ದಾವಣಗೆರೆಯಲ್ಲಿ ಸೋಮವಾರ, ಎಂಎಸ್‌ಎಂಇ ಪರಿಸರ ವ್ಯವಸ್ಥೆ ಕುರಿತ ಅರಿವು ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಐಎಡಿಬಿ ಕಾರ್ಯಪಾಲಕ ಇಂಜಿನಿಯರ್ ಮೋಹನ್‌ಕುಮಾರ್, ಪಡದಯ್ಯ ಹಿರೇಮಠ್, ಆರ್. ಗಣೇಶ್, ಎಸ್.ಜಿ. ಸರಸ್ವತಿ, ವೀರೇಶನಾಯ್ಕ ಇದ್ದರು. 
ದಾವಣಗೆರೆ

ಆತ್ಮನಿರ್ಭರ ಬಲ ತುಂಬಲಿ ಸ್ಥಳೀಯ ಉದ್ಯಮ

ಪ್ರಮುಖ ಮುಖ್ಯಾಂಶಗಳು

  • ಕೆಐಎಡಿಬಿ ಎಇ ಮೋಹನ್‌ಕುಮಾರ್ ಆಶಯ
  • ಜಿಡಿಪಿಗೆ ಶೇ. 30ರಷ್ಟು ಕೊಡುಗೆಯಿತ್ತ ಎಂಎಸ್‌ಎಂಇ
  • ಎಂಎಸ್‌ಎಂಇ ಪರಿಸರ ವ್ಯವಸ್ಥೆ ಅರಿವು ಕಾರ್ಯಾಗಾರ
ದಾವಣಗೆರೆ: ಆತ್ಮನಿರ್ಭರ ಭಾರತ ನಿರ್ಮಾಣವಾಗಲು ಸ್ಥಳೀಯ ಉದ್ಯಮಗಳು ಬಲಗೊಳ್ಳಬೇಕು. ಸುತ್ತಮುತ್ತಲಿನ ಸಣ್ಣ ಉದ್ದಿಮೆದಾರರನ್ನು ಪ್ರೋತ್ಸಾಹಿಸಬೇಕು ಎಂದು ಕೆಐಎಡಿಬಿ ಕಾರ್ಯಪಾಲಕ ಇಂಜಿನಿಯರ್ ಮೋಹನ್‌ಕುಮಾರ್ ಆಶಿಸಿದರು.
ಎಂಎಸ್‌ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ವೇಗಗೊಳಿಸುವುದು (ರ‌್ಯಾಂಪ್) ಯೋಜನೆಯಡಿ ನಗರದ ಸಬ್ಜಿ ಸಂಗಂ ಹೋಟೆಲ್ ಸಭಾಂಗಣದಲ್ಲಿ ಸೋಮವಾರ, ಎಂಎಸ್‌ಎಂಇ ಪರಿಸರ ವ್ಯವಸ್ಥೆ ಕುರಿತಂತೆ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳು ಭಾರತದ ಆರ್ಥಿಕತೆಯ ಉದಯದ ಸಂಕೇತವಾಗಿವೆ. ದೇಶದಲ್ಲಿ 6 ಕೋಟಿಗೂ ಹೆಚ್ಚು ಎಂಎಸ್‌ಎಂಇ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು ಉದ್ಯೋಗ ಸೃಷ್ಟಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಸ್ವಾವಲಂಬನೆಗೆ ಮಹತ್ವದ ಕೊಡುಗೆ ನೀಡಿವೆ ಎಂದರು.
ಎಂಎಸ್‌ಎಂಇ ದೇಶದ ಪ್ರಗತಿಯ ಇಂಜಿನ್‌ಗಳು. ನಾವೀನ್ಯತೆ, ಉದ್ಯಮಶೀಲತೆ ಹಾಗೂ ಆತ್ಮನಿರ್ಭರ ಭಾರತದ ಅಭಿವೃದ್ಧಿಯ ಶಕ್ತಿ ಕೇಂದ್ರಗಳಾಗಿವೆ. ಉದ್ಯೋಗ ಸೃಷ್ಟಿಯಲ್ಲಿ ಕೃಷಿ ನಂತರ ಎರಡನೇ ಸ್ಥಾನದಲ್ಲಿರುವ ಎಂಎಸ್‌ಎಂಇ, ಜಿಡಿಪಿಗೆ ಶೇ. 30ರಷ್ಟು ಕೊಡುಗೆ ನೀಡುತ್ತಿವೆ. ರಫ್ತು ವಲಯದಲ್ಲಿ ಶೇ. 40ಕ್ಕೂ ಹೆಚ್ಚು ಪಾಲು ಹೊಂದಿವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮತೋಲನ ಅಭಿವೃದ್ಧಿಗೆ ನೆರವಾಗಿವೆ ಎಂದರು.
ಭಾರತದ ಕೈಗಾರಿಕಾ ತಾಣಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿರುವ ಕರ್ನಾಟಕ, ಕೈಗಾರಿಕೆ ಬೆಳವಣಿಗೆಯಲ್ಲಿನ ಮೊದಲ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆದಿದೆ. ರಾಜ್ಯದಲ್ಲಿ 2025ರ ಹೊತ್ತಿಗೆ 8.5 ಲಕ್ಷಕ್ಕೂ ಹೆಚ್ಚು ನೊಂದಾಯಿತ ಎಂಎಸ್‌ಎಂಇಗಳನ್ನು ಹೊಂದಿದ್ದು, 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿವೆ.
