ಪಶು ಚಿಕಿತ್ಸಾ ಕೇಂದ್ರದ ಮೇಲ್ಛಾವಣಿ ಸಿಮೆಂಟ್ ಕಾಂಕ್ರಿಟ್ ಕಳಚಿರುವುದು.Veterinary center 
ದಾವಣಗೆರೆ

ಕುಸಿಯುವ ಸ್ಥಿತಿಯಲ್ಲಿ ಹಾಲುವರ್ತಿ ಪಶು ಚಿಕಿತ್ಸಾ ಕೇಂದ್ರ

ಪ್ರಮುಖ ಮುಖ್ಯಾಂಶಗಳು

  • ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ
  • ಕಳಚಿ ಬೀಳುತ್ತಿದೆ ಮೇಲ್ಛಾವಣಿಯ ಸಿಮೆಂಟ್ ಕಾಂಕ್ರಿಟ್
  • ಪರಿಕರ, ದಾಖಲೆಗಳನ್ನು ಸಂಗ್ರಹಿಸಿಡಲು ಸವಾಲು
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಆನಗೋಡು ಹೋಬಳಿಯ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲುವರ್ತಿ ಗ್ರಾಮದಲ್ಲಿರುವ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಹೊಸ ಕಟ್ಟಡ ನಿರ್ಮಾಣದ ಅಗತ್ಯವಿದೆ.
1995ರಲ್ಲಿ ಅಂದಿನ ರಾಜ್ಯಸಭಾ ಸದಸ್ಯ ಕೆ.ಆರ್. ಜಯದೇವಪ್ಪ ಹಾಗೂ ಭರಮಸಾಗರ ಶಾಸಕ ಎಂ.ಚಂದ್ರಪ್ಪ ಇವರ ಶಂಕುಸ್ಥಾಪನೆಯೊಂದಿಗೆ ಕಟ್ಟಡ ನಿರ್ಮಾಣ ಆರಂಭಗೊಂಡು, 1997ರಲ್ಲಿ ಉದ್ಘಾಟನೆಯಾಯಿತು.
ಆದರೆ ಮೂರು ದಶಕ ಕಳೆದಂತೆ ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆಗಳ ಸಿಮೆಂಟ್ ಕಾಂಕ್ರಿಟ್ ಕಳಚಿ ಬೀಳುತ್ತಿದೆ. ಮಳೆಗಾಲದಲ್ಲಿ ಮಳೆ ನೀರು ಒಳನುಗ್ಗಿ ಕೊಠಡಿಗಳು ಬಳಕೆಗೆ ಅಸಾಧ್ಯವಾಗಿದೆ. ಕಿಟಕಿ ಬಾಗಿಲುಗಳು ತುಕ್ಕು ಹಿಡಿದು ಜೀರ್ಣಾವಸ್ಥೆ ತಲುಪಿದೆ.
2014-15ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ 50 ಸಾವಿರ ರೂ. ವೆಚ್ಚದಲ್ಲಿ ಮೇಲ್ಛಾವಣಿ ದುರಸ್ತಿ ಮಾಡಲಾಗಿದ್ದರೂ ಬಳಿಕ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಕಟ್ಟಡ ಸಂಪೂರ್ಣ ಹಾಳಾಗುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಕೇಂದ್ರದ ವ್ಯಾಪ್ತಿಗೆ ಹಾಲುವರ್ತಿ, ಕೆಂಚಮ್ಮನಹಳ್ಳಿ ಹಾಗೂ ಹೊಸಳ್ಳಿ ಗ್ರಾಮಗಳು ಸೇರಿವೆ. ನಿತ್ಯ ಹತ್ತಾರು ರಾಸುಗಳು ಚಿಕಿತ್ಸೆಗೆ ಬರುತ್ತಿದ್ದು, ಈ ಕಟ್ಟಡದ ದುಸ್ಥಿತಿಯು ಕೆಲಸಗಳನ್ನು ಹೆಚ್ಚು ಕಠಿಣಗೊಳಿಸಿದೆ. ಪರಿಕರ ಹಾಗೂ ದಾಖಲೆಗಳನ್ನು ಸಂಗ್ರಹಿಸಿಡುವುದು ಸವಾಲಾಗಿದೆ. ಮಳೆ ನೀರು ಸುರಿಯುತ್ತಿರುವ ಕೊಠಡಿಯನ್ನು ಬದಲಾಯಿಸಿ ಬೇರೆ ಸ್ಥಳದಲ್ಲಿ ಕಚೇರಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ತಿಳಿಸಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ, ಆರೋಗ್ಯ, ಪಶುವೈದ್ಯಕೀಯ, ಕೃಷಿ ಮುಂತಾದ ಮೂಲ ಸೌಕರ್ಯಗಳನ್ನು ಸುಧಾರಿಸುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷೃ ತೋರಿದ್ದಾರೆ. ಹಾಲುವರ್ತಿ ಕೇಂದ್ರಕ್ಕೆ ಸಮರ್ಪಕ ಮೂಲ ಸೌಕರ್ಯಗಳೊಂದಿಗೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಬೇಡಿಕೆ.

ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತದಲ್ಲಿದೆ. ನಮ್ಮ ಇಲಾಖೆಯಿಂದ ಮತ್ತು ಗ್ರಾಮಸ್ಥರ ಮೂಲಕ ಈಗಾಗಲೇ ನೂತನ ಕಟ್ಟಡಕ್ಕಾಗಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಪಂಚಾಯತ್ ರಾಜ್ ಇಲಾಖೆ ಕೂಡಲೇ ಗಮನಹರಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ.

ಹಾಲುವರ್ತಿ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ಸಂಪೂರ್ಣ ಹಾಳಾಗಿರುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಪಶುವೈದ್ಯ ಇಲಾಖೆ ಹಾಗೂ ಗ್ರಾಮಸ್ಥರಿಂದ ಬಂದ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ.