ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ಬಿ.ರಮೇಶ ನಾಯ್ಕ, ಗುರುಶಾಂತ ಸೋಗಿ, ಟಿಂಕರ್ ಮಂಜಣ್ಣ, ಕಿಶೋರಕುಮಾರ ಮಡಿವಾಳ ಇದ್ದರು.  
ದಾವಣಗೆರೆ

ದೇಗುಲದ ಅಭಿವೃದ್ಧಿ ಕಾರ್ಯ ಚರ್ಚೆಯಾಗಲಿ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ನಗರದೇವತೆ ದುಗ್ಗಮ್ಮನಿಗೆ ಅಪಚಾರ ಮಾಡಿಲ್ಲ
  • ಮಳಿಗೆಗಳ ನಿರ್ಮಾಣಕ್ಕೇಕೆ 55 ಲಕ್ಷ ಜಿಎಸ್‌ಟಿ?
  • ಸಮಿತಿಗೆ ಯಶವಂತರಾವ್ ಜಾಧವ್ ಪ್ರತ್ಯುತ್ತರ
ದಾವಣಗೆರೆ: ನಗರದೇವತೆ ದುರ್ಗಾಂಬಿಕೆ ಬಗ್ಗೆ ನನಗೆ ಅಪಾರ ಭಕ್ತಿ ಇದೆ. ದೇವಿ ವಿಚಾರದಲ್ಲಿ ಅಪಚಾರ, ದೇವಸ್ಥಾನ ಕುರಿತು ಅಪಪ್ರಚಾರ ಮಾಡುತ್ತಿಲ್ಲ. ಧರ್ಮದರ್ಶಿ ಸಮಿತಿಯ ಯಾವ ಸಭೆಗಳಲ್ಲಿ ಚರ್ಚೆ ನಡೆಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆಗಿರುವುದೆಲ್ಲ ಕ್ರಮಬದ್ಧವಾಗಿದೆ ಎಂಬುದನ್ನು ಒಪ್ಪಿಕೊಳ್ಳಲಿ ಎಂದು ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದರು.
ದೇವಸ್ಥಾನದ ಜಾಗದಲ್ಲಿ 34 ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಟ್ರಸ್ಟ್‌ನ ಯಾವ ಸಭೆಯಲ್ಲಿ ನಿರ್ಧರಿಸಲಾಗಿತ್ತು? ಯಾವ ಮಾನದಂಡದ ಆಧಾರದಡಿ ಅನುಮತಿ ನೀಡಲಾಗಿತ್ತು? ಆ ಸಭೆಯ ನಡಾವಳಿ ಬಗ್ಗೆ ಸಮಿತಿ ಉತ್ತರಿಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟ್ರಸ್ಟ್ ಇದುವರೆಗೆ ಎಷ್ಟು ಸಭೆ ನಡೆಸಿದೆ? ಯಾವ ವಿಷಯಗಳು ಚರ್ಚೆಯಾಗಿವೆ? ಈ ಬಗ್ಗೆ ಸಭಾ ನಡಾವಳಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಉದ್ಯಮಿ ಪ್ರೇಮಾ ಚನ್ನಪ್ಪ ಅವರು ಬೆಳ್ಳಿ ಬಾಗಿಲು ಮಾಡಿಸಿಕೊಡುವುದಾಗಿ ಹೇಳಿದರೂ ನಿರಾಕರಿಸಲಾಯಿತು. ಶಾಮನೂರು ಮನೆತನಕ್ಕೆ ಅವಕಾಶ ನೀಡಿ, ಈ ಬಾಗಿಲ ಮೇಲ್ಭಾಗದಲ್ಲೇ ಅವರ ಹೆಸರು ಪ್ರಕಟಿಸಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಕಳೆದ ಆರು ವರ್ಷದಿಂದಲೂ ಲೆಕ್ಕ ಕೇಳಿದ್ದರೂ ನೀಡಿಲ್ಲ. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರೇಣುಕ ಮಂದಿರಕ್ಕೆ ಇಲ್ಲದ ಜಿಎಸ್‌ಟಿ, 3.5 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಮಳಿಗೆಗಳ ನಿರ್ಮಾಣಕ್ಕೆ 55 ಲಕ್ಷ ರೂ. ಜಿಎಸ್‌ಟಿ ನೀಡಿದ್ದಾಗಿ ಹೇಳಲಾಗುತ್ತಿದೆ. ಕಟ್ಟಡ ಸಾಮಗ್ರಿ ಖರೀದಿಸುವಾಗಲೇ ಜಿಎಸ್‌ಟಿ ನೀಡುವಾಗ ಇದೇಕೆ ಎಂಬುದಕ್ಕೆ ಸಮಿತಿ ಸರಿಯಾದ ಉತ್ತರ ನೀಡಿಲ್ಲ. ಜಿಎಸ್‌ಟಿ ಪಾವತಿಸಿದ ದಾಖಲೆ ರಸೀದಿಗಳು ಟ್ರಸ್ಟ್ ಬಳಿ ಇದ್ದರೆ ಚರ್ಚೆಗೆ ಬರಲಿ ಎಂದರು.
