ಬಂದ್ ಆಗಿರುವ ಮಾದರಿ ಡಿಜಿಟಲ್ ಸೇರ್ಪಡೆ ಕೇಂದ್ರ. Digital Training Center
ದಾವಣಗೆರೆ

ಮಾಯಕೊಂಡ ಮಾದರಿ ಡಿಜಿಟಲ್ ತರಬೇತಿ ಕೇಂದ್ರ ಬಂದ್

ಶಿಕ್ಷಣ ಫೌಂಡೇಶನ್, ಡೆಲ್ ಕಂಪನಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ 2024ರಲ್ಲಿ ಆರಂಭ

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ

ಶಿಕ್ಷಣ ಫೌಂಡೇಶನ್, ಡೆಲ್ ಕಂಪನಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಗ್ರಾಮ ಡಿಜಿ ವಿಕಸನ) ಸಹಯೋಗದಲ್ಲಿ ಆರಂಭವಾಗಿದ್ದ ಮಾದರಿ ಡಿಜಿಟಲ್ ಸೇರ್ಪಡೆ (ತರಬೇತಿ) ಕೇಂದ್ರ ಒಂದು ವರ್ಷದಿಂದ ಬಂದ್ ಆಗಿದ್ದು, ಮತ್ತೆ ಆರಂಭವಾಗುವ ನಿರೀಕ್ಷೆ ಹುಸಿಯಾಗಿದೆ.

ಡಿಜಿಟಲ್ ಸೇರ್ಪಡೆ (ತರಬೇತಿ) ಕೇಂದ್ರ ರಾಜ್ಯಾದ್ಯಂತ ಒಟ್ಟು ಒಂಬತ್ತು ಗ್ರಾಮ ಪಂಚಾಯಿತಿಗಳಲ್ಲಿ ಆರಂಭವಾಗಿದ್ದು, ಅದರಲ್ಲಿ ದಾವಣಗೆರೆ ಜಿಲ್ಲೆಯ ಮಾಯಕೊಂಡ ಗ್ರಾಮವೂ ಒಂದು. 2024ರಲ್ಲಿ ಕಾರ್ಯಾರಂಭ ಮಾಡಿದ್ದ ಈ ಕೇಂದ್ರಕ್ಕೆ ಡೆಲ್ ಕಂಪನಿಯಿಂದ ಎಂಟು ಕಂಪ್ಯೂಟರ್‌ಗಳು ಹಾಗೂ ಒಂದು ಟಿವಿ ನೀಡಲಾಗಿತ್ತು. ಗ್ರಾಮ ಡಿಜಿ ವಿಕಾಸನ ಸಂಸ್ಥೆಯು ಕಂಪ್ಯೂಟರ್ ಮತ್ತು ಡಿಜಿಟಲ್ ತರಬೇತಿ ನೀಡಲು ಒಬ್ಬ ಬೋಧಕರನ್ನು ನೇಮಿಸಿ ಗೌರವಧನ ನೀಡುತ್ತಿತ್ತು.

ಬಸ್ ನಿಲ್ದಾಣ ವೃತ್ತದಲ್ಲಿರುವ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಕೇಂದ್ರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿತ್ತು. ಕಟ್ಟಡಕ್ಕೆ ಸುಣ್ಣ-ಬಣ್ಣ, ಕಂಪ್ಯೂಟರ್ ಡೆಸ್ಕ್ ಟಾಪ್‌ಗಳಿಗೆ ವಿದ್ಯುತ್ ಸ್ವಿಚ್ ಬೋರ್ಡ್‌ಗಳು, ನೆಲಕ್ಕೆ ಫ್ಲೋರಿಂಗ್ ಶೀಟ್‌ಗಳು, ಸುರಕ್ಷತೆಗಾಗಿ ಕಿಟಕಿ-ಬಾಗಿಲುಗಳಿಗೆ ಕರ್ಟನ್‌ಗಳು, ಯುಪಿಎಸ್ ಹಾಗೂ ಇಂಟರ್ನೆಟ್ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಕಲ್ಪಿಸಲಾಗಿತ್ತು. ಗ್ರಾಮ ಡಿಜಿ ವಿಕಾಸನ (ಎನ್‌ಜಿಒ) ಸಂಸ್ಥೆಯ ಅವಧಿ ಪೂರ್ಣಗೊಂಡ ಕಾರಣಕ್ಕೆ ಕೇಂದ್ರ ಸ್ಥಗಿತಗೊಂಡಿದೆ.

ಮಾಯಕೊಂಡ ಗ್ರಾಮ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವಾಗಿದ್ದು, 15 ಸದಸ್ಯರನ್ನು ಹೊಂದಿರುವ ಗ್ರೇಡ್-1 ಗ್ರಾಮ ಪಂಚಾಯಿತಿಯಾಗಿದೆ. 10 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲೆ, ಐಟಿಐ, ಎಸ್ಸಿ-ಎಸ್ಟಿ ಬಾಲಕಿಯರ ಮೊರಾರ್ಜಿ ವಸತಿ ಶಾಲೆ ಹಾಗೂ ಇತರ ಹಲವು ವಸತಿ ನಿಲಯಗಳಿವೆ. ನಿತ್ಯ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಬಂದು ಹೋಗುತ್ತಾರೆ. ತರಬೇತಿ ಕೇಂದ್ರ ಬಂದ್ ಆಗಿರುವುದರಿಂದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ತೊಂದರೆಯಾಗಿದ್ದು, ತಕ್ಷಣ ಮತ್ತೆ ಆರಂಭಿಸಬೇಕೆಂಬುದು ಗ್ರಾಮಸ್ಥರ ಮನವಿಯಾಗಿದೆ.

ಮಾದರಿ ಡಿಜಿಟಲ್ ತರಬೇತಿ ಕೇಂದ್ರವನ್ನು ಗ್ರಾಮ ಪಂಚಾಯಿತಿ ಗಮನ ಹರಿಸಿ ತಕ್ಷಣ ಕಾರ್ಯಾರಂಭಗೊಳಿ ಸಿದರೆ ವಿದ್ಯಾವಂತ ಯುವ ಸಮುದಾಯಕ್ಕೆ ಕಂಪ್ಯೂಟರ್ ಮತ್ತು ಆನ್‌ಲೈನ್ ತರಬೇತಿ ಪಡೆಯಲು ಅನುಕೂಲವಾಗುತ್ತದೆ.
ರಾಜಶೇಖರ್ ಸಂಡೂರು ಮಾಜಿ ಅಧ್ಯಕ್ಷ, ಕನ್ನಡ ಯುವಶಕ್ತಿ ಕೇಂದ್ರ, ಮಾಯಕೊಂಡ.
ಮಾದರಿ ಡಿಜಿಟಲ್ ತರಬೇತಿ ಕೇಂದ್ರವನ್ನು ಪುನರಾರಂಭ ಮಾಡಲು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು.
ಎಚ್. ಹನುಮಂತಪ್ಪ , ಪಿಡಿಒ, ಮಾಯಕೊಂಡ ಗ್ರಾ.ಪಂ.