ಪ್ರೌಢಶಾಲಾ ವಿಭಾಗಕ್ಕೆ ಇರುವ ಚಿಕ್ಕ ಶೌಚಗೃಹದ ಮುಂದೆ ವಿದ್ಯಾರ್ಥಿನಿಯರು ಸಾಲುಗಟ್ಟಿ ನಿಂತಿರುವುದು.
- ಗಂಡು ಮಕ್ಕಳಿಗೆ ಬಯಲೇ ಗತಿ
- ಮೂಲಸೌಕರ್ಯ ಸುಧಾರಣೆಯಲ್ಲಿ ವೈಫಲ್ಯ
- ಮಾಯಕೊಂಡ ಕೆಪಿಎಸ್ ಸ್ಥಿತಿ ಶೋಚನೀಯ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಮಾಯಕೊಂಡ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಶೌಚಗೃಹದ ಕೊರತೆ ಇದೆ. 185 ವಿದ್ಯಾರ್ಥಿನಿಯರಿಗೆ ಒಂದೇ ಚಿಕ್ಕ ಶೌಚಗೃಹ ಇರುವುದರಿಂದ ದಿನವೂ ಸರತಿ ಸಾಲಿನಲ್ಲಿ ನಿಂತು ಶೌಚಕ್ಕೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗಂಡು ಮಕ್ಕಳಿಗೆ ಬಯಲಲ್ಲಿ ಶೌಚ ಮಾಡುವ ಬಾಧ್ಯತೆ ಎದುರಾಗಿದ್ದು ಶಾಲೆಯ ಮೂಲಸೌಕರ್ಯಗಳ ಪರಿಸ್ಥಿತಿ ಗಂಭೀರವಾಗಿದೆ.
ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 353 ವಿದ್ಯಾರ್ಥಿಗಳಿದ್ದಾರೆ. ಇಷ್ಟು ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಒಂದು ಸಣ್ಣ ಶೌಚಗೃಹ ಮಾತ್ರ ಇಲ್ಲ. ಶೌಚಕ್ಕೆ ಹೋಗಲು 20 ರಿಂದ 30 ನಿಮಿಷದವರೆಗೆ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಸಾಮಾನ್ಯವಾಗಿದೆ.
ಶೌಚಗೃಹಗಳ ಕೊರತೆ, ಕುಡಿಯುವ ನೀರಿನ ಅನಿಶ್ಚಿತತೆ, ಅಗತ್ಯ ಕೊಠಡಿಗಳ ಕೊರತೆ, ಡೆಸ್ಕ್- ಬೆಂಚ್ ಅಭಾವ, ಕಳಪೆ ಗುಣಮಟ್ಟದ ಮಧ್ಯಾಹ್ನ ಬಿಸಿಯೂಟ ಇವುಗಳೆಲ್ಲ ಸರ್ಕಾರಿ ಶಾಲೆಗಳಲ್ಲಿರುವ ಸಾಮಾನ್ಯ ಸಮಸ್ಯೆಗಳಾಗಿವೆ. ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷೃದಿಂದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಈ ಮಟ್ಟಕ್ಕೆ ಹದಗೆಡುತ್ತಿದೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಮನವಿ
ಪ್ರೌಢಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹೈಟೆಕ್ ಶೌಚಗೃಹ ನಿರ್ಮಿಸಲು ಜುಲೈ ತಿಂಗಳಲ್ಲಿ ಶಾಲೆ ವತಿಯಿಂದ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಗ್ರಾಪಂ ಈ ಬಗ್ಗೆ ಗಮನಹರಿಸಿ ಕೂಡಲೇ ಶೌಚಗೃಹ ಮತ್ತ ಸಮರ್ಪಕ ನೀರಿನ ಪೂರೈಕೆ ಮಾಡಬೇಕು ಎಂದು ಶಿಕ್ಷಕರು ಮನವಿ ಮಾಡಿದ್ದಾರೆ. ಪ್ರೌಢಶಾಲಾ ವಿಭಾಗಕ್ಕೆ ತುರ್ತು ಅಗತ್ಯವಿರುವ ಹೈಟೆಕ್ ಶೌಚಗೃಹ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲು ಶಾಸಕರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ವಿದ್ಯಾರ್ಥಿನಿ ಯರಿಗೆ ಇರುವ ಶೌಚಗೃಹ ಚಿಕ್ಕದು. ಹೀಗಾಗಿ ಸಾಲಿನಲ್ಲಿ ನಿಂತು ಶೌಚಕ್ಕೆ ಹೋಗಬೇಕಾ ಗಿದೆ. ಸರ್ಕಾರ ಕೂಡಲೇ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.
8, 9 ಮತ್ತು 10ನೇ ತರಗತಿಯ ಎಲ್ಲ ವಿದ್ಯಾರ್ಥಿನಿಯರಿಗೆ ಒಂದೇ ಶೌಚಗೃಹ. ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಸಾಲಿನಲ್ಲಿ ನಿಂತಿರಬೇಕಾಗುತ್ತದೆ. ಸರ್ಕಾರ ಹೈಟೆಕ್ ಶೌಚಗೃಹ ನಿರ್ಮಿಸಿದರೆ ಬಹಳ ಅನುಕೂಲವಾಗುತ್ತದೆ.