ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು. ಗಿತ್ತೆ ಮಾಧವ ವಿಠ್ಠಲರಾವ್, ಮಮತಾ ಹೊಸಗೌಡರ್, ಶೀಲವಂತ ಶಿವಕುಮಾರ್, ಡಾ.ಎನ್. ಮಹಾಂತೇಶ್ ಇದ್ದರು. 
ದಾವಣಗೆರೆ

ಮಾಯಕೊಂಡ ಕ್ಷೇತ್ರ ರಾಜ್ಯಕ್ಕೇ ಪ್ರಥಮ

ಪ್ರಮುಖ ಮುಖ್ಯಾಂಶಗಳು

  • ಎನೂಮರೇಷನ್ ನಮೂನೆ ವಿತರಣೆಯಲ್ಲಿ ಸಾಧನೆ
  • ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿಕೆ
ದಾವಣಗೆರೆ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಎನೂಮರೇಷನ್ ನಮೂನೆಗಳ ವಿತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ಶೇ. 99.81 ಸಾಧನೆಯೊಂದಿಗೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾವಾರು ಸಾಧನೆಯಲ್ಲಿ ಶೇ. 94ರಷ್ಟು ನಮೂನೆಗಳನ್ನು ವಿತರಣೆ ಮಾಡುವುದರೊಂದಿಗೆ ದಾವಣಗೆರೆ ಜಿಲ್ಲೆಯು 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಚನ್ನಗಿರಿ ಕ್ಷೇತ್ರದಲ್ಲಿ ಶೇ. 95.30, ಹೊನ್ನಾಳಿ ಶೇ. 91.95, ಜಗಳೂರು ಶೇ. 95, ಹರಿಹರ ಶೇ. 98, ದಾವಣಗೆರೆ ಉತ್ತರ ಶೇ. 94.89, ದಾವಣಗೆರೆ ದಕ್ಷಿಣದಲ್ಲಿ ಶೇ. 89ರಷ್ಟು ನಮೂನೆಗಳನ್ನು ವಿತರಿಸಲಾಗಿದೆ. ಇನ್ನೂ ಶೇ. 6ರಷ್ಟು ಬಾಕಿ ಇದ್ದು ಮಂಗಳವಾರ ಸಂಜೆಯೊಳಗೆ ಶೇ. 100ರಷ್ಟು ವಿತರಣೆ ಮಾಡಲಾಗುವುದು. ಜಿಲ್ಲೆಯಲ್ಲಿ ಇದುವರೆಗೆ ಶೇ. 10.86ರಷ್ಟು ಡಿಜಿಟಲೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ. ಸಾರ್ವಜನಿಕರಿಗೆ ಆತಂಕ, ಅವಸರ ಬೇಡ. ಮತದಾರರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುತ್ತಾರೆ. ಎಲ್ಲಿಯೂ ಸಾಮೂಹಿಕವಾಗಿ ಹಂಚಿಕೆ ಮಾಡಿಲ್ಲ. ಕೆಲವು ಕಡೆ ಜನರೇ ಗುಂಪಾಗಿ ಬಂದಿರುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಮತದಾರರ ಅನುಕೂಲಕ್ಕಾಗಿ 42 ಕಡೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಸಾರ್ವಜನಿಕರು ಅಲ್ಲಿಗೆ ಭೇಟಿ ನೀಡಿ ಸಂದೇಹ ಪರಿಹರಿಸಿಕೊಳ್ಳಬಹುದು. ಜಿಲ್ಲಾಧಿಕಾರಿ ಕಚೇರಿ, ಸಿಇಒ ಕಚೇರಿ, ತಹಸೀಲ್ದಾರ್ ಕಚೇರಿ, ಮಹಾನಗರ ಪಾಲಿಕೆ, ಗ್ರಾ.ಪಂ. ಕಚೇರಿಗೂ ಹೋಗಿ ವಿಚಾರಿಸಬಹುದು. ಕರಡು ಪಟ್ಟಿ ಪ್ರಕಟಣೆಯ ನಂತರವೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದರೆ ಫಾರ್ಮ್ ಸಂಖ್ಯೆ 8ನ್ನು ಸಲ್ಲಿಸಿ ಬದಲಾವಣೆ ಮಾಡಬಹುದು. ಮ್ಯಾಪಿಂಗ್ ಆದವರು ದಾಖಲೆ ನೀಡಬೇಕಿಲ್ಲ. 18 ವರ್ಷ ತುಂಬಿದ ಯುವಜನರು ಈಗಲೂ ಅರ್ಜಿ ನೀಡಬಹುದು ಎಂದು ಹೇಳಿದರು.
ಹಕ್ಕಿಪಿಕ್ಕಿ ಜನಾಂಗದ ಕೆಲವರಿಗೆ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಮಸ್ಯೆ ಇರುವುದು ಗೊತ್ತಾಗಿದೆ, ಸ್ಥಳ ಪರಿಶೀಲನೆ ನಡೆಸಿ ಅವರಿಗೆ ನಿವಾಸಿ ದೃಢೀಕರಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಪಾಲಿಕೆ ಆಯುಕ್ತ ಡಾ.ಎನ್. ಮಹಾಂತೇಶ್ ಇದ್ದರು.

