ದಾವಣಗೆರೆಯಲ್ಲಿ ಸೋಮವಾರ ‘ಪಾರ್ವತಿ’ ಕಾರ್ಯಕ್ರಮವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಡಾ. ಅರುಂಧತಿ ಕುಲಕರ್ಣಿ, ಕಿರುವಾಡಿ ಗಿರಿಜಮ್ಮ, ಜೆ.ಎಸ್. ವನಿತಾ, ಡಾ. ಶುಕ್ಲಾ ಶೆಟ್ಟಿ, ಕಮಲಾ ಸೊಪ್ಪಿನ್, ಡಾ. ಪುಷ್ಪಲತಾ ನಾಡಿಗ್, ಎಂ.ಪಿ. ರೂಪಶ್ರೀ, ಡಾ. ಎಚ್.ಪಿ. ವಿನುತಾ ಇದ್ದರು. 
ದಾವಣಗೆರೆ

ಆರೋಗ್ಯ, ಆತ್ಮವಿಕಾಸಕ್ಕೆ ಸಮಯ ಮೀಸಲಿಡಿ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ದಾವಣಗೆರೆ : ಮಹಿಳೆಯರು ನಿತ್ಯದ ಜವಾಬ್ದಾರಿಗಳ ನಡುವೆಯೂ ಆರೋಗ್ಯ, ಮನಶಾಂತಿ ಹಾಗೂ ವ್ಯಕ್ತಿತ್ವ ಅಭಿವೃದ್ಧಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಬಾಪೂಜಿ ವಿದ್ಯಾಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಬಾಪೂಜಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಪಾರ್ವತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರ ಏಳಿಗೆ ಬಯಸುವ ಮಹಿಳೆಯರು ಕುಟುಂಬ ಹಾಗೂ ಸಮಾಜದ ಒಳಿತಿಗಾಗಿ ನಿರಂತರವಾಗಿ ಶ್ರಮಿಸುತ್ತಾರೆ. ಆದರೆ ಈ ಜವಾಬ್ದಾರಿಗಳ ನಡುವೆಯೂ ಮಹಿಳೆಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಮಹಿಳೆಯರು ಈ ಲಸಿಕೆ ಪಡೆಯಬೇಕು. ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವಲ್ಲಿ ಈ ಲಸಿಕೆ ಪರಿಣಾಮಕಾರಿ ಎಂದು ಹೇಳಿದರು.
ಬಾಪೂಜಿ ವಿದ್ಯಾಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಮಹಿಳಾ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವ ಯೋಜನೆಯಿದ್ದು, ಜೂನ್ ಅಂತ್ಯದೊಳಗೆ ಈ ಕಾರ್ಯ ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.
ಮಹಿಳಾ ಸಂಸದೆಯಾಗಿ ಮಹಿಳೆಯರ ಪರವಾಗಿ ಅದರಲ್ಲಿಯೂ ಬೀಡಿ ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೌಲಭ್ಯಗಳ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಮತ್ತು ಕಲಿಕೆ ನಿರಂತರವಾಗಿರಬೇಕು. ಮಹಿಳೆಯರು ಯಾವುದೇ ಸವಾಲು ಬಂದರೂ ಧೈರ್ಯದಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆಗಾರಿಕೆ ಕುಟುಂಬದ ಮಹಿಳೆಯರ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಪೂಜಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಬಿಇಎ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಜೆ.ಎಸ್. ವನಿತಾ, ಡಾ. ಶುಕ್ಲಾ ಶೆಟ್ಟಿ, ಕಮಲಾ ಸೊಪ್ಪಿನ್, ಡಾ. ಪುಷ್ಪಲತಾ ನಾಡಿಗ್, ಎಂ.ಪಿ. ರೂಪಶ್ರೀ ಹಾಗೂ ಡಾ. ಎಚ್.ಪಿ. ವಿನುತಾ ಇದ್ದರು.
ಮೌನ ಸಾಕು, ಹೋರಾಡುವ ಮನಸ್ಥಿತಿ ಬೇಕು
ಮಹಿಳೆಯರು ಮೌನ ಮುರಿದು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಅಗತ್ಯವಿದೆ ಎಂದು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯ ಡೀನ್ ಡಾ. ಅರುಂಧತಿ ಕುಲಕರ್ಣಿ ಹೇಳಿದರು.
ಭ್ರೂಣಹತ್ಯೆ, ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ, ಹಿಂಸೆ ಮುಂತಾದ ಸಂಕಷ್ಟಗಳನ್ನು ಸ್ತ್ರೀಯರು ಮೌನವಾಗಿ ಸಹಿಸಿಕೊಂಡು ಬರುತ್ತಿದ್ದಾರೆ. ಈ ಅಸುರಕ್ಷಿತ ವಾತಾವರಣದಿಂದ ಕಳಚಿಕೊಂಡು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕು ಎಂದು ಸಲಹೆ ನೀಡಿದರು.
ಕಾನೂನು ಒಂದೇ ಎಲ್ಲದಕ್ಕೂ ಪರಿಹಾರವಲ್ಲ. ಮಹಿಳೆಯರ ಮನಸ್ಥಿತಿ ಬದಲಾಗದೆ ಪರಿಸ್ಥಿತಿಯಲ್ಲಿ ಸುಧಾರಣೆ ಆಗುವುದಿಲ್ಲ. ಬಹಳಷ್ಟು ಕಾನೂನುಗಳಿವೆ, ಆದರೆ ಅವುಗಳ ಅನುಷ್ಠಾನದಲ್ಲಿ ಎಡವಿದ್ದೇವೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ದೇವತೆಯ ಪಟ್ಟ ನೀಡಲಾಗಿದೆ, ಆದರೆ ದೌರ್ಜನ್ಯಗಳು ನಿಲ್ಲದಿರುವುದು ವಿರೋಧಾಭಾಸ. ದೇವತೆಯ ಪಟ್ಟವೂ ಬೇಡ, ದೌರ್ಜನ್ಯವೂ ಬೇಡ, ಆಕೆಯನ್ನೂ ಮನುಷ್ಯಳು ಎಂದು ಭಾವಿಸಿದರೆ ಸಾಕು ಎಂದು ಅಭಿಪ್ರಾಯಪಟ್ಟರು.
ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಬೂದಿ ಮುಚ್ಚಿದ ಕೆಂಡದಂತಿರುತ್ತದೆ, ಪೆಡಂಭೂತವಾಗಿ ಕಾಡುತ್ತದೆ. ದೌರ್ಜನ್ಯಗಳು ನಡೆದಾಗ ದೂರು ನೀಡಲು ಹಿಂಜರಿಕೆ ಬೇಡ ಎಂದು ಕಿವಿಮಾತು ಹೇಳಿದರು.
ಬಾಲ್ಯವಿವಾಹ, ಗರ್ಭಪಾತ, ವಿವಾಹ ವಿಚ್ಛೇದನ, ವರದಕ್ಷಿಣೆ ತಡೆ, ಮನೆಯಲ್ಲಿನ ದೌರ್ಜನ್ಯ, ಆಸ್ತಿ ಹಕ್ಕು ಹೀಗೆ ಅನೇಕ ವಿಷಯಗಳ ಬಗ್ಗೆ ಕಾನೂನುಗಳಿವೆ. ಯಾವುದು ಸರಿ, ತಪ್ಪು ಎಂಬುದನ್ನು ವಿವರಿಸಲಾಗಿದೆ. ಇದೆಲ್ಲದರ ಅರಿವು ಮಹಿಳೆಯರಿಗೆ ಇರಬೇಕು ಎಂದು ತಿಳಿಸಿದರು.