ಚನ್ನಗಿರಿ: ಪಟ್ಟಣದಲ್ಲಿ ಶಾಶ್ವತ ಶ್ರೀ ಭುವನೇಶ್ವರಿ ಪ್ರತಿಮೆಯನ್ನು ಅಲಂಕಾರಗೊಂಡ ವಾಹನದಲ್ಲಿ ಇಟ್ಟು ಮೆರವಣಿಗೆ ಮಾಡುವುದರಿಂದ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಬರಲಿದೆ ಎಂದು ಡಾ. ರಾಜ್ಕುಮಾರ್ ಅಭಿಮಾನಿ ಸಂಘದ ತಾಲೂಕಾಧ್ಯಕ್ಷ ಗೌ. ಹಾಲೇಶ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಎನ್.ಜೆ. ನಾಗರಾಜ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕನ್ನಡ ಕೇವಲ ಭಾಷೆಯಾಗದೆ ನಮ್ಮ ದೇಹದ ಉಸಿರಾಗಬೇಕು. ಕನ್ನಡ ಹಬ್ಬಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರಗು ನೀಡಿದಾಗ ಮಾತ್ರ ಆಚರಣೆಗೆ ಜೀವಕಳೆ ತುಂಬಲು ಸಾಧ್ಯ ಎಂದರು.
ತಹಸೀಲ್ದಾರ್ ಎನ್.ಜೆ. ನಾಗರಾಜ್ ಮಾತನಾಡಿ, ಶಾಶ್ವತ ಭುವನೇಶ್ವರಿ ಪ್ರತಿಮೆ ನಿರ್ಮಾಣಕ್ಕೆ ಪ್ರಸ್ತುತ ಕಡಿಮೆ ಕಾಲಾವಕಾಶ ಇರುವುದರಿಂದ ಮುಂದಿನ ದಿನಗಳಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗುವುದು. ನವೆಂಬರ್ 1ರಂದು ಸರ್ಕಾರಿ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ವೈಭವದಿಂದ ಜರುಗಲಿದೆ. ಎಪಿಎಂಸಿ ಮಾರುಕಟ್ಟೆಯ ಶ್ರೀ ಭುವನೇಶ್ವರಿ ದೇವಾಲಯದಿಂದ ಕನ್ನಡಾಂಬೆಯ ಭಾವಚಿತ್ರವನ್ನು ವಾಹನದ ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ತರಲಾಗುವುದು ಎಂದರು.
ತಹಸೀಲ್ದಾರ್ ಎನ್.ಜೆ. ನಾಗರಾಜ್ ಧ್ವಜಾರೋಹಣ ನೆರವೇರಿ ಸುವರು. ಶಾಸಕ ಬಸವರಾಜ್ ಶಿವಗಂಗಾ ಅಧ್ಯಕ್ಷತೆ ವಹಿಸುವರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸರ್ದಾರ್ ಅಹಮ್ಮದ್ ಅವರಿಗೆ ಸಭೆಯ ಸಮ್ಮತಿಯಂತೆ ಸನ್ಮಾನಿಸಲಾಗುವುದು. ಕ್ರೀಡಾಂಗಣಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಲಭ ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪತ್ರಕರ್ತ ಮಹೇಶ್ ಮಾತನಾಡಿ ಅಳಿವಿನಂಚಿನಲ್ಲಿರುವ ಐತಿಹಾಸಿಕ ಸ್ಮಾರಕಕ್ಕೆ ಸೂಕ್ತ ಗೌರವ ಸಿಗುವಂತಾಗಬೇಕು ಎಂದು ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎಲ್.ಜಿ. ಮಧುಕುಮಾರ್, ತಾಪಂ ಇಒ ಎಂ.ಆರ್. ಪ್ರಕಾಶ್, ಬಿಇಒ ಎಲ್. ಜಯಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ಕುಮಾರ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್, ಪುರಸಭೆ ಮುಖ್ಯಾಧಿಕಾರಿ ಜೆ.ವಿ. ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಪವಿತ್ರಾ, ಸಿಡಿಪಿಒ ನಿರ್ಮಲಾ, ಹಿರಿಯ ಆರೋಗ್ಯ ನಿರೀಕ್ಷಕ ಟಿ. ಲೋಕೇಶ್, ಜಿ. ಹಾಲೇಶ್ ಇದ್ದರು.
ಪಟ್ಟಣದ ಅಂಗಡಿ ಮುಂಗಟ್ಟುಗಳಲ್ಲಿ ನಿಯಮ ಉಲ್ಲಂಘಿಸಿ ಅಳವಡಿಸ ಲಾಗಿರುವ ಇಂಗ್ಲಿಷ್ ನಾಮಫಲಕಗಳನ್ನು ತಕ್ಷಣ ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಬೇಕು.ಮಲ್ಲಾನಾಯ್ಕ ಅಜ್ಜಿಹಳ್ಳಿ, ಕನ್ನಡ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ.