ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಅವರೊಂದಿಗೆ ಸಾರೋಟು ಮೆರವಣಿಗೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಲತಿಕಾ ದಿನೇಶ್ ಕೆ. ಶೆಟ್ಟಿ, ಬಿ. ವಾಮದೇವಪ್ಪ ಭಾಗಿಯಾಗಿದ್ದರು.  
ದಾವಣಗೆರೆ

ಹೆಣ್ಣುಮಕ್ಕಳಲ್ಲಿ ಮೌಲ್ಯ ಜಾಗೃತಿಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಇನ್ನೂ ಜೀವಂತವಿರುವ ನಾರಿ ಶೋಷಣೆ
  • ಎಲ್ಲೆಡೆ ಪುಸ್ತಕೋತ್ಸವ ನಡೆಸುವ ಸಂಕಲ್ಪವಾಗಲಿ
  • ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಆಶಯ

ದಾವಣಗೆರೆ: ಸ್ತ್ರೀ ಸಮಾನತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಪುರುಷರಂತೆ ಬುದ್ಧಿವಂತಿಕೆ, ಧೈರ್ಯ, ಶಾರೀರಿಕ ಶಕ್ತಿ ಬೆಳೆಸಿಕೊಳ್ಳಬೇಕು. ಈ ದಿಸೆಯಲ್ಲಿ ಹೆಣ್ಣುಮಕ್ಕಳಲ್ಲಿ ಮೌಲ್ಯ ಜಾಗೃತಿ ಆಗಬೇಕಿದೆ. ಸದ್ಗುಣಿಯಾದಲ್ಲಿ ಕುಟುಂಬದ ಜತೆಗೆ ದೇಶವೂ ನಿರ್ವಹಣೆ ಆಗಲಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷೆ, ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಹೇಳಿದರು.

ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ

ಲ್ಲಿ

ಮಾತನಾಡಿ,

ಭಾರತದ ಮಧ್ಯಕಾಲೀನ ಸಂದರ್ಭದಲ್ಲಿ ಮಹಿಳೆಗೆ ಎರಡನೇ ದರ್ಜೆ ಸ್ಥಾನ ನೀಡಲಾಗಿತ್ತು. ನಾರಿ ಶೋಷಣೆಯನ್ನು ಅಂದಿನ ಶಾಸ್ತ್ರಗಳು ಉಲ್ಲೇಖಿಸಿವೆ. ಶಿವಶರಣರು ವಚನಗಳ ಮೂಲಕ ಹೇಳಿದ ಮೌಲ್ಯಾಧಾರಿತ ಆಚಾರ ವಿಚಾರಗಳು ಕಾರ್ಯರೂಪಕ್ಕೆ ಬರಲಿಲ್ಲ. ನಾರಿ ಶೋಷಣೆ ಬದಲಾಗದೆ ನಾವು ನಿಂತಲ್ಲೇ ನಿಂತಿದ್ದೇವೆ ಎಂದೂ ವಿಷಾದಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಪೂಜ್ಯನೀಯ ಸ್ಥಾನವಿದೆ. ನೆಲ-ಭಾಷೆಯನ್ನು ತಾಯಿಗೆ ಹೋಲಿಸಲಾಗಿದೆ ಎಂದ ಅವರು, ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತಿಗಳು ತಮ್ಮ ಬರಹದ ಮೂಲಕ ಹೊಸ ದಿಕ್ಕು ತೋರಿದ್ದರೂ ಮಹಿಳಾ ದೌರ್ಜನ್ಯ, ಭ್ರೂಣಹತ್ಯೆ, ಲಿಂಗ ತಾರತಮ್ಯ ನಿಂತಿಲ್ಲ ಎಂದು ಆತಂತ ವ್ಯಕ್ತಪಡಿಸಿದರು.
ಯುವತಿಯರಲ್ಲಿ ಬರವಣಿಗೆ ಆಸಕ್ತಿಗಾಗಿ ಕಾರ್ಯಾಗಾರಗಳು ಆಗಬೇಕು. ಮಹಿಳಾ ಸಾಹಿತ್ಯ ಕುರಿತು ಉಪನ್ಯಾಸ ಮಾಲಿಕೆ, ಚರ್ಚಾ ವೇದಿಕೆಗಳು ರಚನೆಯಾಗಬೇಕು ಎಂದ ಅವರು, ಮಕ್ಕಳೊಂದಿಗೆ ಕನ್ನಡದಲ್ಲೇ ವ್ಯವಹರಿಸುವ, ತಿಂಗಳಿಗೊಂದು ಕನ್ನಡ ಪುಸ್ತಕ ಓದುವ ಹವ್ಯಾಸ ಹಾಗೂ ಎಲ್ಲೆಡೆ ಪುಸ್ತಕೋತ್ಸವ ನಡೆಸಲು ಸಂಕಲ್ಪ ಮಾಡಬೇಕು ಎಂದರು.
ಮಹಿಳಾ ಸಾಹಿತ್ಯವು ನೋವು, ಹೋರಾಟದ ಕಥೆಗೆ ಸೀಮಿತವಾಗದೆ ಪರಿಹಾರ ಸೂಚಿಸಬೇಕು. ಆಶಾವಾದದ ಜತೆಗೆ ಸಮಾಜವನ್ನು ಬೆಸೆಯಬೇಕು. ಕೃತಕ ಬುದ್ಧಿಮತ್ತೆ, ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದಷ್ಟೇ ಸಂಸ್ಕೃತಿ, ವಿವೇಕ ಹೆಚ್ಚುತ್ತಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಜವಾಬ್ದಾರಿ ಸಾಹಿತ್ಯದ ಮೇಲಿದೆ ಎಂದು ಹೇಳಿದರು.
ಸಾಹಿತ್ಯ ಮತ್ತು ಅಧ್ಯಾತ್ಮಿಕತೆ ಎರಡೂ ಸಹ ಹೃದಯವನ್ನು ಸ್ಪರ್ಶಿಸಲಿವೆ. ತಂತ್ರಜ್ಞಾನದಂತೆ ಮಾನವನ ಮನಸ್ಸನ್ನೂ ಬೆಳೆಸುವುದು ಇದರ ಜವಾಬ್ದಾರಿ. ಸಾಹಿತ್ಯ ಮಾನವೀಯತೆ ಜಾಗೃತಗೊಳಿಸುವುದಲ್ಲದೆ ಅನ್ಯಾಯದ ವಿರುದ್ಧ ಧ್ವನಿಯಾಗಬೇಕು ಎಂದೂ ಆಶಿಸಿದರು.

ಸಾರೋಟಲ್ಲಿ ಮೆರವಣಿಗೆ

ವಿದ್ಯಾನಗರದಿಂದ ಕುವೆಂಪು ಭವನದವರೆಗೆ ಸಮ್ಮೇಳನದ ಸರ್ವಾಧ್ಯಕ್ಷೆ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮೆರವಣಿಗೆ ಮಾಡಲಾಯಿತು. ಸಾರೋಟಿಯಲ್ಲಿ ಅವರೊಂದಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಲತಿಕಾ ದಿನೇಶ್ ಕೆ ಶೆಟ್ಟಿ ಭಾಗಿಯಾಗಿದ್ದರು. ಹಸಿರುಸೀರೆಯಲ್ಲಿ ನಾರಿಯರು ಕಂಗೊಳಿಸಿದರು. ವಿವಿಧ ಕಲಾ ತಂಡಗಳು ಮೆರುಗು ನೀಡಿದವು.