ಸಿಪಿಐ ಶತಮಾನೋತ್ಸವ ಹಿನ್ನೆಲೆಯಲ್ಲಿ ಬುಧವಾರ ದಾವಣಗೆರೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಗಮಿಸಿದ ರಾಜ್ಯವ್ಯಾಪಿ ಜಾಥಾವನ್ನು ಸ್ವಾಗತಿಸಲಾಯಿತು. ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಎ.ಬಿ. ರಾಮಚಂದ್ರಪ್ಪ, ಆವರಗೆರೆ ಚಂದ್ರು, ಎಚ್.ಜಿ. ಉಮೇಶ್, ಎಚ್.ಎಂ. ಸಂತೋಷ್, ಬಿ.ಸಿ.ಹನುಮೇಗೌಡ ಇತರರಿದ್ದರು.
- ಮನೆ ನಿರ್ಮಾಣಕ್ಕೆ ಸರ್ಕಾರದ ಅನುದಾನ ಹೆಚ್ಚಲಿ
- ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿಕೆ
- ದಾವಣಗೆರೆಯಲ್ಲಿ ಜಾಥಾದ ಬಹಿರಂಗ ಸಭೆ
ದಾವಣಗೆರೆ: ರಾಜ್ಯದಲ್ಲಿನ ನಿರ್ವಸತಿಗರಿಗೆ ಸೂರು ಕಲ್ಪಿಸಲು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಫೆಬ್ರವರಿಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿರುವುದಗಿ ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ಸಿಪಿಐ ಶತಮಾನೋತ್ಸವ ಹಿನ್ನೆಲೆಯಲ್ಲಿ ಸಮತಾ ರಾಜ್ಯ ಕಟ್ಟುವ ಕನಸಿನೊಂದಿಗೆ ಪಕ್ಷವು ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಜಾಥಾ ಬುಧವಾರ ದಾವಣಗೆರೆ ಆಗಮಿಸಿದ ಸಂದರ್ಭದಲ್ಲಿ, ಜಯದೇವ ವೃತ್ತದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ಮನೆ, ನಿವೇಶನಗಳಿಲ್ಲ. ಹೀಗಾಗಿ ‘ನಾವು ಹೊಂಟೆವಾ ಮುಖ್ಯಮಂತ್ರಿ ನೋಡಲಿಕ್ಕಾ, ಸೈಟು-ಮನೆ ಕೇಳಲಿಕ್ಕಾ’ ಎಂಬ ಘೋಷಣೆ ಸಹಿತ ಈ ಹೋರಾಟ ನಡೆಸಲಾಗುತ್ತಿದೆ. ಸರ್ಕಾರಿ ಜಮೀನುಗಳಲ್ಲಿ ನಿವೇಶನ ಸೌಲಭ್ಯ ಕಲ್ಪಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದರು.
ಕೇರಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ತಲಾ 7 ಲಕ್ಷ, 5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರ ನೀಡುವ 1.20 ಲಕ್ಷ ರೂ. ಏನಕ್ಕೂ ಸಾಲದು. ಇದನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಬ್ರಿಟೀಷರು ದೇಶದ ಜನಸಾಮಾನ್ಯರು, ರೈತರು, ದುಡಿಯುವ ಜನರನ್ನು ಶೋಷಣೆ ಮಾಡುತ್ತಿದ್ದರು. ಬಂಡವಾಳ ಶಾಹಿಗಳು, ಭೂ ಮಾಲೀಕರು ಕೂಡ ಹಿಂಸೆ ನೀಡುತ್ತಿದ್ದರು. ಸಮತಾ ಸಮಾಜಕ್ಕಾಗಿ ರಷ್ಯಾ ಮಾದರಿಯಲ್ಲಿ ಭಾರತದಲ್ಲೂ ಹೋರಾಟಕ್ಕೆ ಸಿಪಿಐ ನಾಯಕರು ನಿರ್ಧರಿಸಿದರು. ಹಲವು ವಿರೋಧಗಳ ನಡುವೆಯೂ ಪಕ್ಷ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದರು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ ಒಂದೇ ಅವಧಿಯಲ್ಲಿ ರೂಪುಗೊಂಡವು. ಸಿಪಿಐ, ದೇಶದ ಸ್ವಾತಂತ್ರೃ ಸಂಗ್ರಾಮದಲ್ಲಿ ಸಕ್ರಿಯ ಪತ್ರ ವಹಿಸಿದರೆ, ಇದರಿಂದ ದೂರವೇ ಉಳಿದ ಆರ್‌ಎಸ್‌ಎಸ್, ಧರ್ಮಗಳ ನಡುವೆ ಬಿರುಕು ಸೃಷ್ಟಿಸಿತು ಎಂದು ದೂರಿದರು.
ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಆವರಗೆರೆ ಚಂದ್ರು, ಮುಖಂಡರಾದ ಎಚ್.ಜಿ. ಉಮೇಶ್, ಎಚ್.ಎಂ. ಸಂತೋಷ್, ಬಿ.ಸಿ.ಹನುಮೇಗೌಡ, ಪಿ. ಷಣ್ಮುಖಸ್ವಾಮಿ, ಜಿ. ಯಲ್ಲಪ್ಪ, ಎಚ್.ಕೆ. ಕೊಟ್ರಪ್ಪ, ಮಾದಿಹಳ್ಳಿ ಮಂಜುನಾಥ್, ಕೆ.ಜಿ. ಶಿವಮೂರ್ತಿ, ಕಲಿಗಾರ ರಫಿವುಲ್ಲಾ, ಐರಣಿ ಚಂದ್ರು, ಕೆ.ಜಿ.ಶಿವಮೂರ್ತಿ, ಐರಣಿ ಚಂದ್ರು, ಸುರೇಶ್ ಯರಗುಂಟೆ, ಎಚ್.ಕೆ.ಆರ್.ಸುರೇಶ್, ಎಸ್.ಎಂ. ಸಿದ್ದಲಿಂಗಪ್ಪ, ಸರೋಜಾ, ವಿ.ಲಕ್ಷ್ಮಣ್, ನರೇಗಾ ರಂಗನಾಥ್, ಕೆರನಹಳ್ಳಿ ರಾಜು, ಎ.ತಿಪ್ಪೇಶ್ ಇತರರಿದ್ದರು.
ನ.30ರಂದು ಕೆಜಿಎಫ್‌ನ ವೇಮಗಲ್‌ನಿಂದ ಆರಂಭಗೊಂಡ ಜಾಥಾವು ವಿವಿಧ ಜಿಲ್ಲೆಗಳ ಮೂಲಕ ಬುಧವಾರ ದಾವಣಗೆರೆಗೆ ಆಗಮಿಸಿತು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಾಗತಿಸಲಾಗಿ ಮೆರವಣಿಗೆ ಮೂಲಕ ಜಯದೇವ ವೃತ್ತಕ್ಕೆ ಆಗಮಿಸಿತು. ಬಹಿರಂಗ ಸಭೆ ಬಳಿಕ ಜಾಥಾವು ನಂತರ ಹದಡಿ ರಸ್ತೆಯ ಮೂಲಕ ನಲ್ಲೂರು, ಚನ್ನಗಿರಿ ಕಡೆಗೆ ಸಾಗಿತು.
ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ವಿಬಿಜಿ ರಾಮ್ ಜಿ ಎಂದು ಬದಲಿಸಲಾಗಿದೆ. ಗಾಂಧೀಜಿ ವಿರೋಧಿ ಧೋರಣೆಯ ಆರೆಸ್ಸೆಸ್ ಹೇಳಿದಂತೆ ಬಿಜೆಪಿ ಆಡಳಿತ ನಡೆಸುತ್ತಿದೆ. ಮುಂಬರುವ ದಿನದಲ್ಲಿ ಕರೆನ್ಸಿ ನೋಟಿನಲ್ಲಿರುವ ಗಾಂಧೀಜಿ ಚಿತ್ರವೂ ನಾಪತ್ತೆಯಾಗುವ ಕಾಲ ದೂರವಿಲ್ಲ.