ಮಾಯಕೊಂಡ ಗ್ರಾಮದೊಳಗೆ ಹಾದುಹೋಗಿರುವ ಅಭಿವೃದ್ಧಿ ಕಾಣದ ಮುಖ್ಯರಸ್ತೆ. road development 
ದಾವಣಗೆರೆ

ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ

ಪ್ರಮುಖ ಮುಖ್ಯಾಂಶಗಳು

  • 7.5 ಕೋಟಿ ಅನುದಾನ ಮಂಜೂರು
  • ಆರೂವರೆ ವರ್ಷ ಕಳೆದರೂ ಅಪೂರ್ಣ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದಾವಣಗೆರೆ ತಾಲೂಕಿನ ಮಾಯಕೊಂಡ ಮೂಲಕ ಹಾದುಹೋಗಿರುವ ದಾವಣಗೆರೆ - ಹೊಸದುರ್ಗ ಜಿಲ್ಲಾ ಮುಖ್ಯರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ಆರೂವರೆ ವರ್ಷ ಕಳೆದರೂ ಅರ್ಧಕ್ಕೆ ನಿಂತಿದೆ. ಕಾಮಗಾರಿ ಮುಗಿಯುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ.
ಮಾಯಕೊಂಡವು ಹೋಬಳಿ ಕೇಂದ್ರ ವಾಗಿದ್ದು, ನಾಡ ಕಚೇರಿ, ಕೆನರಾ ಬ್ಯಾಂಕ್, ಸರ್ಕಾರಿ ಪದವಿ, ಐಟಿಐ ಹಾಗೂ ಕೆಪಿಎಸ್ ಶಾಲೆಗಳು ಇಲ್ಲಿವೆ. ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯ ಗ್ರಾಮಕ್ಕೆ ಬಂದು ಹೋಗುತ್ತಾರೆ. ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಬಸ್‌ಗಳು ಜನರನ್ನು ತುಂಬಿಕೊಂಡು ವಾಲಾಡುತ್ತ ಸಂಚರಿಸುತ್ತವೆ. ಮಾಜಿ ಶಾಸಕ ಪ್ರೊ. ಎನ್. ಲಿಂಗಣ್ಣ ಮುಖ್ಯರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಜತೆಗೆ ದ್ವಿಪಥ ರಸ್ತೆ ಮಾಡುವ ಉದ್ದೇಶದಿಂದ ಶಾಸಕರ ಅನುದಾನದಲ್ಲಿ 7.50ಕೋಟಿ ರೂ. ಮಂಜೂರು ಮಾಡಿದ್ದರು. ಸುಮಾರು ಆರೂವರೆ ವರ್ಷಗಳಿಂದ ಕುಂಟುತ್ತಾ ಸಾಗಿದ ಕಾಮಗಾರಿ ಇಲ್ಲಿಯವರೆಗೂ ಸಂಪೂರ್ಣವಾಗಿ ಮತ್ತು ಗುಣಾತ್ಮಕವಾಗಿ ಆಗಿಲ್ಲ.
2020ರ ಫೆಬ್ರವರಿಯಲ್ಲಿ 7.50ಕೋಟಿ ರೂ ವೆಚ್ಚದ 1400 ಮೀ. ಉದ್ದನೆಯ ರಸ್ತೆ ವಿಸ್ತರಣಾ ಮತ್ತು ಅಭಿವೃದ್ಧಿ ಕಾಮಗಾರಿಗೆ ಹಿಂದಿನ ಸಂಸದ ಜಿಎಂ ಸಿದ್ದೇಶ್ವರ್ ಹಾಗೂ ಹಿಂದಿನ ಶಾಸಕ ಪ್ರೊ. ಎನ್.ಲಿಂಗಣ್ಣ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಇನ್ನೂ ಕಾಮಗಾರಿ ಆರಂಭದ ಹಂತದಲ್ಲೇ ಇದೆ.

ಕಾಮಗಾರಿ ಕಳಪೆ

ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಮೆಟ್ಲಿಂಗ್, ಡಾಂಬರೀಕರಣ, ಮತ್ತು ರಸ್ತೆಪಕ್ಕದ ಚರಂಡಿ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆದಿಲ್ಲ. ಫುಟ್‌ಪಾತ್ ನಿರ್ಮಾಣ ಮತ್ತು ರಸ್ತೆಯಲ್ಲಿನ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಡೆದಾಗ ರಸ್ತೆ ಅಗೆದು ಸರಿಯಾಗಿ ಮುಚ್ಚಿಲ್ಲ. ರಸ್ತೆ ಕಾಮಗಾರಿ ಮಾತ್ರ ಇಲ್ಲಿಯವರೆಗೂ ಸಂಪೂರ್ಣಗೊಂಡಿಲ್ಲ. ಏಳೂವರೆ ಕೋಟಿ ಹಣ ಎಲ್ಲಿ ಹೋಯಿತು. ಇದಕ್ಕೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪೂರ್ಣಗೊಳಿಸಿ

ಕಳೆದ ಆರು ತಿಂಗಳಲ್ಲಿ ಜಿಲ್ಲಾಧಿಕಅರಿ ಗಂಗಾಧರಸ್ವಾಮಿ ಎರಡು ಬಾರಿ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಮುಖ್ಯರಸ್ತೆಯ ಪಕ್ಕದಲ್ಲಿ 10 ರಿಂದ 12 ಮನೆಗಳಿವೆ. ರಸ್ತೆ ಕಾಮಗಾರಿಗೆ ಈ ಮನೆಗಳ ಅರ್ಧಭಾಗ ಹೋಗುತ್ತಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಮಾಡಿ ಕೊಡಬೇಕು. ಜಿಲ್ಲಾಧಿಕಾರಿ ಹಾಗೂ ಶಾಸಕರು ಗಮನಹರಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
"

ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಂಜಿನಿಯರ್‌ಗಳೊಂದಿಗೆ ಮಾತುಕತೆ ನಡೆಸಿ ನನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ತಕ್ಷಣ ಮುಗಿಸುವಂತೆ ಸೂಚನೆ ನೀಡಲಾಗುವುದು.

— ಕೆಎಸ್ ಬಸವಂತಪ್ಪ, ಶಾಸಕರು, ಮಾಯಕೊಂಡ ಕ್ಷೇತ್ರ.