ಆನಗೋಡು ಹೋಬಳಿ ನೇರ್ಲಿಗೆ ಸಮೀಪ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಜಮೀನುಗಳನ್ನು ಹದಗೊಳಿಸಿಕೊಂಡಿರುವುದು. rain
- ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳಲ್ಲಿ ಬಿತ್ತನೆ ವಿಳಂಬ
ಪಿ.ಎಚ್. ಕೃಷ್ಣಮೂರ್ತಿ, ಮಾಯಕೊಂಡ
ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಮೆಕ್ಕೆಜೋಳ, ರಾಗಿ ಇತರೆ ಬೆಳೆಗಳ ಬಿತ್ತನೆ ಕಾರ್ಯ ವಿಳಂಬವಾಗಿದೆ. rain
ಮುಂಗಾರು ಮಳೆ ಬೇಗ ಪ್ರಾರಂಭವಾಗುವ ನಿರೀಕ್ಷೆಯಲ್ಲಿ ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ತಯಾರು ಮಾಡಿದ್ದಾರೆ. ಮೇ ತಿಂಗಳ ಕೊನೆಯ ವಾರ ಹಾಗೂ ಜೂನ್ ಮೊದಲ ವಾರ ಬಿತ್ತನೆ ಕಾರ್ಯ ಪ್ರಾರಂಭಗೊಂಡು ಜೂನ್ ಅಂತ್ಯದೊಳಗೆ ಮುಗಿಯಬೇಕಿತ್ತು. ಪ್ರಸ್ತುತ ರೋಹಿಣಿ ಮಳೆ ಉತ್ತಮವಾಗಿ ಬಾರದ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳ ಬಿತ್ತನೆ ತಡವಾಗಿದೆ ಎನ್ನುತ್ತಾರೆ ರೈತರು.
ರಸಗೊಬ್ಬರ, ಬಿತ್ತನೆ ಬೀಜ ಸಜ್ಜು : ಬಿತ್ತನೆ ಉದ್ದೇಶದಿಂದ ರಸಗೊಬ್ಬರ, ಬೀಜಗಳನ್ನು ಸಂಗ್ರಹಿಸಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ. ಕಳೆದ ಬಾರಿ ಮುಂಗಾರು ಹಂಗಾಮಿನಲ್ಲಿ 27 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಬಾರಿ ಮೆಕ್ಕೆಜೋಳ ಹೊರತುಪಡಿಸಿ ಇತರೆ ಬೆಳೆಗಳನ್ನು ಬಿತ್ತಲು ರೈತರು ತಯಾರಿ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ.
"
ಜಮೀನು ಹದ ಮಾಡಿಕೊಂಡು ಕಾಯುತ್ತಿದ್ದೇವೆ. ಮಳೆ ಕೊರತೆ ಕಾಡುತ್ತಿದೆ. ಮುಂದಿನ ವಾರಾಂತ್ಯದಲ್ಲಿ ಹದ ಮಳೆಯಾದರೆ ಬಿತ್ತನೆ ಮಾಡಬಹುದು.
— ಬಿ.ಎಚ್. ಹನುಮಂತಪ್ಪ, ಪ್ರಗತಿಪರ ಕೃಷಿಕ, ಕಂದನಕೋವಿ.
"
ರೈತರು ಹದಮಳೆ ನಂತರ ಮುಂಗಾರು ಬಿತ್ತನೆ ಮಾಡಬೇಕು. ತೊಗರಿ ಬಿತ್ತನೆಗೆ ಕಾಲಾವಕಾಶ ಇದ್ದು, ತೊಗರಿ ಬೆಳೆಯಬೇಕು. ಮೆಕ್ಕೆಜೋಳದ ಪ್ರಮಾಣ ಕಡಿಮೆ ಮಾಡಿ, ರಾಗಿ, ಸಿರಿಧಾನ್ಯ, ಹಣ್ಣು ತರಕಾರಿ ಬೆಳೆಗಳ ಪ್ರಮಾಣ ಹೆಚ್ಚಿಸಬೇಕು.
— ಡಿ.ಎಂ. ಶ್ರೀಧರ್‌ಮೂರ್ತಿ, ಸಹಾಯಕ ಕೃಷಿ ನಿರ್ದೇಶಕರು, ದಾವಣಗೆರೆ ತಾಲೂಕು.
"
ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಹೆಚ್ಚಿಸಿರುವ ಸರ್ಕಾರಗಳು ರೈತರು ಬಿತ್ತನೆ ಮಾಡಲು ಪರದಾಡುವ ಸ್ಥಿತಿಗೆ ತಂದಿವೆ. ಒಳಿತಿನ ಭರವಸೆ ನೀಡಿ ಬಂದ ಪಕ್ಷಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ.
— ಹುಚ್ಚವ್ವನಹಳ್ಳಿ ಗಣೇಶ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಪ್ರೊ. ನಂಜುಂಡಸ್ವಾಮಿ ಬಣ)