ಬಿತ್ತನೆ ಚುರುಕು

ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆ ಆರಂಭಿಸಿದ್ದಾರೆ. ರಸಗೊಬ್ಬರ ಹಾಗೂ ಮೇವಿನ ಕೊರತೆ ಇಲ್ಲ ಎಂದು ಡಿಸಿ ಗಂಗಾಧರ ಸ್ವಾಮಿ ಹೇಳಿದರು.
ನದಿಗೆ 20 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ಡಿಸೆಂಬರ್ ವರೆಗೂ ನೀರಿಗೆ ತೊಂದರೆ ಇಲ್ಲ ಎಂದು ತಿಳಿಸಿದರು.
ಇಪ್ಪತ್ತೆರಡು ಕೆರೆ ಏತ ನೀರಾವರಿ ಯೋಜನೆ ಸಂಬಂಧ ಪ್ರಸ್ತಾವನೆ ಸರ್ಕಾರದ ಮುಂದಿದೆ. ಉಬ್ರಾಣಿ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೂ ಚಾಲನೆಯಲ್ಲಿವೆ ಎಂದು ತಿಳಿಸಿದರು.

ಲೋಪ ಕಂಡುಬಂದಿಲ್ಲ

ಚಿಗಟೇರಿ ಜಿಲ್ಲಾಸ್ಪತ್ರೆಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ಜಿಲ್ಲಾ ಸರ್ಜನ್ ವರದಿ ನೀಡಿದ್ದಾರೆ. ಅಲ್ಲಿನ ಯಂತ್ರ ಹಳೆಯದಾಗಿತ್ತು, ಯಾರ ಲೋಪವೂ ಇರಲಿಲ್ಲ ಎಂದು ತಿಳಿಸಿದರು.
ಜಿಲ್ಲಾಡಳಿತದಿಂದಲೂ ತಂಡವೊಂದನ್ನು ರಚಿಸಲಾಗಿತ್ತು, ಅದರ ವರದಿಯ ನಿರೀಕ್ಷೆಯಲ್ಲಿದ್ದೇವೆ. ಅವಘಡದಲ್ಲಿ 50ರಿಂದ 60 ಲಕ್ಷ ರೂ.ಗಳಷ್ಟು ನಷ್ಟವಾಗಿರಬಹುದು ಎಂದು ಹೇಳಿದರು.
ಘಟನೆ ನಡೆದಾಗ ಆಸ್ಪತ್ರೆಯ ಡಿ ಗ್ರೂಪ ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿದ್ದು ಅವರಿಗೆ ಸನ್ಮಾನ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.