artist ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಅಧ್ಯಕ್ಷ ರಾ. ವೀರೇಶ್‌ಪ್ರಸಾದ್ ಮಾತನಾಡಿದರು. ಮರೇನಹಳ್ಳಿ ಕುಮಾರ್, ವೃಷಭೇಂದ್ರ, ಬಸವರಾಜ್ ಮತ್ತಿತರರಿದ್ದಾರೆ.
- ಜಗಳೂರು ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೆಗಾ ಈವೆಂಟ್
- 10 ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವ ನಿರೀಕ್ಷೆ
- 21 ಜನ ಮಹಾನ್ ಸಾಧಕರಿಗೆ 'ಕರ್ನಾಟಕ ಪದ್ಮಶ್ರೀ' ಬಿರುದು ಪ್ರದಾನ
ಜಗಳೂರು: ಬಯಲು ಸೀಮೆಯ ಜಗಳೂರು ಪಟ್ಟಣದಲ್ಲಿ ಇದೇ ಮೇ 30 ಮತ್ತು 31 ರಂದು ಇಡೀ ರಾಜ್ಯದ ಗಮನ ಸೆಳೆಯುವಂತಹ 'ರಾಜ್ಯ ಕಲಾವಿದರ ಬೃಹತ್ ಸಾಂಸ್ಕೃತಿಕ ಶಕ್ತಿ ಸಮಾವೇಶ' ಆಯೋಜಿಸಲಾಗಿದೆ. artist
ಪಟ್ಟಣದ ಬಯಲು ರಂಗಮಂದಿರದ ವಿಶಾಲ ಆವರಣದಲ್ಲಿ ನಡೆಯಲಿರುವ ಈ ಐತಿಹಾಸಿಕ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ 10 ಸಾವಿರಕ್ಕೂ ಹೆಚ್ಚು ವಿವಿಧ ರಂಗದ ಕಲಾವಿದರು ಮತ್ತು ಸಾಂಸ್ಕೃತಿಕ ಚಿಂತಕರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ ರಾ. ವೀರೇಶ್‌ಪ್ರಸಾದ್ (ಗುಬ್ಬಿ ವೀರಣ್ಣ) ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಜಗಳೂರು ತಾಲೂಕಿನ ಇತಿಹಾಸದಲ್ಲೇ ಇಂತಹದೊಂದು ಬೃಹತ್ ಸಮಾವೇಶ ಪ್ರಥಮ ಬಾರಿಗೆ ಆಯೋಜನೆಗೊಳ್ಳುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಕಲಾವಿದರ ಒಕ್ಕೂಟದ ಜಂಟಿ ಆಶ್ರಯದಲ್ಲಿ ಕಲೆ ಮತ್ತು ಕಲಾವಿದರ ಹಕ್ಕುಗಳ ಜಾಗೃತಿಗಾಗಿ ಈ ಮೆಗಾ ಸಮಾವೇಶ ಆಯೋಜಿಸಲಾಗಿದೆ" ಎಂದರು.
