ಜಮೀನು ಮಟ್ಟ ಮಾಡುವ ಹೆಸರಿನಲ್ಲಿ ಹಿಟಾಚಿ, ಲಾರಿಗಳ ಮೂಲಕ ಮಣ್ಣು ಸಾಗಿಸುತ್ತಿರುವುದು. Soil Plunder
ದಾವಣಗೆರೆ

ಲೆವೆಲಿಂಗ್ ನೆಪದಲ್ಲಿ ಮಣ್ಣು ಲೂಟಿ

ಇಟ್ಟಿಗೆ ಭಟ್ಟಿಗಳು, ಲೇಔಟ್‌ಗಳು ಹಾಗೂ ವಾಣಿಜ್ಯ ಉದ್ದೇಶಕ್ಕೆ ಮಾರಾಟ

ಎಚ್.ಸಿ. ಕೀರ್ತಿಕುಮಾರ್ ಹರಿಹರ

ತಾಲೂಕಿನಾದ್ಯಂತ ಜಮೀನು ಮಟ್ಟ ಮಾಡುವ (ಲ್ಯಾಂಡ್ ಲೆವೆಲಿಂಗ್) ಮುಖವಾಡ ಧರಿಸಿ, ಯಾವುದೇ ಅಂಜಿಕೆ-ಅಳುಕಿಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ ಮಣ್ಣನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ಸಾಗಿದೆ.

ರೈತರಿಗೆ ಆಮಿಷ ಒಡ್ಡಿ ಅಥವಾ ಅವರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ನಡೆಯುತ್ತಿರುವ ಈ ದಂಧೆ, ತಾಲೂಕಿನ ಭೂ ಸ್ವರೂಪವನ್ನೇ ಬದಲಾಯಿಸುತ್ತಿದೆ. ಫಲವತ್ತಾದ ಮೇಲ್ಪದರದ ಮಣ್ಣು ಇಟ್ಟಿಗೆ ಭಟ್ಟಿಗಳಿಗೆ, ಖಾಸಗಿ ಲೇಔಟ್‌ಗಳಿಗೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಭಾರೀ ಬೆಲೆಗೆ ಮಾರಾಟವಾಗುತ್ತಿದೆ.

ಹಗಲಿನಲ್ಲಿ ಶಾಂತವಾಗಿ ಕಾಣುವ ಕೃಷಿ ಭೂಮಿಗಳು, ಕತ್ತಲಾಗುತ್ತಿದ್ದಂತೆ ಜೆಸಿಬಿ ಮತ್ತು ಟಿಪ್ಪರ್‌ಗಳ ಆರ್ಭಟಕ್ಕೆ ನಡುಗುತ್ತಿವೆ. ರಾತ್ರಿ ಸಮಯವನ್ನೇ ಮಣ್ಣು ಸಾಗಾಟ ದಂಧೆಗೆ ಆಯ್ಕೆ ಮಾಡಿಕೊಂಡಿರುವ ಮಣ್ಣಿನ ಮಾಫಿಯಾ, ತಾಲೂಕಿನ ಫಲವತ್ತಾದ ಕೃಷಿ ಭೂಮಿಯನ್ನು ನುಂಗಿ ನೀರು ಕುಡಿಯುತ್ತಿದೆ. ಎಲ್ಲವೂ ಗೊತ್ತಿದ್ದೂ ಸಂಬಂಧಪಟ್ಟ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ.

ಜಮೀನು ತಗ್ಗು-ದಿಣ್ಣೆಯಾಗಿದೆ, ವ್ಯವಸಾಯಕ್ಕೆ ಯೋಗ್ಯ ಮಾಡಿಕೊಳ್ಳುತ್ತೇವೆ ಎಂದು ಇಲಾಖೆಗಳಿಂದ ಕಣ್ಣೊರೆಸುವ ತಂತ್ರದ ಮೂಲಕ ಅನುಮತಿ ಪಡೆಯುವ ಅಥವಾ ಯಾವುದೇ ಅನುಮತಿಯೇ ಇಲ್ಲದೆ ನುಗ್ಗುವ ದಂಧೆಕೋರರು, ನೂರಾರು ಟ್ರಿಪ್ ಮಣ್ಣನ್ನು ರಾಜಾರೋಷವಾಗಿ ಸಾಗಿಸುತ್ತಿದ್ದಾರೆ.

