ಪತ್ರ ಬರಹಗಾರರ ಮುಷ್ಕರದಿಂದಾಗಿ ಭಣಗುಡುತ್ತಿರುವ ದಾವಣಗೆರೆಯ ಹಿರಿಯ ಉಪನೋಂದಣಾಧಿಕಾರಿ ಕಚೇರಿ.  
ದಾವಣಗೆರೆ

ಲಾಗಿನ್ ಹಕ್ಕಿಗಾಗಿ ಪತ್ರ ಬರಹಗಾರರ ಜಪ

ಪ್ರಮುಖ ಮುಖ್ಯಾಂಶಗಳು

  • ಕಾನೂನು ಹೋರಾಟಕ್ಕೂ ಸಜ್ಜಾದ ಒಕ್ಕೂಟ
  • ಫೇಸ್‌ಲೆಸ್, ಪೇಪರ್‌ಲೆಸ್ ಬಗ್ಗೆ ಹೆಚ್ಚಿದ ಭೀತಿ
  • 1 ಲಕ್ಷಕ್ಕೂ ಹೆಚ್ಚು ಅವಲಂಬಿತರಿಗೆ ಆತಂಕ
ದಾವಣಗೆರೆ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದಡಿ ಸಾರ್ವಜನಿಕರಿಗೆ ಅನುಮತಿಸಲಾದ ಸಿಟಿಜನ್ ಲಾಗಿನ್‌ನಿಂದಾಗಿ ರಾಜ್ಯದ ಪತ್ರ ಬರಹಗಾರರು ಉದ್ಯೋಗ ಅಭದ್ರತೆಯ ಆತಂಕದಲ್ಲಿದ್ದಾರೆ. ವ್ಯವಸ್ಥೆ ಬದಲಿಗೆ ಒಂದೂವರೆ ವರ್ಷದಿಂದ ಎಡತಾಕುತ್ತಿದ್ದರೂ ಸರ್ಕಾರ ಸೊಪ್ಪು ಹಾಕದ್ದರಿಂದ ಹೋರಾಟ ಶುರುವಾಗಿದೆ.
ರಾಜ್ಯದ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ದಸ್ತಾವೇಜು ಪತ್ರ ತಯಾರಿ ಮಾಡಿಕೊಡುವ 16 ಸಾವಿರಕ್ಕೂ ಹೆಚ್ಚಿನ ಅಧಿಕೃತ ಪತ್ರ ಬರಹಗಾರರಿದ್ದಾರೆ. ಅವರ ಜತೆ ಸಹಾಯಕರು, ಕಂಪ್ಯೂಟರ್ ಆಪರೇಟರ್ ಸೇರಿ ಲಕ್ಷಕ್ಕೂ ಹೆಚ್ಚು ಮಂದಿ ಅವಲಂಬಿತರಿದ್ದಾರೆ. ಎಲ್ಲರ ಬದುಕಿಗೇ ಲಾಗೌಟ್ ತರುವ ಅಪಾಯ ಎದುರಾಗಿದೆ.
ಕಾವೇರಿ-2 ತಂತ್ರಾಂಶದಡಿ ಸಿಟಿಜನ್ ಲಾಗಿನ್ ಮೂಲಕ ಸೈಬರ್/ ಡಿಟಿಪಿ ಸೆಂಟರ್‌ಗಳಲ್ಲಿ ದಸ್ತಾವೇಜುಗಳ ಮಾಹಿತಿ ಇಲ್ಲದಲೇ ಅನಧಿಕೃತ ವ್ಯಕ್ತಿಗಳು ದಸ್ತಾವೇಜು ಮನಬಂದಂತೆ ಅಪ್ಲೋಡ್ ಮಾಡುತ್ತಿರುವ ಹಾಗೂ ಯಾರದೋ ಆಸ್ತಿಯನ್ನು ಬದಲಿ ಇಂಡೆಕ್ಸ್‌ನಲ್ಲಿ ತಪ್ಪು ನೋಂದಣಿ ಮಾಡುವ ಲೋಪಗಳು ನಡೆಯುತ್ತಿವೆ ಎಂಬ ಆರೋಪಗಳಿವೆ.
