಮೋದಿ ಸರ್ಕಾರವು ನ.21ರಂದು ಏಕಪಕ್ಷೀಯವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.
ಚುನಾವಣಾ ಬಾಂಡ್ ಹೆಸರಲ್ಲಿ ಸಾವಿರಾರು ಕೋಟಿ ಹಣ ಪಡೆದ ಕೇಂದ್ರ ಸರ್ಕಾರವು, ಕಾರ್ಪೋರೇಟ್ ಕಂಪನಿಗಳ ಋಣ ತೀರಿಸುವ ಸಲುವಾಗಿ ಇದುವರೆಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆದಿಲ್ಲ. ಹೀಗಾಗಿ ದೇಶವ್ಯಾಪಿ ಹೋರಾಟ ನಡೆಸಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷ ಕೆ.ಎಚ್.ಆನಂದರಾಜು ಹೇಳಿದರು.
ಔಷಧ ಮತ್ತು ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇದ್ದ ಟ್ರೇಡ್ ಯೂನಿಯನ್ ಅಧಿನಿಯಮ 1926, ಕೈಗಾರಿಕಾ ವಿವಾದ ಅಧಿನಿಯಮ, 1947, ಮಾರಾಟ ಪ್ರತಿನಿಧಿಗಳ (ಸವೀರ್ಸ್ ಕಂಡಿಷನ್ಸ್) ಅಧಿನಿಯಮ, 1976 (ಎಸ್.ಪಿ.ಇ. ಅಧಿನಿಯಮ) ಸೇರಿ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿದೆ.
ದೀರ್ಘಕಾಲದಿಂದ ಕಾರ್ಮಿಕರ ರಕ್ಷಣೆಗಿದ್ದ ಈ ಕಾನೂನುಗಳಿಂದ ಕಾರ್ಮಿಕರು ತಮ್ಮ ಕೆಲಸಗಳನ್ನು ರಕ್ಷಿಸಿಕೊಳ್ಳಲು ಅಲ್ಪಮಟ್ಟಿಗೆ ಸಹಕಾರಿಯಾಗಿದ್ದವು. ಈ ಕಾನೂನುಗಳನ್ನ್ನು ಬಲಪಡಿಸುವ ಬದಲು ದುರ್ಬಲಗೊಳಿಸಲು, ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕುಗ್ಗಿಸಲು ಮತ್ತು ಮಾಲಿಕರ ಪಾಲಿಗೆ ಅನುಕೂಲವಾಗುವಂತೆ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಉದ್ದೇಶಪೂರ್ವಕ ಜಾರಿಗೆ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರವು ಮಾಡಿದೆ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರವು ತಕ್ಷಣ ಕಾರ್ಪೋರೇಟ್ ಕಂಪನಿಗಳ ಪರವಾದ ನಾಲ್ಕು ಸಂಹಿತೆಗಳನ್ನು ಹಿಂಪಡೆಯಬೇಕು. ರಾಜ್ಯ ಸರ್ಕಾರವು ಕೂಡ ಇವನ್ನು ರಾಜ್ಯದಲ್ಲಿ ಜಾರಿ ಮಾಡದಿರುವ ಬಗ್ಗೆ ಅಭಯ ನೀಡಬೇಕು. ಔಷಧ ಮಾರಾಟ ಪ್ರತಿನಿಧಿಗಳ ಪರವಾಗಿ ಈ ಹಿಂದಿದ್ದ ಕಾಯ್ದೆಯನ್ನು ಜಾರರಿಗೊಳಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಎಂ.ವೆಂಕಟೇಶ್, ಘಟಕದ ಕಾರ್ಯದರ್ಶಿ ಟಿ. ಶ್ರೀಧರ, ರಹಮತ್, ಪ್ರವೀಣ್, ಪ್ರಶಾಂತ್, ಶಶಿಧರ, ಅರುಣ್, ಗುರುರಾಜ್, ಜಗದೀಶ್ ಇತರರಿದ್ದರು.