ದಾವಣಗೆರೆಯಲ್ಲಿ ಭಾನುವಾರ, ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಅವರು ಬೆಣ್ಣೆನಗರಿ ಸಾಹಿತ್ಯ ಸಂಘವನ್ನು ಅದರ ಲಾಂಛನ ಬಿಡುಗಡೆಯೊಂದಿಗೆ ಉದ್ಘಾಟಿಸಿದರು. ಬಿ. ವಾಮದೇವಪ್ಪ ತೊಗಲೇರಿ, ಕೆ.ಪಿ. ಅಣಬೇರು ತಾರೇಶ, ಫಕೀರೇಶ ಆದಾಪುರ ಇತರರಿದ್ದರು.
- ಪದವಿ ತರಗತಿಗಳಲ್ಲಿ ಎಲ್ಲ ಸೆಮಿಸ್ಟರ್‌ಗಿರಲಿ ಕನ್ನಡ ಪಠ್ಯ
- ನಿವೃತ್ತ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಆಶಯ
- ದಾವಣಗೆರೆಯಲ್ಲಿ ಬೆಣ್ಣೆನಗರಿ ಸಾಹಿತ್ಯ ಸಂಘ ಉದ್ಘಾಟನೆ
ದಾವಣಗೆರೆ: ಮಕ್ಕಳಲ್ಲಿ ಸರಿಯಾದ ಕನ್ನಡ ಭಾಷಾಜ್ಞಾನವನ್ನು ಸ್ವಯಂಪ್ರೇರಿತವಾಗಿ ಕಲಿಸುವುದು ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳ ಅಜೆಂಡಾ ಆಗಬೇಕಿದೆ. ಹಾಗಾದಾಗ ಮಾತ್ರ ಕನ್ನಡ ಉಳಿಯಲಿದೆ ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಹೇಳಿದರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಣ್ಣೆನಗರಿ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿದರು.
ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಎಂಬುದೇ ಅಲರ್ಜಿ ವಿಷಯವಾಗಿದೆ. ಅದನ್ನು ನಾಮಕೇವಾಸ್ತೆ ಎಂಬಂತೆ ಪಠ್ಯವಾಗಿ ಬೋಧಿಸಲಾಗುತ್ತಿದೆ. ಅಲ್ಲಿನ ಮಕ್ಕಳಿಗೆ ಸರಿಯಾದ ಕನ್ನಡ ಬಾರದಿದ್ದರೂ ಸುಮ್ಮನೆ ತೇರ್ಗಡೆ ಮಾಡಿ ಕಳಿಸಲಾಗುತ್ತಿದೆ. ಈ ಮಕ್ಕಳು ಭವಿಷ್ಯದಲ್ಲಿ ಇಂಜಿನಿಯರ್, ವೈದ್ಯ ಇತರೆ ವೃತ್ತಿ ಮಾಡುವಾಗ ಕನ್ನಡ ಬಾರದೆ ಸಾರ್ವಜನಿಕ ಜೀವನದಲ್ಲಿ ವ್ಯವಹರಿಸಲು ಸಾಧ್ಯವಿಲ್ಲ ಎಂದರು.
ಇಂದಿನ 21ನೇ ಶತಮಾನದಲ್ಲಿ ಕನ್ನಡದ ಪರಿಸರ ಉಳಿಸುವುದೇ ದೊಡ್ಡ ಸವಾಲಾಗಿದೆ. ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸಬೇಕೆಂಬ ಪಾಲಕರ ದೊಡ್ಡ ವ್ಯಾಮೋಹವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಯಾರೂ ಪ್ರೋತ್ಸಾಹ ನೀಡದಿದ್ದರೂ ಅದು ಬೆಳೆಯಲಿದೆ ಎಂದರು.
ಕನ್ನಡ ಮಾಧ್ಯಮ ಶಾಲೆಗಳನ್ನು ಬೆಳೆಸುವ ಅಗತ್ಯ ಇಂದು ಹೆಚ್ಚಿದೆ. ಸರ್ಕಾರ ಏನೇನೋ ಪ್ರಯೋಗಗಳನ್ನು ಮಾಡುತ್ತಿದೆ. ಅನುದಾನ, ಶಿಕ್ಷಕರ ನೇಮಕ ಕುರಿತಂತೆ ಯಾವುದೇ ಒತ್ತಡವೂ ಇಲ್ಲ. ಅದೊಂದು ಜವಾಬ್ದಾರಿಯಾಗಿ ಹೇಗೆ ನಿಭಾಯಿಸಬೇಕೆಂಬ ಕಾಳಜಿ ಕೊರತೆ ಇದೆ. ಗಡಿನಾಡಿನಲ್ಲೂ ಕನ್ನಡ ಪರಿಸರ ಸಾಕಷ್ಟಿದೆ. ಅಲ್ಲಿ ಕಲಿಕೆಯ ಆಸಕ್ತಿ ಇದ್ದರೂ ಪ್ರೋತ್ಸಾಹದ ಅಭಾವವಿದೆ ಎಂದು ಹೇಳಿದರು.
