ಹರಿಹರ: ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಯ ಪಟ್ಟಿಯಲ್ಲಿ ಕನ್ನಡ 3ನೇ ಸ್ಥಾನ ಹೊಂದಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಭಿಕ್ಷಾವರ್ತಿ ಮಠ ಹೇಳಿದರು.
ಎಸ್ಜೆವಿಪಿ ಕಾಲೇಜಿನಲ್ಲಿ ಭಾನುವಾರ ಭುವನೇಶ್ವರಿ ಚಾರಿಟಬಲ್ ಟ್ರಸ್ಟ್ ರಾಮತೀರ್ಥ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠದ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕನ್ನಡರತ್ನ ಹಾಗೂ ಕನ್ನಡ ಸೇವಾ ರತ್ನ 2026 ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಹರಿಹರ ತಾಲೂಕು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತಿಕೆ ಹೊಂದಿದೆ ಎಂಬುದರಲ್ಲಿ ಅನುಮಾನವಿಲ್ಲ. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಸಂಸ್ಥೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡಲಿ ಎಂದರು.
ಕನ್ನಡ ರತ್ನ ಹಾಗೂ ಕನ್ನಡ ಸೇವಾ ರತ್ನ 2026 ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಭಾಷೆಯಲ್ಲಿ 125 ಅಂಕ ಪಡೆದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್, ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಶೇಖರ್ಗೌಡ ಪಾಟೀಲ್, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಭುವನೇಶ್ವರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಲಿಂಗಪ್ಪ, ಸಹಶಿಕ್ಷಕ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್, ಮುಖ್ಯಶಿಕ್ಷಕ ಧನ್ಯ ಕುಮಾರ್, ರೇವಣನಾಯ್ಕ, ರಿಯಾಜ್ ಅಹಮ್ಮದ್, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಚ್.ಎಸ್. ಮಂಜುನಾಥ್, ದಾವಣಗೆರೆ ಮಹಾನಗರ ಪಾಲಿಕೆ ನಿವೃತ್ತ ವಲಯ ಆಯುಕ್ತ ಕೆ. ನಾಗರಾಜ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಯಲವಟ್ಟಿ ರಾಜೇಶ್ ಗೌಡ, ನಿರಂಜನ ದೀಟೂರ್ ಇತರರಿದ್ದರು.
ಜಗತ್ತಿನಲ್ಲಿ 4600 ಭಾಷೆಗಳಿವೆ. ಅವುಗಳಲ್ಲಿ ಪ್ರಾಚೀನ ಮತ್ತು ಸಮರ್ಥ ಭಾಷೆ ಕೇವಲ 22, ಅವುಗಳಲ್ಲಿ ಕನ್ನಡ 3ನೇ ಸ್ಥಾನ ಪಡೆದುಕೊಂಡಿದೆ. 2 ಸಾವಿರ ವರ್ಷ ಇತಿಹಾಸವಿರುವ ಭಾಷೆಯನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರೊ. ಭಿಕ್ಷಾವರ್ತಿ ಮಠ ತಿಳಿಸಿದರು. ಕನ್ನಡ ಭಾಷೆಯ ಲಿಪಿಯನ್ನು ಲಿಪಿಗಳ ರಾಣಿ ಎನ್ನಲಾಗುತ್ತದೆ. ಅಂಕಿ ಅಂಶ ನೀಡಿದ ಭಾಷೆ ನಮ್ಮ ಕನ್ನಡ. ಅನ್ಯ ಭಾಷೆ ಸಹ ಕನ್ನಡೀಕರಣಗೊಳಿಸುವ ಶಕ್ತಿ ನಮ್ಮ ಮಾತೃ ಭಾಷೆಗಿದೆ. ಇದರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮಾತೃ ಭಾಷೆಯನ್ನು ಸ್ಪಷ್ಟವಾಗಿ ಅರಿತವರು ಇಂಗ್ಲಿಷ್ ಕಲಿಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿರುವುದು ಅಪಾಯಕಾರಿ ಸಂಗತಿ ಎಂದರು.
ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆ, ಗರಿಮೆಯಿದೆ. ಅದನ್ನು ಪಾಲನೆ ಪೋಷಣೆ ಮಾಡ ಬೇಕಿರುವುದು ನಮ್ಮೆಲ್ಲರ ಕರ್ತವ್ಯ.ಚಂದ್ರಶೇಖರ್ ಪೂಜಾರ್ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ
ಸಾಧನೆಗೆ ಮಾತೃ ಭಾಷೆ ಅಡ್ಡಿಯಾಗದು. ಆದರೆ ಸಾಧನೆ ಮಾಡಿದ ನಂತರ ಮಾತೃಭಾಷೆ ಮರೆಯಬಾರದು. 8 ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಪ್ರಾದೇಶಿಕ ಭಾಷೆ ಕನ್ನಡ.ವೀರೇಶ್ ಹನಗವಾಡಿ, ಜಿಪಂ ಮಾಜಿ ಅಧ್ಯಕ್ಷ