ಮೋತಿ ವೀರಣ್ಣ ಅವರ ಕಾಲದಲ್ಲಿ ಹಿಂದೆ ಕಟ್ಟಿದ್ದ 12 ಮಳಿಗೆಗಳು ಸುಸ್ಥಿತಿಯಲ್ಲಿವೆ. ಈಗ ಕಟ್ಟಲಾದ 34 ಮಳಿಗೆಗಳು ಸೋರುತ್ತಿದ್ದು ಕಾಮಗಾರಿ ಕಳಪೆಯಾಗಿವೆ. ಯಾರಿಗೆ ಟೆಂಡರ್ ನೀಡಿದ್ದರು ಎಂಬುದಕ್ಕೆ ಉತ್ತರವಿಲ್ಲ. ದುರ್ಗಾಂಬಿಕಾ ಟ್ರಸ್ಟ್ ಸಭೆಗಳಲ್ಲಿ ಈ ಬಗ್ಗೆ ಹಲವಾರು ಬಾರಿ ಪ್ರಶ್ನಿಸಲಾಗಿತ್ತು. ಭರವಸೆ ನೀಡಿದಂತೆ ಮೂರನೇ ವ್ಯಕ್ತಿ ಸಮಿತಿ ಮೂಲಕ ಪರಿಶೀಲನೆ ಇದುವರೆಗೆ ಏಕೆ ನಡೆದಿಲ್ಲ ಎಂದು ಕೇಳಿದರು.
ದೇವಸ್ಥಾನದ ವಿಚಾರದಲ್ಲಿ ಒಂದೇ ಕುಟುಂಬಕ್ಕೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಟ್ರಸ್ಟ್ ಕಾರ್ಯದರ್ಶಿ ಸೊಪ್ಪಿನ ಮರಿಯಪ್ಪ ನಿಧನರಾಗಿ 9 ವರ್ಷದ ನಂತರವೂ ಹೊಸ ನೇಮಕ ಮಾಡಿಲ್ಲ. ಆದರೆ ಶಾಮನೂರು ಶಿವಶಂಕರಪ್ಪ ಅವರ ನಿಧನಾನಂತರದಲ್ಲಿ ಒಂದೇ ಕುಟುಂಬದ ಅನೇಕ ಸದಸ್ಯರನ್ನು ಸಮಿತಿಗೆ ನೇಮಿಸುವುದೇಕೆ? ಸಮಿತಿ ನಿರ್ಮಿಸಿದ ಮಂಟಪದಲ್ಲೇ ಯಾವಾಗ ಕರೆದರೂ ಚರ್ಚೆಗೆ ಬರಲು ಸಿದ್ಧ ಎಂದರು.
* ಅಯೋಧ್ಯೆಗೆ ಬೆಳ್ಳಿಇಟ್ಟಿಗೆ ನೀಡಿದ್ದಕ್ಕೆ ಇದೆ ರಸೀದಿ
ಅಯೋಧ್ಯೆ ರಾಮಮಂದಿರಕ್ಕೆ ಜನರಿಂದ ದೇಣಿಗೆ ಸಂಗ್ರಹಿಸಿಲ್ಲ. ನಾವೇ ಮುಖಂಡರು ಹಣ ಹಾಕಿದ್ದೇವೆ. ಆರೆಸ್ಸೆಸ್ ಮುಖಂಡರಿಂದಲೂ 10 ಸಾವಿರ ರೂ. ಮೇಲ್ಪಟ್ಟು ಚೆಕ್ ಮೂಲಕವೇ ಹಣ ಪಡೆದು ಬೆಳ್ಳಿ ಇಟ್ಟಿಗೆಯನ್ನು ಬಸ್ ಮೂಲಕ ಸಾಗಿಸಿ, ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅವರ ಸಮ್ಮುಖದಲ್ಲಿ ಅರ್ಪಿಸಿ ಬಂದಿದ್ದೇವೆ. ಇದಕ್ಕೆ ರಸೀದಿ ಇದೆ.
ಬೆಳ್ಳಿ ಇಟ್ಟಿಗೆ ಅಯೋಧ್ಯೆಗೆ ನೀಡಿದ್ದೇ ಅನುಮಾನ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ದಿನೇಶ್ ಕೆ ಶೆಟ್ಟಿ, ತಾನು ಹೇಳಿದಂತೆ ಕಾಂಗ್ರೆಸ್ ಮುಖಂಡರು ನೀಡಿದ ದೇಣಿಗೆಗಳ ಬಗ್ಗೆ ಮೊದಲು ರಸೀತಿ ಪ್ರದರ್ಶಿಸಲಿ. ಅಯೋಧ್ಯೆಗೆ ಸಾಕಷ್ಟು ಬೆಳ್ಳಿ ಇಟ್ಟಿಗೆ ಬಂದಿವೆ, ಬೇಡ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿಲ್ಲ. ಈ ಬಗ್ಗೆಯೂ ದಿನೇಶ್‌ಶೆಟ್ಟಿ ಸುಳ್ಳು ಹೇಳಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ರಮೇಶ ನಾಯ್ಕ, ಶಿವನಗೌಡ ಟಿ.ಪಾಟೀಲ, ಗುರುಶಾಂತ ಸೋಗಿ, ಟಿಂಕರ್ ಮಂಜಣ್ಣ, ಕಿಶೋರಕುಮಾರ ಮಡಿವಾಳ, ಗೋವಿಂದರಾಜ, ಶಿವಾನಂದ ಇದ್ದರು.