ದಾವಣಗೆರೆಯಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ, ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಪುಷ್ಪಾರ್ಚನೆ ಮಾಡಿದರು. ವ್ಯಂಗ್ಯಚಿತ್ರಕಾರ ಡಾ.ಎಚ್.ಬಿ.ಮಂಜುನಾಥ್, ದಿನೇಶ್ ಕೆ. ಶೆಟ್ಟಿ, ಎಡಿಸಿ ಶೀಲವಂತ ಶಿವಕುಮಾರ್, ಎಎಸ್ಪಿ ಪರಮೇಶ್ವರ ಹೆಗಡೆ, ಎಂ.ಜಿ. ನಾಗರಾಜ್ ಇತರರಿದ್ದರು.
- ಕೋಟೆ-ಪೇಟೆ ಎರಡಕ್ಕೂ ನೀಡಿದ್ದರು ಸಮಾನ ಮಹತ್ವ
- ವ್ಯಂಗ್ಯಚಿತ್ರಕಾರ ಎಚ್.ಬಿ.ಮಂಜುನಾಥ್ ಬಣ್ಣನೆ
- ಜಿಲ್ಲಾಡಳಿತದಿಂದ ಜಯಂತ್ಯುತ್ಸವ ಆಚರಣೆ
ದಾವಣಗೆರೆ: ನಾಡಪ್ರಭು ಕೆಂಪೇಗೌಡರು ಆಡಳಿತಗಾರ ಮಾತ್ರವಲ್ಲದೆ ಉನ್ನತ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಪ್ರಜಾವತ್ಸಲ ರಾಜರಾಗಿದ್ದರು ಎಂದು ಹಿರಿಯ ವ್ಯಂಗ್ಯಚಿತ್ರಕಾರ ಡಾ.ಎಚ್.ಬಿ.ಮಂಜುನಾಥ್ ಬಣ್ಣಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.
ರಾಜಪ್ರಭುತ್ವದ ಕಾಲದಲ್ಲಿ ಕೋಟೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಪ್ರಜಾಶಾಹಿಯ ಆಶಯಗಳನ್ನು ಗುರುತಿಸಿ, ಕೋಟೆ ಹಾಗೂ ಪೇಟೆ ಎರಡಕ್ಕೂ ಸಮಾನ ಮಹತ್ವ ನೀಡಿ ಬೆಂಗಳೂರನ್ನು ನಿರ್ಮಿಸಿದ ಶ್ರೇಯಸ್ಸು ಕೆಂಪೇಗೌಡರಿಗೆ ಸಲ್ಲುತ್ತದೆ. ಬೆಂಗಳೂರು ನಗರ ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಲ್ಲಲು ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣವಾಗಿದೆ ಎಂದು ಹೇಳಿದರು.
64 ವಿವಿಧ ಕಸುಬುಗಳ ಜನರಿಗಾಗಿ ಮತ್ತು ಮಾರುಕಟ್ಟೆ ಸೌಲಭ್ಯಕ್ಕಾಗಿ ಚಿಕ್ಕಪೇಟೆ, ಬಳೆಪೇಟೆ, ಕಾಟನ್ ಪೇಟೆ, ಅಕ್ಕಿಪೇಟೆ, ತರಗುಪೇಟೆಯಂತಹ ವೈವಿಧ್ಯಮಯ ಪೇಟೆಗಳನ್ನು ನಿರ್ಮಿಸಿದ್ದ ಕೆಂಪೇಗೌಡರು, ಸರ್ವ ಜನಾಂಗದ ಸ್ವಾವಲಂಬಿ ಬದುಕಿಗೆ ಅಡಿಪಾಯ ಹಾಕಿದರು ಎಂದು ತಿಳಿಸಿದರು.
