ಚನ್ನಗಿರಿ ತಾಲೂಕು ಸಂತೇಬೆನ್ನೂರು ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ದಿಶಾ ಸಮಿತಿ ಅಧ್ಯಕ್ಷ ಮೂರ್ತಪ್ಪ ಉದ್ಘಾಟಿಸಿದರು. ರೇಣುಕಾ, ಮೀನಾ ಕರಿಯಪ್ಪ, ಸಿದ್ದೇಶ್, ಡಿ.ಬಿ. ಕಿರಣ್ ಇತರರಿದ್ದರು.
- ದಿಶಾ ಸಮಿತಿ ಅಧ್ಯಕ್ಷ ಮೂರ್ತಪ್ಪ ಹೇಳಿಕೆ
- ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
- ಪ್ರತಿಭೆಗೆ ಬಡತನ, ಜಾತಿ ಅಡ್ಡಿಯಾಗದು
ಚನ್ನಗಿರಿ: ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪಾಲಕರು ಮತ್ತು ಶಿಕ್ಷಕರಿಂದಾಗಬೇಕು ಎಂದು ಸಂತೇಬೆನ್ನೂರು ದಿಶಾ ಸಮಿತಿ ಅಧ್ಯಕ್ಷ ಮೂರ್ತಪ್ಪ ಹೇಳಿದರು.
ತಾಲೂಕಿನ ಸಂತೇಬೆನ್ನೂರು ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು ನಮ್ಮವರೆನ್ನುವ ಭಾವನೆ ಶಿಕ್ಷಕರಲ್ಲಿರಬೇಕು. ತೀರ್ಪುಗಾರರು ಎಲ್ಲ ಮಕ್ಕಳು ಒಂದೇ ಎಂಬ ಭಾವನೆಯಿಂದ ತೀರ್ಪು ನೀಡಿದರೆ ನಿಜವಾದ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಇದರಿಂದ ಆ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸಿ ಶಾಲೆಗೆ ಉತ್ತಮ ಕೀರ್ತಿ ತರುತ್ತಾರೆ ಎಂದರು.
ಪ್ರತಿಭೆಗೆ ಬಡತನ, ಜಾತಿ ಅಡ್ಡಿ ಆಗುವುದಿಲ್ಲ. ನಿಮಗೆ ಇಷ್ಟವಾದ ವಿಷಯದಲ್ಲಿ ಆಸಕ್ತಿ ತೋರಿಸಿ ಶಾಲಾ ಶಿಕ್ಷಕರು ಹಾಗೂ ನುರಿತವರಿಂದ ಕಲಿತುಕೊಂಡರೆ ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು. ವಿದ್ಯಾರ್ಥಿ ಜೀವನ ಬಂಗಾರ ಆಗುವುದು ಕಲಿಕೆಯನ್ನು ಪೂರ್ಣಗೊಳಿಸಿದಾಗ ಅಂತಹ ಸಮಯದಲ್ಲಿ ಮನಸ್ಸು ಬೇರೆಡೆ ತಿರುಗಿದರೆ ಜೀವನದಲ್ಲಿ ಕಷ್ಟ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಮಕ್ಕಳು ಟಿವಿ, ಮೊಬೈಲ್ ದಾಸರಾಗುತ್ತಿದ್ದಾರೆ. ಇದರ ಬದಲು ಪುಸ್ತಕದ ದಾಸರಾದರೆ ಅದು ಎಲ್ಲರನ್ನೂ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಮೊಬೈಲ್‌ನಲ್ಲಿ ಎಲ್ಲ ವಿಷಯವೂ ಲಭ್ಯವಿರುತ್ತದೆ. ಹಾಗಾಗಿ ನಿಮಗೆ ಬೇಕಾದ ಉತ್ತಮ ವಿಷಯಗಳನ್ನು ಪಡೆಯುವ ಕಡೆ ಗಮನ ಹರಿಸಿ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷೆ ಮೀನಾ ಕರಿಯಪ್ಪ, ಶಾಲೆಯ ಉಪಪ್ರಾಚಾರ್ಯ ಸಿದ್ದೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಬಿ. ಕಿರಣ್, ಕವಿತಾ, ವಸಂತಕುಮಾರ್, ರುದ್ರೇಶ್, ಸಿಆರ್‌ಪಿ ರವಿಕುಮಾರ್ ಇದ್ದರು.