ಎಲ್ಲ ಕಾರ್ಮಿಕರಿಗೂ ಮಾಸಿಕ ಸರಾಸರಿ 36 ಸಾವಿರ ರೂ. ಕನಿಷ್ಠ ವೇತನ ನಿಗದಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಶನಿವಾರ, ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಕೆೆ. ಎಚ್.ಆನಂದರಾಜು, ಮುದಿಮಲ್ಲನ ಗೌಡ, ಅಫ್ರೋಜ್ ಅಹಮದ್, ಬಸವರಾಜ್, ಬಿ.ಎನ್. ಹಾಲೇಶನಾಯ್ಕ ಇತರರಿದ್ದರು.
- ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ
- ಕಳೆದ ವರ್ಷದಿಂದಲೇ ಅನ್ವಯಿಸಲಿ ಪರಿಷ್ಕೃತ ಆದೇಶ
- ಸಂಹಿತೆಗಳಿಗೆ ತಿದ್ದುಪಡಿ ತಂದು ನಿಯಮ ರೂಪಿಸಿ
ದಾವಣಗೆರೆ: ಎಲ್ಲ ಕಾರ್ಮಿಕರಿಗೂ ಮಾಸಿಕ ಸರಾಸರಿ 36 ಸಾವಿರ ರೂ. ಕನಿಷ್ಠ ವೇತನ ನಿಗದಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್‌ನ ಜಿಲ್ಲಾ ಸಂಚಾಲನಾ ಸಮಿತಿ ವತಿಯಿಂದ ಶನಿವಾರ, ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಹೆಚ್ಚಳ ಮಾಡಿರುವ ಕನಿಷ್ಠ ವೇತನವು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳಿಗೆ ಪೂರಕವಾಗಿಲ್ಲ. ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚ ಮತ್ತು ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಸರಾಸರಿ 36 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕು.
ಅಧಿಸೂಚನೆ ಹೊರಡಿಸಿದ ದಿನದಿಂದ ಕನಿಷ್ಠ ವೇತನ ಜಾರಿಗೊಳಿಸಿದ್ದು ಬಹುಸಂಖ್ಯಾತ ಕಾರ್ಮಿಕರಿಗೆ ಒಂದು ವರ್ಗದ ಬಾಕಿ ಸಿಗದಂತೆ ಮಾಡಿದೆ. ಹಾಗಾಗಿ ಕನಿಷ್ಠ ವೇತನವನ್ನು 2025ರ ಏ.11ರಿಂದಲೇ ಪೂರ್ವಾನ್ವಯಿಸಿ ಅನುಷ್ಠಾನಗೊಳಿಸಬೇಕು. ಈ ಸಂಬಂಧ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಗಾರ್ಮೆಂಟ್ಸ್, ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿ 19 ವಿಭಾಗದ ಉದ್ದಿಮೆಗಳನ್ನು ಅಧಿಸೂಚನೆಯಿಂದ ಹೊರಗಿಡಲಾಗಿದೆ. ಇದರಿಂದ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳದಿಂದ ವಂಚಿತರಾಗಲಿದ್ದಾರೆ. ಎಲ್ಲ ವಿಭಾಗದ ಉದ್ದಿಮೆಗಳಿಗೂ ಅಧಿಸೂಚನೆ ವಿಸ್ತರಿಸಬೇಕು. ಸ್ಕೀಂ ನೌಕರರನ್ನು ಕೂಡ ಇದರ ವ್ಯಾಪ್ತಿಗೆ ಒಳಪಡಿಸಬೇಕು. ಮಾಲೀಕರ ಒತ್ತಡಕ್ಕೆ ಮಣಿಯದೆ, ಪರಿಷ್ಕೃತ ಆದೇಶವನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.
ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಿ ಜಾರಿಗೊಳಿಸಿದೆ. ಇದರಿಂದ ಕಾರ್ಮಿಕರ ಮೂಲ ಹಕ್ಕುಗಳು ಮೊಟಕಾಗುವ ಜತೆಗೆ ಕರ್ನಾಟಕದ ಅಭಿವೃದ್ಧಿಗೆ ಮಾರಕವಾಗಲಿದೆ. ರಾಜ್ಯ ಸರ್ಕಾರ ಸಂವಿಧಾನದತ್ತ ಅಧಿಕಾರ ಬಳಸಿ ಈ ಸಂಹಿತೆಗಳಿಗೆ ಕಾರ್ಮಿಕರ ಪರವಾದ ತಿದ್ದುಪಡಿ ತಂದು ನಿಯಮ ರೂಪಿಸಬೇಕು.
ಸರ್ಕಾರಿ-ಖಾಸಗಿ ವಲಯದಲ್ಲಿ ಹಂಗಾಮಿ, ಗುತ್ತಿಗೆ, ನಿಯಮಿತ ಅವಧಿ, ಟ್ರೈನಿ, ಇನ್ನಿತರ ಸ್ವರೂಪದ ಕಾಯಂರಹಿತ ಕಾರ್ಮಿಕರು ಕಡಿಮೆ ವೇತನದಲ್ಲಿ ಹಾಗೂ ಕಾನೂನುಬದ್ಧ ಸವಲತ್ತುಗಳಿಲ್ಲದೆ ಅಭದ್ರತೆಯಲ್ಲಿ ದುಡಿಯುತ್ತಿದ್ದಾರೆ. ಕಾರ್ಮಿಕ ಇಲಾಖೆಯು ಗುತ್ತಿಗೆ ಪದ್ದತಿ ನಿಯಂತ್ರಿಸಿ ಕಾಯಂಗೊಳಿಸಲು ಕಾರ್ಮಿಕ ಇಲಾಖೆಯು ಸಿದ್ಧಪಡಿಸಿದ ಕರಡನ್ನು ಕಾರ್ಯಗತಗೊಳಿಸಿ ಶಾಸನ ರೂಪಿಸಬೇಕು ಎಂದು ಆಗ್ರಹಿಸಿದರು. ನಂತರ ಡಿಸಿ ಜಿ.ಎಂ. ಗಂಗಾಧರಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆೆ. ಎಚ್.ಆನಂದರಾಜು, ಜಿಲ್ಲಾ ಸಂಚಾಲಕ ಮುದಿಮಲ್ಲನ ಗೌಡ, ಮೆಡಿಕಲ್ ರೆಪ್ ಅಸೋಸಿಯೇಷನ್‌ನ ಅಫ್ರೋಜ್ ಅಹಮದ್, ಗ್ರಾಪಂ ನೌಕರರ ಸಂಘದ ಕಾರ್ಯದರ್ಶಿ ಬಸವರಾಜ್, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್. ಹಾಲೇಶನಾಯ್ಕ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಜಿ.ಡಿ. ಮಂಜುನಾಥ್, ನೇತ್ರಾವತಿ, ಎಲ್‌ಐಸಿ ಏಜೆಂಟರ ಸಂಘದ ಮುಖಂಡ ಸೋಮಶೇಖರ್ ಇತರರಿದ್ದರು.