ಕೆಂಪೇಗೌಡರು, ಕ್ರಿ.ಶ. 1510ರಲ್ಲಿ ಯಲಹಂಕದ ಸಮೀಪ ಕೆಂಪನಂಜೇಗೌಡರು-ಲಿಂಗಾಂಬೆ ದಂಪತಿ ಪುತ್ರನಾಗಿ ಜನಿಸಿದರು. ಆಗ ಅವರ ಪೂರ್ವಜರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. 1515ರಲ್ಲಿ ತಂದೆ ಜತೆ ವಿಜಯನಗರದ ದಸರಾ ವೀಕ್ಷಿಸಲು ಹೋಗಿದ್ದ ಕೆಂಪೇಗೌಡರು, ಅಲ್ಲಿನ ಸಂಪದ್ಭರಿತ ರಾಜಧಾನಿ ನೋಡಿ ಒಂದು ಸುಂದರ ನಗರಿ ನಿರ್ಮಿಸುವ ಕನಸು ಕಂಡರು.
1529ರಲ್ಲಿ ಅಚ್ಯುತರಾಯರ ಪಟ್ಟಾಭಿಷೇಕ ಮಹೋತ್ಸವಕ್ಕೆ ಹಂಪಿಗೆ ಭೇಟಿಯಿತ್ತಾಗಲೂ ಒಂದು ನಗರ ಕಟ್ಟುವ ದೃಢ ಸಂಕಲ್ಪ ಮಾಡಿದರು. ಇದಕ್ಕಾಗಿ 9 ವರ್ಷಗಳ ಕಾಲ ಸುದೀರ್ಘ ಶಿಕ್ಷಣದ ಜತೆಗೆ ರಾಜ್ಯಶಾಸ್ತ್ರ, ಆಡಳಿತ ನೀತಿ, ಯುದ್ಧಕಲೆ ಸೇರಿ ವಿವಿಧ ಆಡಳಿತಾತ್ಮಕ ವಿಚಾರಗಳಲ್ಲಿ ಪಡೆದ ಪರಿಣತಿಯು ಅವರ ಸಂಕಲ್ಪಕ್ಕೆ ಬಲ ತುಂಬಿತು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್. ಬಸವಂತಪ್ಪ, ಕೆಂಪೇಗೌಡರು ಒಬ್ಬ ರಾಜರಾಗಿರದೆ, ಮುತ್ಸದ್ದಿ ಹಾಗೂ ನಾಯಕರಾಗಿದ್ದರು. ಬೆಂಗಳೂರು ಬೃಹದಾಕಾರವಾಗಿ ಬೆಳೆದು ನಿಲ್ಲಲು ಅವರ ಶ್ರಮ ಮತ್ತು ದೂರದೃಷ್ಟಿಯೇ ಪ್ರಮುಖ ಕಾರಣ. ಅಂದು ನಿರ್ಮಿಸಿದ ಮಾರುಕಟ್ಟೆಗಳು, ವಾಣಿಜ್ಯ ವ್ಯವಸ್ಥೆಗಳು ಇಂದಿನ ಅಭಿವೃದ್ಧಿಗೆ ಭದ್ರ ಬುನಾದಿಯಾಗಿವೆ ಎಂದು ಹೇಳಿದರು.
ಕೆಂಪೇಗೌಡರು ಈ ನಾಡಿಗೆ ನೀಡಿದ ಕೊಡುಗೆಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕಾಗಿದೆ. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸೀಮಿತರಾಗದೆ ಕೆಂಪೇಗೌಡರಂತ ಮಹನೀಯರ ಜೀವನ ಚರಿತ್ರೆ ಓದಿ ಅವರ ಆದರ್ಶ ಅಳವಡಿಸಿಕೊಳ್ಳಬೇಕು. ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕೆಂಪೇಗೌಡರ ಕುರಿತು ಗಾಯನ, ರಸಪ್ರಶ್ನೆ, ಭಾಷಣ, ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಎಎಸ್ಪಿ ಪರಮೇಶ್ವರ ಹೆಗಡೆ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಜಿ. ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ನವೀನ್ ಮಠದ್, ಶಿಕ್ಷಣಾಧಿಕಾರಿ ಪುಷ್ಪಲತಾ, ಮುಖಂಡರಾದ ನಾಗರತ್ನಮ್ಮ ಇತರರಿದ್ದರು.