ನ್ಯಾಮತಿ ತಾಲೂಕಿನ ಗೋವಿನಕೋವಿ ಬೃಹನ್ಮಠದಲ್ಲಿ ಶನಿವಾರ ಗೋವಿನಕೋವಿ ಬೃಹನ್ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಎಂ.ಎಸ್. ಶಾಸ್ತ್ರಿ ಹೊಳೆಮಠ, ಸದಾಶಿವಯ್ಯ, ಹಳದಪ್ಪ ಹಾಗೂ ಶ್ರೀಮಠದ ಪದಾಧಿಕಾರಿಗಳು ಇದ್ದರು.Honor
- ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಹೇಳಿಕೆ
- ಕಾನಿಪ ಸಂಘದ ಪದಾಧಿಕಾರಿಗಳಿಗೆ ಸನ್ಮಾನ
ಹೊನ್ನಾಳಿ/ನ್ಯಾಮತಿ: ನೀರಿನಲ್ಲಿ ಮೀನಿದ್ದರೆ ನೀರು ಸ್ವಚ್ಛವಾಗಿರುತ್ತದೆ. ಹಾಗೆಯೇ, ಸಮಾಜದಲ್ಲಿ ಪತ್ರಕರ್ತರಿದ್ದರೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದುತ್ತಾರೆ ಎಂದು ಗೋವಿನಕೋವಿ ಬೃಹನ್ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಹೇಳಿದರು.
ನ್ಯಾಮತಿ ತಾಲೂಕಿನ ಗೋವಿನಕೋವಿ ಬೃಹನ್ಮಠದಲ್ಲಿ ಶನಿವಾರ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪತ್ರಕರ್ತರು ವೇದಿಕೆಗಳಲ್ಲಿ ಮೈಕ್ ಹಿಡಿದು ಮಾತನಾಡುವುದು ಕಡಿಮೆ. ಆದರೆ ಲೇಖನಿ ಹಿಡಿದರೆ ಸಮಾಜವೇ ನಿಬ್ಬೆರಗಾಗುವಂತೆ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮೌನವಾಗಿಯೇ ಮಾಡುತ್ತಾರೆ. ಅದಕ್ಕಾಗಿ ಸಮಾಜವನ್ನು ಸರಿದಾರಿಗೆ ತರಲು ಕತ್ತಿ ಬೇಡ, ಕೇವಲ ಅವರ ಬಳಿ ಇರುವ ಲೇಖನಿ ಸಾಕು ಎಂದರು.
ಮಠ, ಮಂದಿರಗಳಲ್ಲಿ ಏನೇ ಸತ್ಕಾರ್ಯಗಳು ನಡೆದು, ಆ ಸುದ್ದಿ ಸದ್ಭಕ್ತರಿಗೆ ತಲುಪುವುದು ಮಾಧ್ಯಮ ಮೂಲಕವೇ. ಹಾಗಾಗಿ ಸಹಸ್ರಾರು ವರ್ಷಗಳಿಂದ ಮಠ- ಮಂದಿರಗಳಿಗೂ ಹಾಗೂ ಪತ್ರಕರ್ತರಿಗೂ ಅವಿನಾಭಾವ ಸಂಬಂಧ ಇದೆ ಎಂದು ತಿಳಿಸಿದರು.
ಈ ಬಾರಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಬಹುತೇಕರು ಮರು ಆಯ್ಕೆಯಾಗಿದ್ದಾರೆ ಎಂದು ಕೇಳಿದ್ದೇನೆ, ಇದು ನಿಜಕ್ಕೂ ಶ್ಲಾಘನಿಯ. ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ ಅವರ ನೇತೃತ್ವದಲ್ಲಿ ಸಂಘ ಮತ್ತಷ್ಟು ಬೆಳವಣಿಗೆಯಾಗಲಿ. ಆ ಮುಖಾಂತರ ಸಂಘದ ಪ್ರತಿಯೊಬ್ಬ ಪತ್ರಕರ್ತರಿಗೂ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲಿ ಎಂದು ಆಶಿಸುತ್ತೇನೆ ಎಂದರು.
ಕಾನಿಪ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ ಮಾತನಾಡಿ, ಪತ್ರಕರ್ತರು ನಿತ್ಯವೂ, ನಾಡನ್ನು ಎಚ್ಚರಿಸುವ ಸುದ್ದಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ಯೋಗಕ್ಷೇಮ ನಮ್ಮ ಜವಾಬ್ದಾರಿಯಾಗಿರುತ್ತದೆ ಮತ್ತು ಅವರಿಗೆ ಸಮಸ್ಯೆಗಳಾದಾಗ ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಸಂಘ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಹಿರೇಕಲ್ಮಠ ಹಾಗೂ ಗೋವಿನಕೋವಿ ಬೃಹನ್ಮಠದ ಸ್ವಾಮೀಜಿಗಳು ಕಾನಿಪ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಿ ಭಕ್ತಿ ಮತ್ತು ಶಕ್ತಿ ತುಂಬಿದ್ದು, ನಾವೆಲ್ಲರೂ ಇದನ್ನು ಮೈಗೂಡಿಸಿಕೊಂಡು ಸಮಾಜದ ಅನಿಷ್ಟಗಳನ್ನು ತೊಲಗಿಸಲು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಟಿ. ಶ್ರೀನಿವಾಸ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಪತ್ರಕರ್ತರು ಅತಿ ಹೆಚ್ಚು ಮತ ನೀಡಿ ನಮ್ಮ ತಂಡಕ್ಕೆ ಅಧಿಕಾರ ನೀಡಿದ್ದಾರೆ. ನಾವು ಪ್ರತಿಯೊಬ್ಬ ಪತ್ರಕರ್ತರ ಹಿತ ಕಾಪಾಡಲು ಕೆಲಸ ಮಾಡುತ್ತೇವೆ. ಶ್ರೀಮಠ ನಮಗೆ ಸನ್ಮಾನಿಸಿ ನಮ್ಮ ಜವಾಬ್ದಾರಿ ಹೆಚ್ಚು ಮಾಡಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇವೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬದ್ರೀನಾಥ್, ಖಜಾಂಚಿ ಜಿ.ಎಸ್. ವೀರೇಶ್, ನಿರ್ದೇಶಕ ಚಿದಾನಂದ್ ಮಾತನಾಡಿದರು. ನ್ಯಾಮತಿ ತಾಲೂಕು ಪತ್ರಕರ್ತರ ಸಂಘದ ತಾಲೂಕು ಸಂಚಾಲಕ ಎಂ.ಎಸ್. ಶಾಸ್ತ್ರಿ ಹೊಳೆಮಠ ನಿರೂಪಿಸಿದರು.
ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ವೇದಮೂರ್ತಿ, ಮುದ್ದಯ್ಯ, ಸದಸ್ಯರಾದ ಭಾರತಿ, ಸುರೇಶ್, ಬಸಣ್ಣ ರುದ್ರೇಶ್, ಚನ್ನಬಸವ ಶೀಲವಂತ, ಪತ್ರಕರ್ತರಾದ ಸದಾಶಿವಯ್ಯ, ಹಳದಪ್ಪ, ಶ್ರೀಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.