ಮನರೇಗಾ ಯೋಜನೆಯಲ್ಲಿ ಈ ಹಿಂದಿದ್ದ ಮಹಾತ್ಮ ಗಾಂಧಿ ಹೆಸರನ್ನೇ ಮುಂದುವರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರಿಗನೂರು ಗ್ರಾಪಂ ಕೂಲಿಕಾರ್ಮಿಕರ ವೇದಿಕೆ ದಾವಣಗೆರೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು. ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ಶರತ್, ಚೇತನ್‌ಕುಮಾರ್, ಸಂದೀಪ್, ಉಮಾಬಾಯಿ, ಗಾಯತ್ರಿಬಾಯಿ, ಕರಿಯಮ್ಮ ಇತರರಿದ್ದರು.
- ಕಾರಿಗನೂರು ಗ್ರಾಪಂ ಕೂಲಿಕಾರ್ಮಿಕರ ವೇದಿಕೆ ಪ್ರತಿಭಟನೆ
- ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್ ನೇತೃತ್ವ
- 200 ದಿನಗಳಿಗೆ ಮಾನವ ದಿನ ವಿಸ್ತರಣೆಗೆ ಆಗ್ರಹ
ದಾವಣಗೆರೆ: ಮನರೇಗಾ ಯೋಜನೆಯಲ್ಲಿ ಈ ಹಿಂದಿದ್ದ ಮಹಾತ್ಮ ಗಾಂಧಿ ಹೆಸರನ್ನೇ ಮುಂದುವರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರಿಗನೂರು ಗ್ರಾಪಂ ಕೂಲಿಕಾರ್ಮಿಕರ ವೇದಿಕೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಇಲ್ಲಿನ ಮಹಾತ್ಮಗಾಂಧಿ ವೃತ್ತದಿಂದ ಪಿಬಿ ರಸ್ತೆಯ ಮೂಲಕ ಮೆರವಣಿಗೆ ನಡೆಸಿದ ಕೂಲಿಕಾರ್ಮಿಕರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ಕಬ್ಬಿಣದ ದ್ವಾರಕ್ಕೆ ಮನವಿಪತ್ರ ಅಂಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ಪಟೇಲ್, ಗ್ರಾಮೀಣ ಜನರ ಪರವಾಗಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಮಾರ್ಪಡಿಸಿದ್ದು ಸರಿಯಲ್ಲ. ಸರ್ಕಾರದ ಯಾವುದೇ ಯೋಜನೆಗಳು ಕೂಲಿಕಾರ್ಮಿಕರಿಗೆ ಪೂರಕವಾಗಿರಬೇಕೆ ಹೊರತಾಗಿ ಮಾರಕ ಆಗಬಾರದು ಎಂದು ಹೇಳಿದರು.
ಗ್ರಾಮೀಣ ಜನರ ಉದ್ಯೋಗ ಹಕ್ಕಿನ ಖಾತ್ರಿಯಿದ್ದ ನರೇಗಾ ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನು ಮುಂದುವರಿಸಬೇಕು. ವಿಬಿ ಜಿ ರಾಮ್ ಯೋಜನೆಯಲ್ಲಿ ಸರ್ಕಾರ ಮಾನವ ದಿನಗಳನ್ನು 125ಕ್ಕೆ ಏರಿಸಿರುವುದು ಸ್ವಾಗತಾರ್ಹ. ಆದರೆ ಇದ್ನು 200 ದಿನಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕೂಲಿ ಮೊತ್ತವನ್ನು 500 ರೂ.ಗೆ ಹೆಚ್ಚಿಸಿ ವಾರಾಂತ್ಯದೊಳಗೆ ಪಾವತಿಸಬೇಕು. ಈ ಹಿಂದಿನ ಮನರೇಗಾ ಯೋಜನೆಯಡಿ ಗ್ರಾಪಂ ಬೇಡಿಕೆಗಳ ಆಧಾರದಡಿ ಕೆಲಸ ನಿಗದಿಯಾಗುತ್ತಿತ್ತು. ಕೇಂದ್ರ-ರಾಜ್ಯ ಸರ್ಕಾರಗಳ ಅನುದಾನದ ಅನುಪಾತ 90:10ರಷ್ಟಿತ್ತು. ಆಗಲೇ ಕೂಲಿಯ ಮೊತ್ತ ಬರುವುದು ವಿಳಂಬವಾಗುತ್ತಿತ್ತು. ಈಗಿನ ಸಂದರ್ಭದಲ್ಲಿ ರಾಜಕಾರಣದಲ್ಲಿ ಹೊಂದಾಣಿಕೆ ಇಲ್ಲ. ಈಗ ನಿಗದಿಪಡಿಸಿದ ಅನುದಾನ ಕೈಗೆ ಸಿಗುವುದು ಕಷ್ಟ ಎಂದು ಹೇಳಿದರು.
ಬಿತ್ತನೆ-ಕಟಾವು ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ನಡೆಸುವಂತಿಲ್ಲ ಎಂದು ನೂತನ ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಕೃಷಿ ಚಟುವಟಿಕೆಗಳನ್ನು ನರೇಗಾ ಯೋಜನೆ ಮೂಲಕವೇ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕಾರಿಗನೂರು ಗ್ರಾಪಂ ಸದಸ್ಯರಾದ ಶರತ್, ಚೇತನ್‌ಕುಮಾರ್, ಸಂದೀಪ್, ಉಮಾಬಾಯಿ, ಕೂಲಿಕಾರ್ಮಿಕರ ಸಂಘಟನೆಯ ಮುಖಂಡರಾದ ಗಾಯತ್ರಿಬಾಯಿ, ಕರಿಯಮ್ಮ, ವಿನೋದಮ್ಮ, ಮಂಜುಳಾ ಬಾಯಿ, ಕಾರಿಗನೂರು ಕರಿಬಸಪ್ಪ, ಅಂತರ್‌ಖಾನ್, ಮಂಜುನಾಥ್ ಪಾಲ್ಗೊಂಡಿದ್ದರು.