ಅಧಿಕಾರಿಗಳು ಎಚ್ಚೆತ್ತುಕೊಂಡು, ರಾತ್ರಿ ವೇಳೆ ಹರಿಹರ ತಾಲೂಕಿನಲ್ಲಿ ನಡೆಯುವ ಈ ಅಕ್ರಮ ಮಣ್ಣು ಸಾಗಾಟ ದಂಧೆಗೆ ಬ್ರೇಕ್ ಹಾಕದಿದ್ದರೆ ಭವಿಷ್ಯದ ದಿನಗಳಲ್ಲಿ ದಂಡ ತೆರಬೇಕಾಗುತ್ತದೆ.

ರೈತರು ಮತ್ತು ಪರಿಸರಕ್ಕೆ ಭೀತಿ

ಮೇಲ್ನೋಟಕ್ಕೆ ಇದು ಕೇವಲ ಮಣ್ಣಿನ ವ್ಯಾಪಾರ ದಂತೆ ಕಂಡರೂ, ಭವಿಷ್ಯದಲ್ಲಿ ಇದು ಹರಿಹರ ತಾಲೂಕಿನ ಕೃಷಿ ವಲಯಕ್ಕೆ ಮರಣಶಾಸನ ಬರೆಯಲಿದೆ. ಫಲವತ್ತಾದ ಮಣ್ಣು ಕೊಚ್ಚಿಹೋಗುತ್ತಿರುವುದ ರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅಕ್ಕ ಪಕ್ಕದ ರೈತರ ಜಮೀನುಗಳಿಗೂ ತೊಂದರೆಯಾಗುತ್ತಿದೆ.

ಗೊತ್ತಿದ್ದೂ ಕಣ್ಮುಚ್ಚಿ ಕುಳಿತಿದೆಯೇ ಇಲಾಖೆ?

ಈ ಇಡೀ ಕೃತ್ಯದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ನಿಗೂಢ ಮೌನ. ಸಾರ್ವಜನಿಕರು ನೂರಾರು ಬಾರಿ ದೂರು ನೀಡಿದರೂ, ಟಿಪ್ಪರ್‌ಗಳು ಮಣ್ಣು ಸಾಗಾಟ ಮಾಡುತ್ತಿರುವುದು ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಆಶೀರ್ವಾದವಿಲ್ಲದೆ ಇಷ್ಟು ದೊಡ್ಡ ಮಟ್ಟದ ದಂಧೆ ರಾತ್ರಿ ವೇಳೆ ನಡೆಯಲು ಸಾಧ್ಯವೇ ಇಲ್ಲ. ಇಲಾಖೆಗಳು ಈ ಮಾಫಿಯಾಕ್ಕೆ ರಕ್ಷಣೆಯಾಗಿ ನಿಂತಿವೆ ಎಂಬುದು ಸಾರ್ವಜನಿಕರ ನೇರ ಆರೋಪವಾಗಿದೆ.

ರಾತ್ರಿ ಸಕ್ರಿಯ

ದಂಧೆಕೋರರಿಗೆ ರಾತ್ರಿಯೇ ಅತ್ಯಂತ ಸೇಫ್ ಸಮಯ. ರಾತ್ರಿ 8 ಗಂಟೆಯಾಗುತ್ತಿದ್ದಂತೆ ರಸ್ತೆಗಿಳಿಯುವ ಅಕ್ರಮ ಮಣ್ಣಿನ ಟಿಪ್ಪರ್‌ಗಳು ರಾತ್ರಿಯಿಡೀ ಅತಿ ವೇಗವಾಗಿ ಸಂಚರಿಸುತ್ತಿವೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿವೆ. ಟಿಪ್ಪರ್‌ಗಳ ಹಾವಳಿಗೆ ಗ್ರಾಮಸ್ಥರು ನೆಮ್ಮದಿಯಿಂದ ನಿದ್ರಿಸಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಜಾರಿಗೊಳಿಸಬೇಕಾದ ಅಧಿಕಾರಿಗಳು ಕಚೇರಿ ಮುಚ್ಚಿ ಮನೆ ಸೇರುವ ಸಮಯವನ್ನೇ ಬಂಡವಾಳ ಮಾಡಿಕೊಂಡಿರುವ ಈ ಮಾಫಿಯಾ, ರಾತ್ರೋರಾತ್ರಿ ಮಣ್ಣನ್ನು ಕರಗಿಸುತ್ತಿದೆ.