ಗಣ್ಯಾತಿಗಣ್ಯರ ಸಾಕ್ಷಿಯಾಗಲಿರುವ ಸಾಂಸ್ಕೃತಿಕ ವೇದಿಕೆ
ಮೇ 30 ರಂದು ನಡೆಯುವ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹೊಸಪೇಟೆ ಇಟ್ಟಿಗೆಹೇರಿ ಮಠದ ಮಾತೋಶ್ರೀ ಅನುರಾಧೇಶ್ವರಿ ಅಮ್ಮನವರು ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಸಮಾವೇಶವನ್ನು ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕ ಬಿ. ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಾಧಕ ಕಲಾವಿರಿಗೆ ಬಿರುದು ಪ್ರದಾನ ಮಾಡಲಿದ್ದಾರೆ. ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಯುವ ನಟ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡು ಹಿರಿಯ ಕಲಾವಿರಿಗೆ ಗೌರವ ಸಮರ್ಪಿಸಲಿದ್ದಾರೆ. ಇದೇ ವೇಳೆ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒಕ್ಕೂಟದ ನೂತನ ಯೂಟ್ಯೂಬ್ ಚಾನೆಲ್ ಅನಾವರಣಗೊಳಿಸಲಿದ್ದಾರೆ. ಮಾಜಿ ಶಾಸಕ ಕೃಷ್ಣಾರೆಡ್ಡಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಎಸ್.ವಿ. ರಾಮಚಂದ್ರ, ಎಚ್.ಪಿ. राजेश, ಖ್ಯಾತ ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಶಾಸಕರುಗಳಾದ ಬಿ.ಪಿ. ಹರೀಶ್, ಶಾಂತನಗೌಡ, ಕೆ.ಎಸ್. ಬಸವಂತಪ್ಪ, ಬಸವರಾಜ್ ಶಿವಗಂಗಾ ಸೇರಿದಂತೆ ಹತ್ತಾರು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
21 ಸಾಧಕರಿಗೆ ರಾಜ್ಯ ಮಟ್ಟದ 'ಪದ್ಮಶ್ರೀ' ಬಿರುದು ಗೌರವ
ವಿವಿಧ ಕಲಾ ಪ್ರಕಾರಗಳಲ್ಲಿ ಜೀವಮಾನ ಸಾಧನೆ ಮಾಡಿದ ರಾಜ್ಯದ 21 ಜನ ಶ್ರೇಷ್ಠ ಸಾಧಕರಿಗೆ 'ಕರ್ನಾಟಕ ಜನಪದ ಪದ್ಮಶ್ರೀ', 'ಕರ್ನಾಟಕ ರಂಗ ಪದ್ಮಶ್ರೀ' ಹಾಗೂ 'ಕರ್ನಾಟಕ ಚಿತ್ರ ಪದ್ಮಶ್ರೀ' ಬಿರುದುಗಳನ್ನು ನೀಡಿ ಸನ್ಮಾನಿಸಲಾಗುವುದು. ಜೊತೆಗೆ ಸಮಾವೇಶದಲ್ಲಿ ಭಾಗವಹಿಸುವ ಪ್ರತಿಯೊಂದು ಕಲಾತಂಡ ಹಾಗೂ ಕಲಾವಿದರಿಗೆ ಅಧಿಕೃತ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ವೀರೇಶ್‌ಪ್ರಸಾದ್ ವಿವರಿಸಿದರು.
ಕಲಾತಂಡಗಳ ಭವ್ಯ ಮೆರವಣಿಗೆ
ಒಕ್ಕೂಟದ ಜಿಲ್ಲಾಧ್ಯಕ್ಷ ಮರೇನಹಳ್ಳಿ ಕುಮಾರ್ ಮಾತನಾಡಿ, "ಮೇ 30 ರಂದು ಬೆಳಗ್ಗೆ 10.30 ಕ್ಕೆ ಪಟ್ಟಣದ ಡಾ. ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಅಲ್ಲಿಂದ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಜಾನಪದ ಕಲಾತಂಡಗಳ ಭವ್ಯ 'ಕಲಾ ರಥಯಾತ್ರೆ' ಮತ್ತು ಮೆರವಣಿಗೆ ಸಾಗಲಿದೆ. ನಂತರ ಸಮಾವೇಶದ ಮುಖ್ಯ ವೇದಿಕೆಯಲ್ಲಿ ಕಲಾವಿದರ ಧ್ವಜಾರೋಹಣ ನೆರವೇರಲಿದೆ" ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಲಾವಿದರ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆ ಸುಮಾ, ಪ್ರಧಾನ ಕಾರ್ಯದರ್ಶಿ ನಾಗರತ್ನ, ಸಂಘಟನಾ ಕಾರ್ಯದರ್ಶಿ ವೃಷಭೇಂದ್ರ, ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಸಿರಾ ತಾಲೂಕಾಧ್ಯಕ್ಷ ಬೊಮ್ಮೇಗೌಡ, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಭಾರತಿ, ಯುವ ಘಟಕದ ಜಿಲ್ಲಾಧ್ಯಕ್ಷ ಸಂದೀಪ್ ಉಪಸ್ಥಿತರಿದ್ದರು.