ಚನ್ನಗಿರಿ ಪಟ್ಟಣದಲ್ಲಿ ವರುಣನ ಕೃಪೆಗಾಗಿ ಬುಧವಾರ ಕುಕ್ಕುವಾಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಅಮ್ಮನಗುಡ್ಡಕ್ಕೆ ಕರೆದೊಯ್ಯಲಾಯಿತು. ಎಂ.ಬಿ. ಶಿವಾಜಿರಾವ್, ಕಾಯಿ ಮಂಜಣ್ಣ, ಕುಬೇಂದ್ರೋಜಿರಾವ್, ನಾಗರಾಜ್ ಕೇಸರ್‌ಕರ್, ಅಣ್ಣೋಜಿರಾವ್ ಇತರರು ಇದ್ದರು.Kukkuvadeshwari 
ದಾವಣಗೆರೆ

ಅಮ್ಮನಗುಡ್ಡ ಹೋದ ಕುಕ್ಕುವಾಡೇಶ್ವರಿ

ಚನ್ನಗಿರಿ: ಮೇ ತಿಂಗಳು ಬಂದರೂ ತಾಲೂಕಿನಲ್ಲಿ ಮಳೆಯ ಸುಳಿವು ಇಲ್ಲದೆ ರೈತರು ಕಂಗಾಲಾಗಿದ್ದು, ವರುಣನ ಕೃಪೆಗಾಗಿ ಮರಾಠ ಸಮಾಜದ ವತಿಯಿಂದ ಪಟ್ಟಣದ ಶ್ರೀ ಕುಕ್ಕುವಾಡೇಶ್ವರಿ ದೇವಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿ ಮೆರವಣಿಗೆಯ ಮೂಲಕ ಅಮ್ಮನಗುಡ್ಡಕ್ಕೆ ಕರೆದೊಯ್ಯಲಾಯಿತು.
ಪೂರ್ವಜರ ಕಾಲದಿಂದಲೂ ಮಳೆ ಬಾರದಿದ್ದಾಗ ನಗರದೇವತೆ ಕುಕ್ಕುವಾಡೇಶ್ವರಿಯನ್ನು ಅಮ್ಮನಗುಡ್ಡಕ್ಕೆ ಕರೆದೊಯ್ಯುವ ಸಂಪ್ರದಾಯವಿದೆ. ಅದರಂತೆ ದೇವಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿದ ಭಕ್ತರು, ಅಮ್ಮನಗುಡ್ಡ ಕ್ಷೇತ್ರದ ಬಾಲೆಕಲ್ಲು ಸಿದ್ದಪ್ಪ ದೇವರ ಗುಡ್ಡದ ಮೇಲೆ ನೂರೊಂದು ತಂಬಿಗೆ ನೀರನ್ನು ಹಾಕಿ ಪ್ರಾರ್ಥಿಸಿದರು. ಮಳೆ ಬಂದ ನಂತರವೇ ದೇವಿಯನ್ನು ಮರಳಿ ಪಟ್ಟಣಕ್ಕೆ ಕರೆತರಲಾಗುತ್ತದೆ.
ಈ ವೇಳೆ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ. ಶಿವಾಜಿರಾವ್ ಮಾತನಾಡಿ, ಸಾಮಾನ್ಯವಾಗಿ ಯುಗಾದಿಯ ಆಸುಪಾಸಿನಲ್ಲಿ ಮಳೆಯಾಗುತ್ತಿತ್ತು. ಆದರೆ ಈ ಬಾರಿ ತೀವ್ರ ಬಿಸಿಲಿನ ತಾಪದಿಂದ ಜನರು ಬೆಂದು ಹೋಗಿದ್ದಾರೆ. ಅಡಕೆ ತೋಟಗಳಲ್ಲಿನ ಕೊಳವೆಬಾವಿಗಳ ನೀರಿನ ಮಟ್ಟ ಕುಸಿಯುತ್ತಿದ್ದು, ಶೇ.95 ರಷ್ಟು ಕೃಷಿಯನ್ನೇ ನಂಬಿರುವ ಇಲ್ಲಿನ ಜನರಿಗೆ ಮಳೆ ಬರದಿದ್ದರೆ ಜೀವನ ನಿರ್ವಹಣೆ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಳೆಗಾಗಿ ಪ್ರಾರ್ಥಿಸಿ ಮುತ್ತೈದೆಯರು ರಾತ್ರಿಯಿಡೀ ಉಪವಾಸ ವ್ರತ ಆಚರಿಸಿದರು. ಮನೆಯಿಂದ ಹೊತ್ತು ತಂದ ಕುಂಭಗಳೊಂದಿಗೆ ಪಟ್ಟಣದ ಮೈಲಾರೇಶ್ವರ ಹಾಗೂ ಕಾಳಿಕಾಂಬಾ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ, ನಂತರ ಕುಕ್ಕುವಾಡೇಶ್ವರಿ ದೇವಿಗೆ ಕುಂಭಾಭಿಷೇಕ ನೆರವೇರಿಸಿದರು. ಸಕಲ ಮಂಗಳವಾದ್ಯಗಳೊಂದಿಗೆ ದೇವಿಯನ್ನು ಅಮ್ಮನಗುಡ್ಡಕ್ಕೆ ಬೀಳ್ಕೊಡಲಾಯಿತು. ಮರಾಠ ಸಮಾಜದ ಗೌರವಾಧ್ಯಕ್ಷ ಕಾಯಿ ಮಂಜಣ್ಣ, ಉಪಾಧ್ಯಕ್ಷ ಕುಬೇಂದ್ರೋಜಿರಾವ್, ಕಾರ್ಯದರ್ಶಿ ನಾಗರಾಜ್ ಕೇಸರ್‌ಕರ್, ಖಜಾಂಚಿ ಅಣ್ಣೋಜಿರಾವ್ ಇತರರು ಇದ್ದರು