ಕೆಪಿಎಸ್ ಪ್ರೌಢಶಾಲೆಯ ಪ್ರತಿ ತರಗತಿಗಳಿಗೂ ನ್ಯಾಯಾಧೀಶರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. Visit of the judge
- ವಿವಿಧ ವಿಭಾಗಳ ಕಟ್ಟಡಗಳ ವೀಕ್ಷಣೆ
- ಕುಂದುಕೊರತೆಗಳ ಪರಿಶೀಲನೆ
- ವಿಜಯವಾಣಿ ವರದಿಗೆ ಹೈಕೋರ್ಟ್ ಪ್ರತಿಕ್ರಿಯೆ
ಮಾಯಕೊಂಡ: ಮಾಯಕೊಂಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ್ ದಿಢೀರ್ ಭೇಟಿ ನೀಡಿದರು.
ನ.23 ರಂದು ವಿಜಯವಾಣಿ ದಿನಪತ್ರಿಕೆಯಲ್ಲಿ 'ಶೌಚಗೃಹದ ಎದುರು ಉದ್ದನೆಯ ಸರತಿ ಸಾಲು, ವಿದ್ಯಾರ್ಥಿನಿಯರ ಗೋಳು' ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿ ಶಾಲೆಯ ಕುಂದುಕೊರತೆಗಳ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.
ಪ್ರೌಢಶಾಲಾ ವಿಭಾಗದ ಹಳೆಯ ಕಟ್ಟಡ, ಪಿಯು ಕಾಲೇಜು, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳನ್ನು ನ್ಯಾಯಾಧೀಶರು ವೀಕ್ಷಿಸಿದರು. ಪ್ರತಿ ತರಗತಿಗಳಿಗೂ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ನಂತರ ಎಲ್ಲ ಪ್ರಾಚಾರ್ಯರು, ಮುಖ್ಯಶಿಕ್ಷಕರು ಸೇರಿ ಎಲ್ಲ ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಅಗತ್ಯ ಶೌಚಗೃಹ, ಶುದ್ಧ ಕುಡಿಯುವ ನೀರು, ಪೀಠೋಪಕರಣಗಳು, ಬಿಸಿಯೂಟ ಇತರ ಮೂಲಸೌಕರ್ಯ ಮತ್ತು ಕುಂದು ಕೊರತೆಗಳ ಕುರಿತು ಮಾಹಿತಿ ಪಡೆದರು. ಬಳಿಕ ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು ಬಿಸಿಯೂಟ ಸವಿದರು.
ನಂತರ ಮಾತನಾಡಿ, ಶಾಲೆಯ ಸಮಗ್ರ ಮಾಹಿತಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅದರಂತೆ ವರದಿ ಪಡೆದು ಶಾಲೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಪದವಿ ಕಾಲೇಜು ಪ್ರಾಚಾರ್ಯೆ ಡಾ. ತ್ರಿವೇಣಿ, ಕೆಪಿಎಸ್ ಪ್ರಾಚಾರ್ಯ ಡಾ.ಸಿ. ಬಸವರಾಜಪ್ಪ, ಉಪ ಪ್ರಾಚಾರ್ಯ ಟಿ.ಎಸ್. ನಾಗರಾಜ್, ಹಿರಿಯ ಶಿಕ್ಷಕ ಪಿ. ನಾಗರಾಜಪ್ಪ, ಎಚ್.ಪಿ. ರವಿಕುಮಾರ್, ಉಪನ್ಯಾಸಕರಾದ ಸುರೇಶ್, ಶಿಕ್ಷಕರಾದ ಕಲ್ಲೇಶ್, ಶಶಿರಾಜ್, ಅಂಜಿನಮ್ಮ, ಡಿಸಿಪಿಒ ಕಚೇರಿಯ ಚಂದ್ರಶೇಖರ್, ಕಾನೂನು ವಿದ್ಯಾರ್ಥಿ ತ್ಯಾಗರಾಜ್ ಮತ್ತಿತರರು ಇದ್ದರು.
ಇಲ್ಲಿನ 13 ಎಕರೆ ಪ್ರದೇಶದಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯು ವಿಭಾಗಗಳು ನಡೆಯುತ್ತಿವೆ. ಪ್ರಾಥಮಿಕ ಮತ್ತು ಪಿಯು ವಿಭಾಗಗಳಿಗೆ ನೂತನ, ಸುಸಜ್ಜಿತ ಕಟ್ಟಡಗಳಿವೆ, ಆದರೆ ಪ್ರೌಢಶಾಲೆಯ ಕಟ್ಟಡವು 75 ವರ್ಷಗಳ ಹಳೆಯದಾಗಿದ್ದು, ತುರ್ತಾಗಿ ನೂತನ ಕಟ್ಟಡದ ಅವಶ್ಯಕತೆ ಇದೆ. ಹಲವು ಮೂಲಸೌಕರ್ಯಗಳ ಕೊರತೆ ಇವೆ.