ಹರಿಹರ ನಗರದ ಕುಂಬಾರ ಓಣಿ ಸಮೀಪದ ರಾಜ ಕಾಲುವೆ ಮಳೆ ನೀರಿನಿಂದ ತುಂಬಿದ್ದು ಸ್ಥಳಕ್ಕೆ ಶಾಸಕ ಬಿ.ಪಿ.ಹರೀಶ್ ಭೇಟಿ ನೀಡಿ ಪರಿಶೀಲಿಸಿದರು.harihara 
ದಾವಣಗೆರೆ

ಕೆರೆಯಂತಾದ ಪ್ರಮುಖ ರಸ್ತೆಗಳು harihara

ಪ್ರಮುಖ ಮುಖ್ಯಾಂಶಗಳು

  • ಕೆರೆಯಂತಾದ ಪ್ರಮುಖ ರಸ್ತೆಗಳು
  • ವರುಣನ ಆರ್ಭಟಕ್ಕೆ ಅಲ್ಲಲ್ಲಿ ನಿಂತ ನೀರು
  • ವಾಹನ ಸವಾರರು ಪರದಾಟ
ಹರಿಹರ: ಶುಕ್ರವಾರ ಬೆಳಗ್ಗೆ ಸುರಿದ ಭಾರಿ ಮಳೆಯ ಆರ್ಭಟಕ್ಕೆ ಚರಂಡಿ ನೀರು ರಸ್ತೆಯ ಮೇಲೆ ಹರಿದು ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದ ದೃಶ್ಯ ನಗರದಲ್ಲಿ ಕಂಡು ಬಂತು.
ಬೆಳಗ್ಗೆ ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಗಾಳಿ ಸಹಿತ ಸುರಿದ ಧಾರಾಕಾರ ಮಳೆಯು ಅಧಿಕಾರಿಗಳ ಕಾರ್ಯ ವೈಖರಿಯನ್ನು ಪ್ರಶ್ನಿಸುವಂತಿತ್ತು. ಸರಿಯಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನಲೆ ಮಳೆ ನೀರು ಮತ್ತು ಕಸಕಡ್ಡಿಗಳಿಂದ ಒಳ ಚರಂಡಿ ಸಂಪೂರ್ಣವಾಗಿ ಬ್ಲಾಕ್ ಆಗಿತ್ತು.
ರಸ್ತೆಯ ತುಂಬೆಲ್ಲಾ ಚರಂಡಿ ನೀರು ಹಾಗೂ ಮಳೆಯ ನೀರು ಆವರಿಸಿಕೊಂಡ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಅಲ್ಲದೆ ಹರಪನಹಳ್ಳಿ ರಸ್ತೆಯ ರೈಲ್ವೆ ಸೇತುವೆ ಕೆಳ ಭಾಗದ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು.
ಬೆಂಕಿನಗರ ಸೇರಿ ಇತರೆಡೆ ಕೆಲ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಮನೆಗೆ ನುಗ್ಗಿದ್ದ ಮಳೆಯ ನೀರನ್ನು ಹೊರ ಹಾಕಿದರು.
ಶಾಸಕ ಬಿ.ಪಿ.ಹರೀಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ನಗರದ ಮಳೆಯಿಂದ ತೊಂದರೆಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರೀಶಿಲನೆ ಮಾಡಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು ಸಮಸ್ಯೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ನಗರದ ಹಳೇ ಕೋರ್ಟ್ ಸಮೀಪದಲ್ಲಿರುವ ಹೋಲ್‌ಸೇಲ್ ತರಕಾರಿ ವ್ಯಾಪಾರಸ್ಥರು ಪಕ್ಕದ ಗಾಂಧಿ ಮೈದಾನದಿಂದ ಮಳೆ ನೀರು ನೇರವಾಗಿ ಮಾರುಕಟ್ಟೆಗೆ ಬರುತ್ತದೆ, ಇದರಿಂದ ತೊಂದರೆಯಾಗುತ್ತದೆ. ಆದಕಾರಣ ಗಾಂಧಿ ಮೈದಾನ ಪಶ್ಚಿಮ ಭಾಗದಲ್ಲಿ ಚರಂಡಿ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದರು.
ಈ ವೇಳೆ ನಗರಸಭೆ ಪೌರಾಯುಕ್ತೆ ಈರಮ್ಮ, ಎಇಇ ವಿನಯ್‌ಕುಮಾರ್ ಸಿಬ್ಬಂದಿ ಇದ್ದರು.