ಅಪಾಯಕಾರಿ ಬೆಳವಣಿಗೆ

ಕೃಷಿ ಭೂಮಿಯ ಮಣ್ಣನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದು ಅಪಾಯಕಾರಿ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಒಂದು ಅಡಿ ಮಣ್ಣನ್ನು ತೆಗೆದರೆ ಮತ್ತೆ ಫಲವತ್ತತೆ ಕಾಯ್ದುಕೊಳ್ಳಲು ಕನಿಷ್ಟ ಹತ್ತು ವರ್ಷ ಬೇಕಾಗುತ್ತದೆ. ಹೀಗಾಗಿ ಕೃಷಿ ಭೂಮಿಯ ಮಣ್ಣನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ಕೃಷಿ ಇಲಾಖೆ ಪ್ರೋತ್ಸಾಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿಯ ಮಣ್ಣನ್ನು ಬಳಕೆ ಮಾಡುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಈಗ ಹಣ ಬರುತ್ತದೆ ಎಂದು ರೈತರು ಹೊಲದ ಮಣ್ಣನ್ನು ಮಾರಾಟ ಮಾಡಲು ಉತ್ಸುಕತೆ ತೋರಬಹುದು. ಹಣ ಒಂದು ರೀತಿ ರೈತರಿಗೆ ನಶೆಯಾಗಿ ವರ್ತಿಸುತ್ತದೆ. ಹೀಗಾಗಿ ದುಡ್ಡಿನ ಆಸೆಗೆ ಮಾರುತ್ತಾರೆ. ಭವಿಷ್ಯದ ದಿನಗಳಲ್ಲಿ ಅವರು ದೊಡ್ಡ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಗುಡ್ಡಗಾಡನ್ನು ಸಮತಟ್ಟು ಮಾಡಲು ಅಂತಹ ಕಡೆ ಮಣ್ಣನ್ನು ಸಾಗಾಟ ಮಾಡಬಹುದು. ಆದರೆ ಕೃಷಿ ಭೂಮಿಯ ಮಣ್ಣನ್ನು ಮಾರಾಟ ಮಾಡಬಾರದು. ರೈತರು ಈಗ ಹಣ ಸಿಗುವ ಹಣವನ್ನು ನೋಡಬಾರದು. ಭವಿಷ್ಯದಲ್ಲಿ ಅವರು ಈಗ ಸಿಗುವ ಹಣಕ್ಕಿಂತ ಹತ್ತು ಪಟ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯೆಗೆ ಸಿಗದ ಅಧಿಕಾರಿಗಳು

ಹರಿಹರ ತಾಲೂಕಿನಲ್ಲಿ ಮಣ್ಣು ಮಾಫಿಯಾ ಅತಿರೇಕಕ್ಕೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಭೂಗರ್ಭ ಇಲಾಖೆ ಅಧಿಕಾರಿಗಳನ್ನು ಸತತವಾಗಿ ಸಂಪರ್ಕಿಸಿದರೂ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಜಮೀನು ಮಟ್ಟ ಮಾಡಲು ರಾಯಲ್ಟಿ ಪಾವತಿ ಮಾಡಿದವರಿಗೆ ಅನುಮತಿ ನೀಡಲಾಗಿದೆ. ಇದನ್ನು ಹೊರತು ಪಡಿಸಿ ಬೇರೆ ಭಾಗದಲ್ಲಿ ಮಣ್ಣನ್ನು ತೆಗೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು.
ಜಿ. ಸಂತೋಷ್ ಕುಮಾರ್, ತಹಸೀಲ್ದಾರ್, ಹರಿಹರ