ಕೀಟನಾಶಕ ಹಾಗೂ ರೋಗಬಾಧೆಯಿಂದ ಗುಣಮಟ್ಟ ಕಳೆದುಕೊಂಡಿರುವ ಮಾವು. market 
ದಾವಣಗೆರೆ

ಬಸವಾಪಟ್ಟಣದಲ್ಲಿ ಮಾವಿನ ಇಳುವರಿ ಉತ್ತಮವಾಗಿದ್ದರೂ ದರ ಕುಸಿತ market

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ರೈತರಲ್ಲಿ ಆತಂಕ
  • ಕೀಟಬಾಧೆ ಹಾಗೂ ಗುಣಮಟ್ಟದ ಕೊರತೆ
  • ಬೇಡಿಕೆ ಕುಸಿತ
  • ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮನವಿ
ಎಂ.ಬಿ. ರಾಜಪ್ಪ ಬಸವಾಪಟ್ಟಣ
ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ಮಾವಿನ ಬೆಳೆ ಉತ್ತಮವಾಗಿ ಬಂದಿದ್ದರೂ, ಮಾರುಕಟ್ಟೆಯಲ್ಲಿ ದಿಢೀರ್ ದರ ಕುಸಿತ ಕಂಡುಬಂದಿರುವುದು ಮಾವು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. market
ಹೋಬಳಿ ವ್ಯಾಪ್ತಿಯ ಸುಮಾರು 75 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿದ್ದು, ಈ ಬಾರಿ ಅನುಕೂಲಕರ ಹವಾಮಾನದಿಂದಾಗಿ ಇಳುವರಿ ಹೆಚ್ಚಾಗಿದೆ. ಆದರೆ, ನಿರೀಕ್ಷಿತ ಮಾರುಕಟ್ಟೆ ಬೆಲೆ ಸಿಗುತ್ತಿಲ್ಲ.
ಈ ಬಾರಿ ಮರಗಳಲ್ಲಿ ಉತ್ತಮವಾಗಿ ಹೂ ಬಿಟ್ಟು, ಇಳುವರಿ ಚೆನ್ನಾಗಿ ಬಂದಿತ್ತು. ಆದರೆ, ರೋಗಬಾಧೆ ಮತ್ತು ಕೀಟಗಳ ಹಾವಳಿಯಿಂದಾಗಿ ಉತ್ತಮ ಗುಣಮಟ್ಟದ ಹಣ್ಣುಗಳ ಪ್ರಮಾಣ ಕಡಿಮೆಯಾಗಿದೆ. ಮಾರುಕಟ್ಟೆಗೆ ರವಾನಿಸುವಷ್ಟು ದರ್ಜೆಯ ಕಾಯಿಗಳು ಇಲ್ಲದ ಕಾರಣ ವ್ಯಾಪಾರಿಗಳು ತೀರಾ ಕಡಿಮೆ ಬೆಲೆಗೆ ಬೇಡಿಕೆ ಇಡುತ್ತಿದ್ದಾರೆ. ಕಳೆದ ವರ್ಷ ಇದೇ ಹಣ್ಣನ್ನು ಕೆಜಿಗೆ 40 ರಿಂದ 60 ರೂ.ವರೆಗೆ ಮಾರಾಟ ಮಾಡಿದ್ದೆವು ಎಂದು ಸ್ಥಳೀಯ ರೈತ ನಾಗರಾಜಪ್ಪ ಹೇಳಿದರು.
ಕುಸಿದ ರಫ್ತು ಮಾರುಕಟ್ಟೆ: ಹಿಂದಿನ ವರ್ಷಗಳಲ್ಲಿ ಇಲ್ಲಿನ ಮಾವಿನ ಹಣ್ಣುಗಳು ಪುಣೆ ಮತ್ತು ಮುಂಬೈ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಗಣೆಯಾಗುತ್ತಿದ್ದವು. ಆದರೆ ಈ ಬಾರಿ ಮಹಾರಾಷ್ಟ್ರ ಸೇರಿ ದೇಶದ ಇತರ ಭಾಗಗಳಲ್ಲೇ ಮಾವಿನ ಪೂರೈಕೆ ಹೆಚ್ಚಾಗಿದೆ. ಹೀಗಾಗಿ ಹೊರರಾಜ್ಯಗಳ ಮಾರುಕಟ್ಟೆಯಲ್ಲಿ ನಮ್ಮ ಭಾಗದ ಹಣ್ಣುಗಳಿಗೆ ಬೇಡಿಕೆ ಕುಸಿದಿದೆ ಎಂದು ಮಾವು ವ್ಯಾಪಾರಿ ಇಕ್ಬಾಲ್ ಹೇಳಿದ್ದಾರೆ.
ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ಇಳುವರಿ ಬಂದಿರುವುದು, ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯ ಕೊರತೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಕುಸಿದಿರುವುದು ಈ ಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ.
ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಮಾವು ಬೆಳೆಗೆ ಬೆಂಬಲ ದರ ಘೋಷಿಸಬೇಕು. ಗ್ರಾಹಕರು ಮತ್ತು ರೈತರ ನಡುವೆ ನೇರ ಖರೀದಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಹಣ್ಣುಗಳು ಹಾಳಾಗುವುದನ್ನು ತಡೆಯಲು ಪ್ರಾದೇಶಿಕವಾಗಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಿಸಬೇಕು. ಮಾವಿನ ಪಲ್ಪ್, ಜ್ಯೂಸ್ ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳ ಸಂಸ್ಕಾರಣಾ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಉತ್ತಮ ಫಸಲು ಬಂದಿದ್ದರೂ ಸೂಕ್ತ ಬೆಲೆ ಸಿಗದೆ ಬಸವಾಪಟ್ಟಣ ಭಾಗದ ಮಾವು ಬೆಳೆಗಾರರು ಕಂಗಾಲಾಗಿದ್ದು, ತೋಟಗಾರಿಕಾ ಇಲಾಖೆ ಹಾಗೂ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ದಿನೇ ದಿನೆ ಹೆಚ್ಚುತ್ತಿದೆ.
ಮಧ್ಯವರ್ತಿಗಳ ಹಾವಳಿ: ಪ್ರಸ್ತುತ ಮಾರುಕಟ್ಟೆಯಲ್ಲಿ ಸೂಕ್ತ ಮಾಹಿತಿ ಇಲ್ಲದಿರುವುದು ಮತ್ತು ನೇರ ಖರೀದಿ ವ್ಯವಸ್ಥೆ ಇಲ್ಲದಿರುವುದನ್ನು ಮಧ್ಯವರ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರೈತರ ತೋಟದಲ್ಲೇ ವ್ಯಾಪಾರಿಗಳು ಪ್ರತಿ ಕೆಜಿಗೆ ಕೇವಲ 15 ರಿಂದ 20 ರೂ. ರಂತೆ ಮಾವನ್ನು ಖರೀದಿಸುತ್ತಿದ್ದಾರೆ. ಆದರೆ, ಇದೇ ಹಣ್ಣುಗಳನ್ನು ನಗರ ಪ್ರದೇಶಗಳಲ್ಲಿ ಗ್ರಾಹಕರಿಗೆ 100 ರೂ. ಗೆ 2 ಕೆಜಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳು ಭಾರಿ ಲಾಭ ಮಾಡಿಕೊಳ್ಳುತ್ತಿದ್ದರೆ, ರೈತರಿಗೆ ಮಾತ್ರ ಹಾಕಿದ ಬಂಡವಾಳವೂ ವಾಪಸ್ ಸಿಗುತ್ತಿಲ್ಲ.
"