ಇಂದು ಬಿಎ, ಬಿಕಾಂ, ಬಿಎಸ್ಸಿ ಪದವಿ ತರಗತಿಗಳಲ್ಲಿ ಒಂದೇ ಸೆಮಿಸ್ಟರ್‌ಗೆ ಸೀಮಿತವಾಗಿ ಕನ್ನಡ ಪಠ್ಯ ಕಲಿಸಲಾಗುತ್ತಿದೆ. ನಂತರ ಸೆಮಿಸ್ಟರ್‌ಗಳಲ್ಲಿ ಅದನ್ನು ಕಡೆಗಣಿಸಲಾಗಿದೆ. ಈ ಬಗ್ಗೆ ಸಾಹಿತ್ಯಾಸಕ್ತರು ಸರ್ಕಾರದ ಮೇಲೆ ಒತ್ತಡ ತರಬೇಕಿದೆ ಎಂದ ಅವರು ಹೊಸ ಸಂಘಟನೆಗಳು ಕನ್ನಡದ ಶಾಲೆಗಳನ್ನು ಸುಧಾರಣೆಗೆ ತರಬೇಕಿದೆ ಎಂದರು.
ಸಾಹಿತ್ಯ, ಸಂಸ್ಕೃತಿಯು ಎಲ್ಲ ವಿಷಯಗಳ ತಾಯಿಬೇರು. ಸಾಹಿತ್ಯಕ ಕಾರ್ಯಕ್ರಮಗಳನ್ನು ಮಾಡಿದ ಮಾತ್ರಕ್ಕೆ ಸಾಹಿತ್ಯ ಉಳಿಯುವುದಿಲ್ಲ. ಸಾಹಿತಿಗಳು, ಲೇಖಕರು ತಮ್ಮ ಪಾಡಿಗೆ ಸಾಹಿತ್ಯ ಕೃತಿಗಳನ್ನು ಬೆರಯಲಿದ್ದು ತಂತಾನೇ ಸಾಹಿತ್ಯ ಸೃಷ್ಟಿಯಾಗಲಿದೆ. ಆದರೆ ಸಾಹಿತ್ಯ, ಸಂಗೀತ, ಕಲೆ ಸೃಷ್ಟಿಯಾಗಬಲ್ಲ ವಾತಾವರಣ ಹಾಗೂ ಅವಕಾಶ ಕಲ್ಪಿಸಬೇಕು. ಹೊಸ ಸಂಘಟನೆಗಳು ಇದರ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.
ದಾವಣಗೆರೆ ವ್ಯಾಪಾರ ಮತ್ತು ರಾಜಕಾರಣ ಇತರೆ ಕ್ಷೇತ್ರಗಳಲ್ಲಿ ಹೆಸರಾಗಿದೆ. ಆದರೆ ಈ ನಗರಕ್ಕೆ ಸಾಂಸ್ಕೃತಿಕ ಪರಂಪರೆ ಢಾಳಾಗಿ ಬೆಳೆದಿಲ್ಲ. ಅದು ಸಾಧ್ಯವಾಗಬೇಕಾದರೆ ಅವಕಾಶಗಳನ್ನು ಹೆಚ್ಚಿಸುವ ಜವಾಬ್ದಾರಿಯು ಕುಡ ಹೊಸ ಸಂಘಟನೆಗಳ ಮೇಲಿದೆ. ಕಾವ್ಯ, ಕಥಾ ಕಮ್ಮಟಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ ಮಾತನಾಡಿ ಇಂದು ಅನೇಕ ಸಂಘ ಸಂಸ್ಥೆಗಳು ಹುಟ್ಟುತ್ತಲೇ ಕಾರ್ಯ ಚಟುವಟಿಕೆ ಇಲ್ಲದಲೇ ಸಾಯುತ್ತಲೂ ಇವೆ. ಬೆಣ್ಣೆನಗರಿ ಸಾಹಿತ್ಯ ಘಟಕ ಸಂಘಟನೆ ಉತ್ತಮ ಕಾರ್ಯಕ್ರಮಗಳೊಂದಿಗೆ ದೀರ್ಘಾಯಸ್ಸು ಪಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘದ ಸಂಚಾಲಕ ಕೆ.ಪಿ. ಅಣಬೇರು ತಾರೇಶ, ಫಕೀರೇಶ ಆದಾಪುರ. ಉಮೇಶ ತಾಳಿಕಟ್ಟೆ ಇತರರಿದ್ದರು. ಹಿರೇನಲ್ಲೂರು ಶ್ರೀನಿವಾಸ್ ಭಾಗಗೀತೆಗಳನ್ನು ಹಾಡಿದರು. ಬಿ.ಎಂ.ಜಿ. ವೀರೇಶ ಸ್ವಾಗತಿಸಿದರು. ಸುನೀತಾ ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ನೂರ್‌ಜಹಾನ್ ಬೇಗಂ ವಂದಿಸಿದರು.