ಎಚ್.ಎಸ್. ಶಿವಶಂಕರ್ 
ದಾವಣಗೆರೆ

ಸ್ವಾಮೀಜಿ ಮೇಲಿನ ಆಪಾದನೆ ತನಿಖೆಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಆಗ್ರಹ
  • ಸತ್ಯಾಸತ್ಯತೆ ಬೆಳಕಿಗೆ ತರಲಿ
ದಾವಣಗೆರೆ : ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮೇಲೆ ಬಂದಿರುವ ಆಪಾದನೆಯ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾಮೀಜಿ ಅವರು ಸಮಾಜದ ಸಂಘಟನೆ, ಹೋರಾಟ ಮಾಡುತ್ತಿದ್ದಾರೆ. ಕೆಲವರಿಗೆ ಅವರ ಏಳಿಗೆಯನ್ನು ಸಹಿಸಲು ಆಗುತ್ತಿಲ್ಲ. ಈ ಪ್ರಕರಣವನ್ನು ಬಳಸಿಕೊಂಡು ಅನೇಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲವರು ಸ್ವಾಮೀಜಿ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅದು ಕೇವಲ ಅರ್ಜಿಯಾಗಿದ್ದು ಎಫ್‌ಐಆರ್ ದಾಖಲಾಗಿಲ್ಲ. ಅರ್ಜಿ ಕೊಟ್ಟವರು ಕಾಣೆಯಾಗಿದ್ದಾರೆ. ಮಹಿಳಾ ಆಯೋಗ ಅವರನ್ನು ಕರೆಸಿ ಖಲೆಗಳನ್ನು ಪಡೆದು ಪ್ರಕರಣ ದಾಖಲಿಸಲಿ. ಸರ್ಕಾರ ಮಧ್ಯ ಪ್ರವೇಶಿಸಿ ಸತ್ಯಾಸತ್ಯತೆ ಬೆಳಕಿಗೆ ತರಲಿ ಎಂದು ಒತ್ತಾಯಿಸಿದರು.
ಇತ್ತೀಚೆಗೆ ರಾಜಕಾರಣಿಗಳು, ಹೋರಾಟಗಾರರು, ಕಾವಿಧಾರಿಗಳು, ವಾಣಿಜ್ಯೋದ್ಯಮಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರಾೃಪ್ ಮೂಲಕ ಭಯ ಸೃಷ್ಟಿಸಲಾಗುತ್ತಿದೆ, ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ಮರ್ಯಾದೆಗೆ ಹೆದರಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಪೀಠತ್ಯಾಗ ಮಾಡಿದ ಉದಾಹರಣೆಗಳಿವೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವುದು, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹನಿಟ್ರಾೃಪ್, ಬ್ಲಾೃಕ್‌ಮೇಲ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಸಮಾಜದ ಮುಖಂಡರಾದ ಗಂಗಾಧರ, ಯೋಗೀಶ್, ಆನಂದ್, ಶಿವಾನಂದ್, ಪರಮೇಶ್ವರ ಗೌಡ್ರು, ಧನಂಜಯ, ಭರತ್ ಸುದ್ದಿಗೋಷ್ಠಿಯಲ್ಲಿದ್ದರು.
ಹಣದ ಹೊಳೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಹಣದ ಹೊಳೆಯನ್ನೆ ಹರಿಸಿದ್ದಾರೆ ಎಂದು ಎಚ್.ಎಸ್. ಶಿವಶಂಕರ್ ಆರೋಪಿಸಿದರು.
ಮತದಾನದ ದಿನ ಕೆಲವರು ಸಂಜೆ ವರೆಗೂ ಕಾದು, ಹಣ ಬಂದಿಲ್ಲ ಎಂಬ ಕಾರಣಕ್ಕೆ ಮತ ಹಾಕಲು ಬೂತ್‌ಗಳಿಗೆ ಹೋಗಲಿಲ್ಲ. ಇಂಥ ಚುನಾವಣೆಯನ್ನು ಜಿಲ್ಲೆಯಲ್ಲಿ ನೋಡಿಲ್ಲ ಎಂದು ಅಭಿಪ್ರಾಯಪಟ್ಟರು.
ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.