ಹಿಂದಿನ ವರ್ಷಗಳಲ್ಲಿ ಇಲ್ಲಿನ ಮಾವು ಹೊರರಾಜ್ಯ ಹಾಗೂ ವಿದೇಶಿ ಮಾರುಕಟ್ಟೆಗಳಿಗೆ ಹೋಗುತ್ತಿತ್ತು. ಆದರೆ ಈ ಬಾರಿ ಸಾಗಾಟ ವೆಚ್ಚದ ಹೆಚ್ಚಳ, ಬೇಡಿಕೆ ಕುಸಿತ ಹಾಗೂ ಮಧ್ಯಪ್ರಾಚ್ಯ ಭಾಗದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ರಫ್ತು ಪ್ರಕ್ರಿಯೆ ಮಂದಗತಿಯಲ್ಲಿದೆ. ಪರಿಣಾಮವಾಗಿ, ಸ್ಥಳೀಯ ಮಾರುಕಟ್ಟೆಯಲ್ಲೇ ಹೆಚ್ಚಿನ ಪ್ರಮಾಣದ ಹಣ್ಣುಗಳು ಉಳಿದುಕೊಂಡು ದರ ಕುಸಿತಕ್ಕೆ ಕಾರಣವಾಗಿದೆ.

— ಶ್ರೀಕಾಂತ್ ಸಹಾಯಕ ತೋಟಗಾರಿಕಾ ನಿರ್ದೇಶಕ.