ಎಂಎಸ್‌ಎಂಇ ಇಂದಿನ ಮೂರನೇ ಹಂತದ ನಗರಗಳಲ್ಲಿಯೂ ಯಶಸ್ಸು ಕಾಣುತ್ತಿದೆ. ಹೀಗಾಗಿ ಯುವಜನರು ಉದ್ಯೋಗ ಅರಸದೆ ಉದ್ಯೋಗ ಸೃಷ್ಟಿಸುವ ಕಾಲ ಬಂದಿದೆ. ನವೀನ ಆಲೋಚನೆಗಳನ್ನು ಅನುಷ್ಠಾನಗೊಳಿಸಿ ಸಮಾಜಕ್ಕೆ ಕೊಡುಗೆ ನೀಡಲು ಇದು ಉತ್ತಮ ವೇದಿಕೆ. ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಡದಯ್ಯ ಹಿರೇಮಠ್ ಮಾತನಾಡಿ ಜಿಲ್ಲೆಯಲ್ಲಿ ಎಂಎಸ್‌ಎಂಇ ಪ್ರೋತ್ಸಾಹಕ್ಕೆ ವಾರ್ಷಿಕ 2236 ಕೋಟಿ ರೂ. ಗುರಿ ಇದ್ದು, ಈವರೆಗೆ 2055 ಕೋಟಿ ರೂ. (ಶೇ. 91.78) ಸಾಲ ನೀಡಿದ್ದೇವೆ. 2025ರ ಡಿಸೆಂಬರ್ ಅಂತ್ಯಕ್ಕೆ 12725 ಮಂದಿಗೆ ಸಾಲ ನೀಡಿದ್ದೇವೆ. ಸೂಕ್ಷ್ಮ ಘಟಕಗಳು ಶೇ.80ರಷ್ಟು ಲಾಭ ಪಡೆದಿವೆ ಎಂದರು.
ಪ್ರತಿಯೊಬ್ಬರಲ್ಲೂ ಆರ್ಥಿಕ ಶಿಸ್ತು ಮುಖ್ಯ. ಬ್ಯಾಂಕ್‌ಗಳು ವ್ಯಕ್ತಿಯ ಕ್ರೆಡಿಟ್ ಇನ್‌ಫಾರ್ಮೇಷನ್ ಮಾಹಿತಿ ಆಧರಿಸಿ ಸಾಲ ನೀಡಲಿವೆ. ಸಾಲವನ್ನೇ ಪಡೆಯದ ಗ್ರಾಹಕರ ಸಿಬಿಲ್ ಸ್ಕೋರ್ ನೋಡದೆಯೇ ಸಾಲ ನೀಡಲು ನಿರಾಕರಣೆ ಮಾಡುವಂತಿಲ್ಲ. ಆದರೆ ಆತ ಬಾಕಿದಾರನೇ ಎಂದು ದೃಢೀಕರಣ ಆಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್ ಮಾತನಾಡಿ ಎಂಎಸ್‌ಎಂಇ ಬಲವರ್ಧನೆ ಮಾಡಿದಲ್ಲಿ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿರುವ ಭಾರತ ಮುಂಬರುವ ದಿನದಲ್ಲಿ ಎರಡನೇ ಸ್ಥಾನಕ್ಕೆ ಬರಲಿದೆ. ಹೊಸ ಉದ್ಯಮಗಳು ಬರಬೇಕು. ಈಗಿರುವ ಸ್ಥಳೀಯ ಉದ್ಯಮಗಳು ಮತ್ತೊಂದು ಹಂತ ತಲುಪಬೇಕಿದೆ ಎಂದು ಆಶಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂಎಸ್‌ಎಂಇ ನಿರ್ದೇಶನಾಲಯ, ಕೆಸಿಟಿಯು, ಟೆಕ್ಸಾಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕ ವೀರೇಶನಾಯ್ಕ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕಿ ಎಸ್.ಜಿ. ಸರಸ್ವತಿ ಇದ್ದರು. ಸಹಾಯಕ ನಿರ್ದೇಶಕ ಎಲ್. ನಾಗೇಶ್ ಸ್ವಾಗತಿಸಿದರು. ಬಸವರಾಜ್ ವಂದಿಸಿದರು. ಗೋಪಿನಾಥ್ ತಾಂತ್ರಿಕ ಅಧಿವೇಶನ ನಡೆಸಿಕೊಟ್ಟರು.

ಸ್ಥಳೀಯ ಉದ್ಯಮ ಮಾಡಲು ಬಯಸುವವರಿಗೆ ಇದೀಗ ಕೃಷಿ ಭೂಮಿಯ ಕನಿಷ್ಠ 2 ಎಕರೆವರೆಗೆ ಭೂ ಪರಿವರ್ತನೆ ಮಾಡದ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. 30 ದಿನದಲ್ಲಿ ಕಟ್ಟಡ ನಿರ್ಮಾಣದ ಯೋಜನೆಗೆ ಅನುಮೋದನೆ ಪಡೆದುಕೊಳ್ಳದಿದ್ದಲ್ಲಿ 31ನೇ ದಿನದಲ್ಲಿ ಈ ಅನುಮೋದನೆ ಸ್ವಯಂಚಾಲಿತವಾಗಿ ಆಗಲಿದೆ. ಇದರ ಲಾಭ ಪಡೆಯಬೇಕು.