ಜಗಳೂರು ತಾಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠ. Chariot festival
- 50 ಸಾವಿರ ಭಕ್ತರು ಆಗಮನದ ನಿರೀಕ್ಷೆ
- ನಾಲ್ವಡಿ ಶಾಂತಲಿಂಗ ಶ್ರೀ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ
ಜಗಳೂರು: ಕಣ್ವ ಮಹರ್ಷಿಗಳ ತಪೋಭೂಮಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಸಂಕ್ರಾತಿ ದಿನ ಜ.15ರಂದು ಶ್ರೀ ಗವಿ ಶಾಂತಲಿಂಗೇಶ್ವರ ರಥೋತ್ಸವ ಅದ್ದೂರಿಯಾಗಿ ನಡೆಯಲಿದೆ.
ರಾಜ್ಯ, ಹೊರರಾಜ್ಯಗಳಿಂದ ಅಧಿಕ ಭಕ್ತರು ಸೇರಲಿರುವ ಹಿನ್ನೆಲೆಯಲ್ಲಿ ಕಣ್ವ ಕುಪ್ಪೆಯ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜ.15ರ ಗುರುವಾರ ಧನುರ್ಮಾಸ ಪೂಜಾ ಮಂಗಲ, ಸಂಕ್ರಾಂತಿ ವಿಶೇಷ ಪೂಜೆ, ನಾನಾ ಧಾರ್ಮಿಕ ಆಚರಣೆಗಳು, ಗವಿ ಶಾಂತಲಿಂಗೇಶ್ವರ ರಥೋತ್ಸವ ನೆರವೇರಲಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಪೂಜಾ ಕಾರ್ಯಕ್ರಮ: ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾಪೂಜೆ, ಪಂಚಾಚಾರ್ಯ ಧ್ವಜಾರೋಹಣ, ಲಿಂಗೈಕ್ಯರ ಕರ್ತೃ ಗದ್ದುಗೆಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ 2.30ಕ್ಕೆ ಗವಿ ಶಾಂತಲಿಂಗೇಶ್ವರ ಮಹಾರಥೋತ್ಸವ ನಡೆಯಲಿದೆ.
ಅನ್ನ ದಾಸೋಹ ಮತ್ತು ವ್ಯವಸ್ಥೆ: ಆಗಮಿಸುವ 50 ಸಾವಿರ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ಗೋಧಿ ಪಾಯ ಸ, ಬದನೆಕಾಯಿ ಪಲ್ಯ, ರೊಟ್ಟಿ, ಶೇಂಗಾ ಚಟ್ನಿ ಪುಡಿ, ಅನ್ನ- ಸಾಂಬಾರ್ ಹಾಗೂ ಮೊಸರು- ಮಜ್ಜಿಗೆ ಇರಲಿದೆ. ಜತೆಗೆ ಕುಡಿಯುವ ನೀರು, ಸ್ನಾನಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ನೆರಳಿಗಾಗಿ ಬೃಹತ್ ಶಾಮಿಯಾನ ಹಾಕಲಾಗುತ್ತಿದೆ.
ಪುಣ್ಯಕ್ಷೇತ್ರದ ಹಿನ್ನೆಲೆ
ಕಣ್ವ ಮಹರ್ಷಿಗಳ ತಪೋಭೂಮಿ ಹಾಗೂ ಪಾಂಡವರ ನೆಲೆವೀಡಾದ ಪೌರಾಣಿಕ ಹಿನ್ನೆಲೆಯ ಈ ಕ್ಷೇತ್ರವು ಉಜ್ಜಯಿನಿ ಪೀಠದ ಶಾಖಾಮಠವಾಗಿ ಬೆಳೆದು ಬಂದಿದೆ. ಇಲ್ಲಿ ಉಜ್ಜಯಿನಿ ಪೀಠದ ಜಗದ್ಗುರುಗಳಾಗಿದ್ದ ಗುರುಸಿದ್ಧಶಿವಾಚಾರ್ಯ ಭ ಗವತ್ಪಾದರು ತಪೋನುಷ್ಠಾನಗೈದು ಮಠ ಸ್ಥಾಪಿಸಿದರು. ನಂತರ ಶಾಂತವೀರ ಸ್ವಾಮೀಜಿ ಹಾಗೂ ಇಮ್ಮಡಿ ಶಾಂತಲಿಂಗ ಶಿವಾಚಾರ್ಯರು ಮಠವನ್ನು ಮುನ್ನಡೆಸಿದರು. ತದನಂತರ ಮುರುಘೇಂದ್ರ ಸ್ವಾಮೀಜಿ, ಮುಮ್ಮಡಿ ಶಾಂತಲಿಂಗ ಶಿವಾಚಾರ್ಯರ ಕಾಲದಲ್ಲಿ ಮಠವು ಸರ್ವಾಂಗೀಣ ಅಭಿವೃದ್ಧಿ ಕಂಡಿತು.
ಪ್ರಸ್ತುತ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಠವು ಧಾರ್ಮಿಕ, ಸಾಮಾಜಿಕ,ಸಾಂಸ್ಕೃತಿಕವಾಗಿ ದಾಪುಗಾಲು ಹಾಕುತ್ತಿದೆ. ಯಾತ್ರಿ ನಿವಾಸ, ಕಲ್ಯಾಣ ಮಂಟಪ, ದಾಸೋಹ ಮಂದಿರ, ವಿಶಾಲ ಆವರಣ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣದ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ.
ರೊಟ್ಟಿ, ಚಟ್ನಿ ದಾಸೋಹಕ್ಕೆ ಅರ್ಪಣೆ
ಪ್ರತಿ ವರ್ಷದಂತೆ ಈ ಬಾರಿಯೂ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಶಿವಮೊಗ್ಗ ಹಾಗೂ ನೆರೆಯ ಆಂಧ್ರಪ್ರದೇಶ ಸೇರಿ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರು ತರುವ ರೊಟ್ಟಿ, ಚಟ್ನಿ, ಶೇಂಗಾ ಮತ್ತು ಕಡಲೆ ಪುಡಿಯನ್ನು ದಾಸೋಹಕ್ಕೆ ಅರ್ಪಿಸುವ ವಿಶಿಷ್ಟ ಸಂಪ್ರದಾಯ ಇಲ್ಲಿದೆ.
ಮಕರ ಸಂಕ್ರಾಂತಿಯ ಪುಣ್ಯಕಾಲದಲ್ಲಿ ಗದ್ದುಗೆಗಳಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಕ್ಷೇತ್ರದ ಕರ್ತೃ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕು.