ಮಾಯಕೊಂಡ ಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆಗೆ ಕಾಯಕಲ್ಪ ನೀಡುವಂತೆ ಆಗ್ರಹಿಸಿ ರೈತ ಮುಖಂಡರು ಶುಕ್ರವಾರ ಸರ್ಕಾರಕ್ಕೆ ಒತ್ತಾಯಿಸಿದರು. ಅಶೋಕ್ ಗೌಡ್ರು, ರಾಮಜೋಗಿ ಪ್ರತಾಪ್, ಚಂದ್ರಶೇಖರಪ್ಪ, ಬಾಡ ಹನುಮಂತಪ್ಪ ಇದ್ದರು. Market 
ದಾವಣಗೆರೆ

ಮಾಯಕೊಂಡ ಎಪಿಎಂಸಿ ಉಪ ಮಾರುಕಟ್ಟೆಗೆ ಬೇಕಿದೆ ಕಾಯಕಲ್ಪ

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರ ಒತ್ತಾಯ
  • ಪಾಳುಬಿದ್ದ ಗೋದಾಮು ಮಳಿಗೆ ವೀಕ್ಷಣೆ
ಮಾಯಕೊಂಡ: ಗ್ರಾಮದ ಹೊರವಲಯದಲ್ಲಿ ಹೊಸದುರ್ಗ -ದಾವಣಗೆರೆ ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಿರುವ 21 ಎಕರೆಗೂ ಅಧಿಕ ವಿಸ್ತೀರ್ಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಕಳೆದ 40 ವರ್ಷಗಳಿಂದ ಪಾಳು ಬಿದ್ದಿದ್ದು, ಜಿಲ್ಲಾಡಳಿತ ಹಾಗೂ ಶಾಸಕರು ತಕ್ಷಣ ಇದಕ್ಕೆ ಕಾಯಕಲ್ಪ ನೀಡಬೇಕು ಎಂದು ರೈತ ಸಂಘದ ಮುಖಂಡರು ಮತ್ತು ಗ್ರಾಮಸ್ಥರು ಒತ್ತಾಯಿಸಿದರು. Market
ಶುಕ್ರವಾರ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಪಾಳು ಬಿದ್ದಿರುವ ಗೋದಾಮುಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ವೀಕ್ಷಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆಯ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಗೌಡ್ರು ಮಾತನಾಡಿ, ಎಪಿಎಂಸಿ ಪ್ರಾರಂಭವಾಗಿ 40 ವರ್ಷ ಕಳೆದರೂ ಇಲ್ಲಿ ಯಾವುದೇ ಕಾರ್ಯಚಟುವಟಿಕೆ ನಡೆದಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಗೋದಾಮುಗಳು, ವಾಣಿಜ್ಯ ಮಳಿಗೆಗಳು ಹಾಗೂ ದನ-ಕುರಿಗಳ ಮಾರುಕಟ್ಟೆ ಹಾಳಾಗಿವೆ. ಕಳೆದ ವರ್ಷದ ಜುಲೈನಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಹಾಗೂ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಅಭಿವೃದ್ಧಿಯ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಈ ಜಾಗವು ದಾವಣಗೆರೆ ಎಪಿಎಂಸಿ ವ್ಯಾಪ್ತಿಗೆ ಒಳಪಟ್ಟಿದ್ದು, ಜಿಲ್ಲಾಧಿಕಾರಿಗಳು ಇದನ್ನು ಮಾಯಕೊಂಡ ಗ್ರಾಪಂಗೆ ಹಸ್ತಾಂತರಿಸಬೇಕು. ಇಲ್ಲಿನ ಸುಮಾರು 10 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಿ, ಗ್ರಾಮದ ವಸತಿ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಜೋಗಿ ಪ್ರತಾಪ್ ಮಾತನಾಡಿ, ಮಾಯಕೊಂಡ ವಿಧಾನಸಭಾ ಕ್ಷೇತ್ರವಾಗಿ ಹತ್ತಾರು ಶಾಸಕರನ್ನು ಕಂಡಿದ್ದರೂ ಈ ಮಾರುಕಟ್ಟೆಯ ಅಭಿವೃದ್ಧಿಗೆ ಯಾರೂ ಗಮನ ಹರಿಸಿಲ್ಲ. ಇಲ್ಲಿ ಸರ್ಕಾರದ ಬೆಂಬಲ ಬೆಲೆಯಡಿ ಮೆಕ್ಕೆಜೋಳ, ರಾಗಿ, ಅಡಿಕೆ, ಹಣ್ಣು-ತರಕಾರಿ ಖರೀದಿಸುವ ಕೇಂದ್ರಗಳೂ ಆರಂಭವಾಗಿಲ್ಲ. ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲದಂತಾಗಿದೆ ಎಂದರು.
ಜಿಲ್ಲಾ ರೈತ ಮುಖಂಡ ಚಂದ್ರಶೇಖರಪ್ಪ ಮಾತನಾಡಿ, ಮಾಯಕೊಂಡ ಹೋಬಳಿ ಕೇಂದ್ರವಾಗಿದ್ದು, ಇಲ್ಲಿನ ಎಪಿಎಂಸಿ ಆವರಣದಲ್ಲಿ ವ್ಯಾಪಾರ ವಹಿವಾಟು ನಡೆಸದಿದ್ದರೆ, ಕಡು ಬಡವರಿಗೆ ವಸತಿ ನಿರ್ಮಾಣಕ್ಕಾಗಿ ನಿವೇಶನಗಳನ್ನು ಮಾಡಿಕೊಡಲಿ ಎಂದು ತಿಳಿಸಿದರು. ಈ ವೇಳೆ ಮುಖಂಡರಾದ ಬಾಡ ಹನುಮಂತಪ್ಪ, ಪರಶುರಾಮ್, ಮಂಜುನಾಥ್ ಇದ್ದರು.