ಇದರಿಂದಾಗಿ ಸರಿಯಾದ ಮುದ್ರಾಂಕ ಶುಲ್ಕ/ ನೋಂದಣಿ ಶುಲ್ಕ ಸಂಗ್ರಹವಾಗದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಹೆಚ್ಚುವ ಸಂಭವವಿದೆ. ನೆರೆಯ ಆಂದ್ರಪ್ರದೇಶ, ತೆಲಂಗಾಣದಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ವ್ಯವಸ್ಥೆ ಇದೆ. ಕರ್ನಾಟಕದಲ್ಲೂ (ಡೀಡ್ ರೈಟರ್ಸ್‌ )ಇದು ಜಾರಿಯಾದರೆ ನಮಗೂ ಬದ್ಧತೆ ಹೆಚ್ಚಲಿದೆ ಎನ್ನುತ್ತಾರೆ ಪತ್ರ ಬರಹಗಾರ ಧರ್ಮರಾಜ್ ವಿ. ಏಕಬೋಟೆ.
ಸಾರ್ವಜನಿಕರ ಆಧಾರ್‌ಕಾರ್ಡ್ ಒಟಿಪಿ ಪಡೆದು ಲಾಗಿನ್ ಆದರೂ ನಾವೇ ಪತ್ರ ವಹಿ ನಿರ್ವಹಣೆ ಮಾಡುತ್ತೇವೆ. ಆದರೂ ಹಾಗೆ ಬರುವವರ ದಾಖಲೆಗಳನ್ನು ದೃಢೀಕರಿಸುವುದು ಕಷ್ಟಸಾಧ್ಯ. ಆರ್ಥಿಕ ಬಲಾಢ್ಯರಿಂದ ಅಸಹಾಯಕರಿಗೆ ತೊಂದರೆ ಆಗುವ ಸಂಭವನೀಯತೆ ಇದೆ. ಇದರಿಂದ ತಾಪತ್ರಯಗಳು ನಿಶ್ಚಿತ ಎಂಬುದು ಪತ್ರ ಬರಹಗಾರರ ಆತಂಕ.
ರಾಜ್ಯ ಸರ್ಕಾರ ‘ಫೇಸ್‌ಲೆಸ್ ನೋಂದಣಿ’ ವ್ಯವಸ್ಥೆ ಜಾರಿಗೆ ತುದಿಗಾಲಲ್ಲಿದೆ. ಹೀಗಾದರೆ ಆಸ್ತಿ ಮಾರಾಟಗಾರರು, ಖರೀದಿದಾರರು ಮತ್ತು ಸಾಕ್ಷಿದಾರರು ಕಚೇರಿಗೆ ಬರುವ ಅಗತ್ಯವೇ ಬಾರದು. ಕೆಲವೆಡೆ ಫೇಸ್‌ಲೆಸ್ ನೋಂದಣಿ ಮೂಲಕ ನಕಲಿ ವಿವಾಹ ನೋಂದಣಿಯಾಗಿರುವ ಆರೋಪಗಳಿವೆ. ಕೋರ್ಟ್ ಮೂಲಕವೇ ಇದನ್ನು ಬಗೆಹರಿಸಿಕೊಳ್ಳದೆ ವಿಧಿಯಿಲ್ಲ.
ಇದಲ್ಲದೇ ಕಾಗದರಹಿತ ವ್ಯವಸ್ಥೆ ಕೂಡ ಸಮೀಪಿಸಲಿದೆ. ಹಾಗಾದಲ್ಲಿ ಪತ್ರ ಬರಹಗಾರರ ಸೀಲು ಮುದ್ರೆ, ಸಹಿಗೂ ಸಂಚಕಾರ ಬರುವ ದೂರವಿಲ್ಲ. ಈಗಾಗಲೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಪತ್ರ ಬರಹಗಾರರಿಗೆ ಮತ್ತಷ್ಟು ಸಂಕಟ ಹೆಚ್ಚಲಿವೆ.
ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ
ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಪತ್ರ ಬರವಣಿಗೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದೆ. ಇದರಿಂದಾಗಿ ಕೆಲ ಉಪನೋಂದಣಾಧಿಕಾರಿ ಕಚೇರಿಗಳು ನಿರೀಕ್ಷಿತ ಜನರಿಲ್ಲದೆ ಭಣಗುಡುತ್ತಿವೆ. ನಿರೀಕ್ಷಿತ ಪತ್ರ ನೋಂದಣಿ ವ್ಯವಹಾರ ಕಡಿಮೆಯಾಗಿದೆ. ‘ಆರಂಭದಲ್ಲಿ ಜನರು ಕಚೇರಿಗೆ ಬರದಿರಬಹುದು, ಕೆಲ ದಿನಗಳ ನಂತರ ಪರಿಸ್ಥಿತಿಗೆ ಜನರು ಹೊಂದಿಕೊಂಡು ಬರಬಹುದು’ ಎಂಬುದು ಅಧಿಕಾರಿಗಳ ನಂಬಿಕೆ.
ಮುಷ್ಕರದ ಜತೆಯಲ್ಲೇ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಡಿ. 16ರಂದು ಬೆಳಗಾವಿ ಚಲೋ ಮೂಲಕ ಧರಣಿ ನಡೆಸಲು ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟ ನಿರ್ಣಯಿಸಿದ್ದು, ಇದಕ್ಕೂ ಸ್ಪಂದಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆದಿದೆ.
ಪರ್ಯಾಯ ಕೆಲಸವಿಲ್ಲ
ಕ್ರಯಪತ್ರ, ಪಾಲು ವಿಭಾಗ ಪತ್ರ, ದಾನಪತ್ರ, ಕ್ರಯ ಕರಾರು ಪತ್ರ, ಹಕ್ಕು ಖುಲಾಸೆ ಪತ್ರ, ಆಧಾರ ಪತ್ರ, ಆಧಾರ ಖುಲಾಸೆ ಪತ್ರ, ಉಯಿಲು, ಬಾಡಿಗೆ ಕರಾರು ಹೀಗೆ ಅನೇಕ ದಸ್ತಾವೇಜು ನಿರ್ವಹಣೆಯನ್ನು ತಲೆ ತಲಾಂತರದಿಂದ ನಿರ್ವಹಿಸುತ್ತ ಬಂದವರು ಪತ್ರ ಬರಹಗಾರರು. ಆರಂಭದಲ್ಲಿ ಮುದ್ರಾಂಕ ಮಾರಾಟಗಾರರು (ಸ್ಟಾೃಂಪ್ ವೆಂಡರ್) ಎಂದಿದ್ದುದು ಕ್ರಮೇಣ ಹೆಸರು ಬದಲಾಗಿದೆ. ಇದನ್ನು ಬಿಟ್ಟರೆ ಅವರಿಗೆ ಪರ್ಯಾಯ ಕೆಲಸವಿಲ್ಲ.
ಶುಲ್ಕ ಪಟ್ಟಿ ಪರಿಷ್ಕರಣೆ ಕೂಗು
ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಆಸ್ತಿಯ ಮೌಲ್ಯ 2 ಲಕ್ಷ ರೂ. ನಿಂದ 8 ಲಕ್ಷ ರೂ. ಮೀರಿದಲ್ಲಿ ನೋಂದಣಿಗೆ ಪಡೆಯಬಹುದಾದ ನಿರ್ದಿಷ್ಟ ಶುಲ್ಕ ಪಟ್ಟಿಯನ್ನು ಸರ್ಕಾರವೇ ನೀಡಿದೆ. ಕರ್ನಾಟಕದಲ್ಲಿ 1970ರ ಶುಲ್ಕ ಪಟ್ಟಿಯೇ ಈಗಲೂ ಚಾಲ್ತಿಯಲ್ಲಿದ್ದು ಪರಿಷ್ಕೃತವಾಗಬೇಕು ಎಂಬ ಕೂಗೂ ಎದ್ದಿದೆ.

ಸರ್ಕಾರ ಸ್ಪಂದಿಸದ್ದರಿಂದ ಲೇಖನಿ ಸ್ಥಗಿತಗೊಳಿಸಿ ಶಕ್ತಿ ಪ್ರದರ್ಶನ ನಡೆಸಲು ನಿರ್ಧರಿಸಿದ್ದೇವೆ. ಮೊಂಡತನ ಮುಂದುವರಿದಲ್ಲಿ ಕೋರ್ಟ್ ಮೊರೆ ಹೋಗುತ್ತೇವೆ.