ಹೊನ್ನಾಳಿಯ ಹಿರೇಕಲ್ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಸ್ಕೃತಿ, ಸಂಸ್ಕಾರ ಕಾರ್ಯಕ್ರಮದಲ್ಲಿ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ, ಪದಾಧಿಕಾರಿಗಳನ್ನು ಸನ್ಮಾನಿಸಿದರು. ಬದರಿನಾಥ್, ಮಂಜುನಾಥ್ ಏಕಬೋಟೆ, ವೀರೇಶ್ ಇತರರಿದ್ದರು. 
ದಾವಣಗೆರೆ

ಸಮಾಜದ ಲೋಪ ತಿದ್ದಲು ಪತ್ರಕರ್ತರಿಂದ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಸಂಸ್ಕೃತಿ, ಸಂಸ್ಕಾರ ಕಾರ್ಯಕ್ರಮ
  • ಸರ್ಕಾರ ಪತ್ರಕರ್ತರಿಗೆ ಯೋಜನೆ ರೂಪಿಸಲಿ
  • ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
ಹೊನ್ನಾಳಿ: ಪತ್ರಕರ್ತರಿಂದ ಮಾತ್ರ ಸಮಾಜದ ಲೋಪಗಳನ್ನು ತಿದ್ದಲು ಸಾಧ್ಯ ಎಂದು ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಸ್ಕೃತಿ, ಸಂಸ್ಕಾರ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ, ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು.
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಹಾಗಾಗಿ ಸರ್ಕಾರ ಪತ್ರಕರ್ತರಿಗೆ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲಗೊಳಿಸಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿಯಾಗಿ ಎನ್.ಕೆ. ಆಂಜನೇಯ, ಉಪಾಧ್ಯಕ್ಷರಾಗಿ ಶ್ರೀನಿವಾಸ್, ನಿರ್ದೇಶಕರಾಗಿ ಲಿಂಗಾಪುರದ ರಾಘವೇಂದ್ರ ಅವರು ಚುನಾಯಿತರಾಗಿದ್ದು, ನಮ್ಮ ತಾಲೂಕಿನ ಎಲ್ಲ ಪತ್ರಕರ್ತರು ನಮ್ಮ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ ಮಾತನಾಡಿ, ಒಬ್ಬ ವ್ಯಕ್ತಿ ಎಷ್ಟೇ ಡಿಗ್ರಿಗಳನ್ನು ಪಡೆದುಕೊಂಡರೂ ಅವರಿಗೆ ಸಂಸ್ಕೃತಿ, ಸಂಸ್ಕಾರ ಇಲ್ಲದಿದ್ದರೆ ಅದೆಲ್ಲವೂ ವ್ಯರ್ಥ ಎಂದರು.
ಮನುಷ್ಯ ಆಧುನಿಕ ಜೀವನದ ಭರಾಟೆಯಲ್ಲಿ ಸಂಸ್ಕಾರಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾನೆ. ಇಂತಹ ಮಠಮಾನ್ಯಗಳ ಆಶ್ರಯದಲ್ಲಿ ನಡೆಯುವ ಧರ್ಮಸಭೆಗಳಲ್ಲಿ ಉಪನ್ಯಾಸ ಕೇಳುವ ಮೂಲಕ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗದ ಆಯುಷ್ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎ. ಹಿರೇಮಠ ಮಾತನಾಡಿದರು.
ಕತ್ತಿಗೆ ಗ್ರಾಮದಲ್ಲಿರುವ ರೇವಣಸಿದ್ದೇಶ್ವರ ಸ್ಟೋನ್ ಕ್ರಷರ್ ಮಾಲೀಕರಾದ ಧನಂಜಯ ಪಾಟೀಲ್ ಅವರು ಪೂಜೆ ಮತ್ತು ಭಕ್ತರಿಗೆ ಪ್ರಸಾದ ಸೇವೆ ನಡೆಸಿಕೊಟ್ಟರು.
ಜಕ್ಕಿನಕೊಪ್ಪ ಗ್ರಾಮದ ಶ್ರೀ ಆಂಜನೇಯಸ್ವಾಮಿ ಕೋಲಾಟ ಸಂಘದವರು ಭಜನೆ ಹಾಗೂ ಕೋಲಾಟ ಪ್ರದರ್ಶನ ಮಾಡಿದರು. ಕೆಪಿಟಿಸಿಎಲ್‌ನ ಉದ್ಯೋಗಿ ಕೀರ್ತನ ವಿಶೇಷ ನೃತ್ಯರೂಪಕ ನಡೆಸಿಕೊಟ್ಟರು.
ವೇದಮೂರ್ತಿ ಅನ್ನದಾನಯ್ಯ ಶಾಸ್ತ್ರಿ ವೇದಘೋಷ ಮಾಡಿದರು. ಚನ್ನೇಶ್ವರ ಗಾನ ಕಲಾ ಸಂಘದವರು ಪ್ರಾರ್ಥಿಸಿದರು. ಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ ನಿರೂಪಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬದರಿನಾಥ್, ಖಜಾಂಚಿ ವೀರೇಶ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ಎನ್.ಕೆ. ಆಂಜನೇಯ, ಮುದ್ದಯ್ಯ, ರಾಜ್ಯ ಸಮಿತಿ ಸದಸ್ಯರಾದ ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಸ್.ಕೆ. ಒಡೆಯರ್, ನಿರ್ದೇಶಕರಾದ ವಿಶ್ವನಾಥ್, ವೇದಮೂರ್ತಿ, ಮಂಜುನಾಥ್ ಕಾಡಜ್ಜಿ, ಭಾರತಿ, ರಘುಪ್ರಸಾದ್, ರಾಘವೇಂದ್ರ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೋರಿ ಯೋಗೀಶ್, ಮೃತ್ಯುಂಜಯ ಪಾಟೀಲ್, ಹೊಳೆಮಠಶಾಸ್ತ್ರಿ, ಗಿರೀಶ್ ನಾಡಿಗ್, ಹಾಲೇಶ್, ರುದ್ರೇಶ್, ಮುಖಂಡರಾದ ಎಚ್.ಎ. ಉಮಾಪತಿ, ಶಿಕ್ಷಕರಾದ ಕರಿಬಸಯ್ಯ ಇದ್ದರು.