ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಪ್ರತಿಮಾ ಸಭಾದ ಅಧ್ಯಕ್ಷ ಬಾ.ಮಾ.ಬಸವರಾಜಯ್ಯ, ಬಿ.ಎನ್.ಮಲ್ಲೇಶ್, ಡಿ.ಎಸ್. ಶಂಕರ್, ಎಸ್.ಎಸ್. ಗಿರೀಶ್ ಇದ್ದರು.
- ಕನಕದಾಸರ ತತ್ವಾದರ್ಶ ಪರಿಚಯಕ್ಕೆ ಕಾರ್ಯಕ್ರಮ
- ತತ್ವಪದಕಾರರ ಅಧ್ಯಯನ ಕೇಂದ್ರದಿಂದ ತಯಾರಿ
- ದಾವಣಗೆರೆ ಪ್ರತಿಮಾಸಭಾ ಸಂಘಟನೆಯ ಸಹಕಾರ
ದಾವಣಗೆರೆ: ನಗರದ ಗುಂಡಿ ಮಹದೇವಪ್ಪ ಕಲ್ಯಾಣಮಂದಿರದಲ್ಲಿ ಜೂ. 17ರಂದು ಸಂಜೆ 6 ಗಂಟೆಗೆ ‘ಮುತ್ತು ಬಂದಿದೆ ಕೇರಿಗೆ’-ಕನಕದಾಸರ ಸಾಹಿತ್ಯ ಕುರಿತ ಸಂಗೀತ-ನೃತ್ಯರೂಪಕ ಪ್ರದರ್ಶಿತವಾಗಲಿದೆ ಎಂದು ದಾವಣಗೆರೆ ಪ್ರತಿಮಾ ಸಭಾದ ಅಧ್ಯಕ್ಷ ಬಾ.ಮಾ.ಬಸವರಾಜಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎನ್.ಮಲ್ಲೇಶ್ ತಿಳಿಸಿದರು.
ಬೆಂಗಳೂರಿನ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಸಿದ್ಧಪಡಿಸಿದ ಈ ನೃತ್ಯರೂಪಕ ರಾಜ್ಯವ್ಯಾಪಿ ಪ್ರದರ್ಶಿತವಾಗುತ್ತಿದೆ. ಡಾ. ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆ, ಸ್ನೇಹಾ ಕಪ್ಪಣ್ಣ ಅವರ ನೃತ್ಯ ಸಂಯೋಜನೆ, ಶ್ರೀನಿವಾಸ ಜಿ. ಕಪ್ಪಣ್ಣ ಅವರ ತಾಂತ್ರಿಕ ನಿರ್ದೇಶನ ಹಾಗೂ ಕಾ.ತ. ಚಿಕ್ಕಣ್ಣ ಅವರ ಪರಿಕಲ್ಪನೆ ಒಳಗೊಂಡ ಈ ರೂಪಕವನ್ನು ಭ್ರಮರಿ ಡ್ಯಾನ್ಸ್ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನಕದಾಸರ ಕೀರ್ತನೆ ಮತ್ತು ಕಾವ್ಯ ಭಾಗವನ್ನು ಆಯ್ದು ಸಾಹಿತ್ಯ, ಸಂಗೀತ ಸಂಯೋಜಿಸಿ ನೃತ್ಯರೂಪಕಕ್ಕೆ ಅಳವಡಿಸಲಾಗಿದೆ. ಈ ಮೂಲಕ ಅವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿಮಾಸಭಾ, ಕಾರ್ಯಕ್ರಮಕ್ಕೆ ಸಹಕಾರ ನೀಡಿದೆ ಎಂದು ಹೇಳಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿಮಾ ಸಭಾ ಗೌರವಾಧ್ಯಕ್ಷ ಎಸ್.ಹಾಲಪ್ಪ ಅಧ್ಯಕ್ಷತೆ ವಹಿಸುವರು. ಎಸ್ಪಿ ಎಚ್. ಟಿ. ಶೇಖರ್, ಬೀರೇಶ್ವರ ದೇವಸ್ಥಾನದ ಜಾಗದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಚ್.ಬಿ. ಗೋಣೆಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್,ಜಿ. ಗಣೇಶಪ್ಪ, ಜಿಲ್ಲಾ ಕನಕ ನೌಕರರ ಬಳಗದ ಅಧ್ಯಕ್ಷ ಶಿವಾನಂದ ದಳವಾಯಿ ಭಾಗವಹಿಸುವರು.
ನೃತ್ಯರೂಪಕ ರೂವಾರಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಾಹಿತಿ ಡಾ. ಕಾ.ತ.ಚಿಕ್ಕಣ್ಣ, ಡಾ. ಶ್ರೀನಿವಾಸ ಜಿ. ಕಪ್ಪಣ್ಣ ಅವರನ್ನು ಸನ್ಮಾನಿಸಲಾಗುವುದು. ನೃತ್ಯರೂಪಕ ಉಚಿತ ಪ್ರದರ್ಶನವಾಗಿದ್ದು, ಇದರ ಬಳಿಕ ವಿವಿಧ ನೃತ್ಯ ತಂಡ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿ.ಎಸ್. ಶಂಕರ್, ಎಸ್.ಎಸ್. ಗಿರೀಶ್, ಸಾಹಿತಿ ಟಿ.ಎಸ್. ಶೈಲಜಾ, ಎನ್.ಟಿ. ಮಂಜುನಾಥ್, ಗೋಪಾಲಕೃಷ್ಣ, ಕೆ. ರೇವಣ್ಣ ಇದ್ದರು.