ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಮಹೇಶ್ವರ ಸ್ವಾಮಿಗೆ ಪೂಜಾ ಕಾರ್ಯಗಳನ್ನು ಮಾಡಿದ ನಂತರ ಭಕ್ತರಿಗೆ ಬಾಳೆಹಣ್ಣು ಕಿಚಡಿ ಹಾಗೂ ಊಟವನ್ನು ಬಡಿಸಲಾಯಿತು.
- ಪುರುಷರೇ ಸೇರಿ ಶಿವನ ಆರಾಧನೆ
- ಮಹೇಶ್ವರಸ್ವಾಮಿ ಜಾತ್ರಾ ಮಹೋತ್ಸವ
- ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಅದ್ಧೂರಿ ಆಚರಣೆ
ಹೊನ್ನಾಳಿ: ಪುರುಷರೇ ಸೇರಿ ಶಿವನನ್ನು ಆರಾಧಿಸುವ ಮಹೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಾದ್ಯಂತ ಅದ್ಧೂರಿಯಿಂದ ನಡೆಯಿತು.
ಅವಳಿ ತಾಲೂಕಿನ ಮಾಸಡಿ, ತರಗನಹಳ್ಳಿ, ಯಕ್ಕನಹಳ್ಳಿ, ಮುಕ್ತೇನಹಳ್ಳಿ, ಬಿಜೋಗಟ್ಟೆ, ಕೆಂಚಿಕೊಪ್ಪ, ಸೂರಗೊಂಡನಕೊಪ್ಪ ಮತ್ತಿತರ ಗ್ರಾಮಗಳಲ್ಲಿ ಮೂರು ದಿನಗಳ ಕಾಲ ಸಂಭ್ರಮದಿಂದ ಜರುಗಿತು.
ಎಳ್ಳಮಾವಾಸ್ಯೆ ಸಮೀಪ ಇರುವಾಗ ಮಹೇಶ್ವರ ಸ್ವಾಮಿಯನ್ನು ನೂರಾರು ವರ್ಷಗಳಿಂದ ಆರಾಧಿಸಲಾಗುತ್ತಿದೆ. ಜಾತ್ರೆ ಆಚರಿಸುವ ಎಲ್ಲ ಗ್ರಾಮಗಳಲ್ಲೂ ಗ್ರಾಮ ದೇವತೆಗಳನ್ನು ಊರಾಚೆ ಇರುವ ಪುಣ್ಯ ಕ್ಷೇತ್ರಗಳಲ್ಲಿ ಅಲ್ಲಿಯೇ ಮಂಟಪ ನಿರ್ಮಿಸಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಬೆಳಗ್ಗೆ ಪವಿತ್ರ ಗಂಗೆ ಪೂಜೆ ಮಾಡಿದ ನಂತರ ಅಭಿಷೇಕ, ಮಂಗಳಾರತಿ ಹಾಗೂ ಪೂಜಾ ಕಾರ್ಯಗಳು ನಡೆಯುತ್ತವೆ.
ಬಾಳೆಹಣ್ಣು ಪ್ರಸಾದ
ಮಹಿಳೆಯರಿಗೆ ಪ್ರವೇಶ ಇರದ ಕಾರಣ ಪುರುಷರೇ ಅಕ್ಕಿಯಿಂದ ಕಿಚಡಿ (ಅನ್ನ) ತಯಾರಿಸುತ್ತಾರೆ. ಬೆಲ್ಲ, ಬಾಳೆಹಣ್ಣು ಹಾಗೂ ತುಪ್ಪವನ್ನು ಬೆರೆಸಿದ ಎಡೆಯನ್ನು ಸ್ವಾಮಿಗೆ ನೈವೇದ್ಯ ಮಾಡುತ್ತಾರೆ. ನಂತರ ಸಾಮೂಹಿಕವಾಗಿ ಪ್ರಸಾದ ವಿತರಿಸಲಾಗುತ್ತದೆ. ಹರಕೆ ಹೊತ್ತವರು ಮೀಸಲು, ಹಾಲು, ತುಪ್ಪ, ಬಾಳೆಹಣ್ಣು, ಬೆಲ್ಲ ತಂದು ಅರ್ಪಿಸುತ್ತಾರೆ.
ಮಹೇಶ್ವರಸ್ವಾಮಿ ಗ್ರಾಮದಿಂದ ಗ್ರಾಮಕ್ಕೆ ತೆರಳುತ್ತಿದ್ದಾಗ ಊರ ಒಳಗೆ ಪ್ರವೇಶ ಮಾಡದೆ ಊರಾಚೆ ಉಳಿಯುತ್ತಿದ್ದರು. ಹಾಲು, ಹಣ್ಣು ಮಾತ್ರ ಸೇವಿಸುತ್ತಿದ್ದರು. ತಾನು ಸಂಚರಿಸುತ್ತಿದ್ದ ಸ್ಥಳದಲ್ಲಿ ಮಹೇಶ್ವರನನ್ನು ಪೂಜಿಸುವಂತೆ ಭಕ್ತರಿಗೆ ತಿಳಿಸಿದ್ದರು. ಅದರಂತೆ ಈಗಲೂ ಊರಾಚೆ ಪ್ರತಿವರ್ಷ ಜಾತ್ರೆ ಆಚರಿಸಲಾಗುತ್ತಿದೆ.
ಗ್ರಾಮದ ಹೊರವಲಯದಲ್ಲಿ ಪ್ರತಿಷ್ಠಾಪಿಸಿದ್ದ ದೇವರು ಊರೊಳಗೆ ಬಂದಾಗ ಇಡೀ ಗ್ರಾಮದಲ್ಲಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ ಎಂದು ಗ್ರಾಮದ ಹಿರಿಯರು ಹೇಳಿದರು.