ಧ್ವಜಸ್ತಂಭ ಪೂಜಾ ಕಾರ್ಯಕ್ರಮದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್, ಎಸ್.ಎ ರವೀಂದ್ರನಾಥ್, ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಕೆ.ಬಿ. ಶಂಕರ ನಾರಾಯಣ, ವೈ. ಮಲ್ಲೇಶ್, ದಿನೇಶ್ ಕೆ. ಶೆಟ್ಟಿ, ಮೆಳ್ಳೆಕಟ್ಟೆ ನಾಗರಾಜ್ ಇದ್ದರು.
- ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಶಯ
- ಧ್ವಜಸ್ತಂಭ ಪೂಜಾ ಕಾರ್ಯಕ್ರಮ
ದಾವಣಗೆರೆ : ಪಕ್ಷ, ಪಂಗಡ ಭೇದವಿಲ್ಲದೇ ಎಲ್ಲರೂ ಸೇರಿ ಒಗ್ಗಟ್ಟಾಗಿ, ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಸಾರ್ವಜನಿಕ ಹಿಂದು ಮಹಾಗಣಪತಿ ಸಮಿತಿ ವತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ, ಧ್ವಜಸ್ತಂಭ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಮೊದಲು ಸಣ್ಣ ಪುಟ್ಟ ಗೊಂದಲಗಳಿದ್ದವು, ಅದೆಲ್ಲವೂ ನಿವಾರಣೆಯಾಗಿದ್ದು ಈ ಭಾಗದ ನಾಯಕರು ಒಗ್ಗಟ್ಟಾಗಿ ಆಚರಣೆ ಮಾಡಲಿದ್ದಾರೆ. ಸಮಾಜದ ಎಲ್ಲರೂ ಸೇರಿ, ಹಿಂದುಗಳೆಲ್ಲ ಒಂದೇ ಎಂಬ ಭಾವನೆಯಿಂದ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಆಶಿಸಿದರು.
ಚುನಾವಣೆ ಅಥವಾ ರಾಜಕೀಯದ ವಿಷಯ ಬಂದಾಗ ತಾತ್ವಿಕವಾಗಿ ನಮ್ಮ ವಿಚಾರಧಾರೆ, ನಿಲುವು ಬೇರೆ ಇರಬಹುದು, ಆದರೆ ಹಬ್ಬ-ಹುಣ್ಣಿಮೆ ಬಂದಾಗ ಎಲ್ಲರೂ ಸೇರಿ ಆಚರಣೆ ಮಾಡೋಣ ಎಂದು ತಿಳಿಸಿದರು.
ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಕಳೆದ ವರ್ಷ ಡಿಜೆ ನಿಷೇಧ ಮಾಡಲಾಗಿತ್ತು. ಈ ಬಾರಿ ಅನುಮತಿ ನೀಡಲಾಗುವುದೆ ಎಂಬ ಪ್ರಶ್ನೆಗೆ, ಕಳೆದ ಬಾರಿ ಸರ್ಕಾರಿ ಆದೇಶವಾಗಿತ್ತು. ಇನ್ನೂ 1 ತಿಂಗಳು ಸಮಯ ಇದೆ, ನೋಡೋಣ ಎಂದು ಉತ್ತರಿಸಿದರು.
ಸಾರ್ವಜನಿಕ ಹಿಂದು ಮಹಾಗಣಪತಿ ಸಮಿತಿಯ ಸಂಚಾಲಕ ಜೊಳ್ಳಿ ಗುರು ಮಾತನಾಡಿ, ಈ ಬಾರಿ ಉಜ್ಜಯಿನಿ ಮಹಾ ಕಾಲೇಶ್ವರ ದೇವಸ್ಥಾನದ ಮಾದರಿ ಮಹಾ ಮಂಟಪ ನಿರ್ಮಿಸಲಾಗುವುದು ಎಂದರು.
ಮಾಜಿ ಸಚಿವ ಎಸ್.ಎ ರವೀಂದ್ರನಾಥ್, ವಿಧಾನ ಪರಿಷತ್ ವಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಸಂಘ ಪರಿವಾರದ ಹಿರಿಯರಾದ ಕೆ.ಬಿ. ಶಂಕರ ನಾರಾಯಣ, ವೈ. ಮಲ್ಲೇಶ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ್ ಇದ್ದರು.