peanut: ಮಾಯಕೊಂಡ ಹೋಬಳಿ ಹುಚ್ಚವನಹಳ್ಳಿ ಗ್ರಾಮದಲ್ಲಿ ಸುಣ್ಣ ಲೇಪನ ಮಾಡಿರುವ ಅಡಕೆ ಮರಗಳು. 
ದಾವಣಗೆರೆ

peanut: ಮಾಯಕೊಂಡದಲ್ಲಿ ಅಡಕೆ ಮರಗಳಿಗೆ ಸುಣ್ಣ ಲೇಪನ

ಪ್ರಮುಖ ಮುಖ್ಯಾಂಶಗಳು

  • ಮಾಯಕೊಂಡ, ಆನಗೋಡು ಹೋಬಳಿಯಲ್ಲಿ ಕಾರ್ಯ
  • ಬಿಸಿಲು, ಗಾಳಿಯಿಂದ ಸಂರಕ್ಷಣೆ
  • ಸುಣ್ಣದೊಂದಿಗೆ ಬೆಲ್ಲ ಮತ್ತು ಮೈದಾ ಹಿಟ್ಟಿನ ಮಿಶ್ರಣ
ಮಾಯಕೊಂಡ: ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು ಮತ್ತು ಅಣಜಿ ಹೋಬಳಿಗಳ ನೂರಾರು ಗ್ರಾಮಗಳ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಹು ವಾರ್ಷಿಕ ಅಡಕೆ (peanut ) ಬೆಳೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.
ಬಿಸಿಲು ಹಾಗೂ ಮೂಡಣ ಗಾಳಿಯಿಂದ ಸಂರಕ್ಷಣೆಗೆ ಅಡಕೆ ಮರಗಳಿಗೆ ಎಲ್ಲೆಡೆ ಸುಣ್ಣ ಹಚ್ಚುವ ಕಾರ್ಯ ನಡೆದಿದೆ. ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಗುರುವಾರ ಅಡಕೆ ಮರಗಳಿಗೆ ಮಹಿಳೆಯರು ಸುಣ್ಣ ಲೇಪನ ಮಾಡಿದರು.
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿಂದ ಆರಂಭವಾಗುವ ಮೂಡಣ ಗಾಳಿ ಹಾಗೂ ಅತಿ ಹೆಚ್ಚಾಗಿ ಸುರಿವ ಬಿಸಿಲಿಗೆ ಅಡಕೆ ಮರದ ಕಾಂಡ ಬಿರುಕು ಬಿಡುವುದರೊಂದಿಗೆ ಮರ ಸಂಪೂರ್ಣ ಸತ್ವ ಕಳೆದುಕೊಳ್ಳುತ್ತದೆ. ಇದನ್ನು ತಪ್ಪಿಸಲು ಸುಣ್ಣ ಲೇಪನ ಮಾಡುತ್ತ ಬಂದಿದ್ದೇವೆ ಎನ್ನುತ್ತಾರೆ ಅಡಕೆ ಬೆಳೆಗಾರರು.
ಅಡಕೆ ಮರಗಳು ತೆಂಗಿನ ಮರದಂತೆ ಗಟ್ಟಿ ಕಾಂಡವನ್ನು ಹೊಂದಿರುವುದಿಲ್ಲ. ಅತಿ ಸೂಕ್ಷ್ಮ ಮತ್ತು ಮೃದುವಾದ ಮರಗಳಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಹಾನಿಯಾದರೂ ಇಡೀ ಮರವೇ ನಾಶವಾಗುತ್ತದೆ. ಆದ್ದರಿಂದ ರೈತರು ಇವುಗಳನ್ನು ಎಳೆಮಕ್ಕಳಂತೆ ಸಾಕುತ್ತಾರೆ.
ಸುಣ್ಣದೊಂದಿಗೆ ಬೆಲ್ಲ ಮತ್ತು ಮೈದಾ ಹಿಟ್ಟನ್ನು ಬೆರೆಸಿ ಪ್ರತಿ ಮರಗಳಿಗೆ ಬುಡದಿಂದ 6-7 ಅಡಿ ಎತ್ತರದವರೆಗೆ ಹಚ್ಚುತ್ತಾರೆ. ಮರಗಳಿಗೆ ಸುಣ್ಣ ಲೇಪನ ಮಾಡುವುದರಿಂದ ಬಿಸಿಲು, ಗಾಳಿಯಿಂದ ಸಂರಕ್ಷಣೆ ಮಾಡುತ್ತದೆ. ಅಡಕೆ ಮರಗಳಿಗೆ ನೀರು, ಫಲವತ್ತಾದ ಗೊಬ್ಬರ, ಕೆರೆ ಮಣ್ಣು ಮತ್ತು ಕೀಟನಾಶಕಗಳ ಸಿಂಪಡಣೆ ಎಷ್ಟು ಅಗತ್ಯವೋ ಸುಣ್ಣ ಲೇಪನವೂ ಅಷ್ಟೇ ಮುಖ್ಯ ಎನ್ನುತ್ತಾರೆ ರೈತರು.

ಅಡಕೆ ಗಿಡಗಳನ್ನು ನಾಟಿ ಮಾಡಿ ಎರಡು ವರ್ಷಗಳ ನಂತರ ಒಂದೆರಡು ಸುತ್ತು ಬಿಟ್ಟ ತಕ್ಷಣ ಸುಣ್ಣ ಲೇಪನ ಮಾಡಬೇಕು. ಸುಣ್ಣ ಲೇಪನ ವೈಜ್ಞಾನಿಕ ಪದ್ಧತಿಯಾಗಿದೆ. ಸುಣ್ಣದ ಜತೆಗೆ ಕಾಪರ್ ಆಕ್ಸೈಡ್ ಫ್ಲೋರೈಡ್ ಕೀಟನಾಶಕ ಮಿಶ್ರಣ ಮಾಡಿ ಲೇಪನ ಮಾಡಿದರೆ ಕಾಂಡಗಳಿಗೆ ತಗುಲುವ ರೋಗಗಳನ್ನು ಹತೋಟಿ ಮಾಡಬಹುದು. ಡಿಸೆಂಬರ್ ತಿಂಗಳಿಂದ ಬೇಸಿಗೆ ಮುಗಿಯುವವರೆಗೂ ಮರಗಳನ್ನು ಬಿಸಿಲಿನಿಂದ ಸಂರಕ್ಷಣೆ ಮಾಡುತ್ತದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲಿನಂತೆ ಸುಣ್ಣ ತಯಾರಿಸುವುದು ಕಡಿಮೆಯಾಗಿದೆ, ನಗರಗಳಿಂದ ಸುಣ್ಣವನ್ನು ಮಾರಾಟಕ್ಕೆ ತರುವ ವ್ಯಾಪಾರಿಗಳು ದರ ಹೆಚ್ಚಿಸಿದ್ದಾರೆ. ಪ್ರತಿ 10 ರಿಂದ 15 ಕೆಜಿ ಸುಣ್ಣದ ಕಲ್ಲಿನ ಚೀಲಗಳಿಗೆ 200 ರಿಂದ 250 ರೂ.ಗಳಿಗೆ ಮಾರಾಟ ದರ ನಿಗದಿಗೊಳಿಸಿದ್ದಾರೆ.