ಹರಿಹರ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಾಗೃತಿ ಜಾಥಾಕ್ಕೆ ಶಾಸಕ ಬಿ.ಪಿ. ಹರೀಶ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಗುರುಬಸವರಾಜ್, ಡಾ. ಅಬ್ದುಲ್ ಖಾದರ್, ಡಿ. ದುರುಗಪ್ಪ ಇದ್ದರು. Polio 
ದಾವಣಗೆರೆ

ಪೋಲಿಯೋ ಮತ್ತೆ ಮರಳದಿರಲಿ Polio

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಪಿ. ಹರೀಶ್ ಹೇಳಿಕೆ
  • ಜಾಗೃತಿ ಜಾಥಾಕ್ಕೆ ಚಾಲನೆ
  • ಸಾರ್ವಜನಿಕರಿಗೆ ಮಾಹಿತಿ
ಹರಿಹರ: ನಗರದ ಗುರುಭವನದ ಮುಂಭಾಗ ಶನಿವಾರ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಸೇರಿ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಾಗೃತಿ ಜಾಥಾಕ್ಕೆ ಶಾಸಕ ಬಿ.ಪಿ. ಹರೀಶ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ, ಭಾರತ ದೇಶ ಪೋಲಿಯೋಮುಕ್ತ ದೇಶವಾಗಿದ್ದು ಇದನ್ನೇ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಐದು ವರ್ಷದ ಮಗುವಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಬೇಕು ಎಂದು ಸಲಹೆ ನೀಡಿದರು.
ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಇರುವುದರಿಂದ ಆ ದೇಶದಿಂದ ಪೋಲಿಯೋಯುಕ್ತ ಮಗು ನಮ್ಮ ದೇಶಕ್ಕೆ ಬಂದು ಪೋಲಿಯೋ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ತಪ್ಪದೇ ಎಲ್ಲ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸಿ ಎಂದರು.
ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ಮಾತನಾಡಿ, ಪೋಲಿಯೋ ಹಾಕಿಸುವ ಮೂಲಕ ಅಂಗವಿಕಲತೆಯನ್ನು ತಪ್ಪಿಸೋಣ ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ, ಸಿಡಿಪಿಒ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. 5 ವರ್ಷದೊಳಗಿನ ಯಾವುದೇ ಮಗುವೂ ಪೋಲಿಯೋದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಜಾಗೃತಿಯಿಂದ ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಅಬ್ದುಲ್ ಖಾದರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ, ಸಿಡಿಪಿಒ ಪ್ರಿಯದರ್ಶಿನಿ, ಆರೋಗ್ಯ ಇಲಾಖೆಯ ಡಾ. ವಿಶ್ವನಾಥ ಕುಂದಗೋಳಮಠ, ಡಾ. ಕಲ್ಲೇಶ್, ಡಾ. ಕಾವ್ಯಾ, ಎಂ. ಉಮ್ಮಣ್ಣ, ನಾಗರಾಜ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು ಇದ್ದರು.