ಮಾಯಕೊಂಡ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಸೋಯಾಬಿನ್ ಬಿತ್ತನೆ ಬೀಜ ವಿತರಿಸಲಾಯಿತು. ಎಸ್.ಜಿ. ರುದ್ರೇಶ್, ಎಸ್.ಎನ್. ಜಯಪ್ರಕಾಶ್, ಎಚ್.ಎಂ. ದಿನೇಶ್, ಯಲ್ಲಪ್ಪ, ಉಲಗಪ್ಪ, ಸಂದೀಪ್, ಶಿವು ಇತರರು ಇದ್ದರು. Farmer
- ಕೃಷಿ ಅಧಿಕಾರಿ ಬೀರಪ್ಪ ಸಲಹೆ
- ಮಾಯಕೊಂಡದಲ್ಲಿ ಸೋಯಾಬಿನ್ ಬಿತ್ತನೆ ಬೀಜ ವಿತರಣೆ
ಮಾಯಕೊಂಡ: ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಸೋಯಾಬಿನ್ ಬಿತ್ತನೆ ಬೀಜವನ್ನು ಗುರುವಾರ ವಿತರಣೆ ಮಾಡಲಾಯಿತು. Farmer
ಕೃಷಿ ಅಧಿಕಾರಿ ಕೆ. ಬೀರಪ್ಪ ಮಾತನಾಡಿ, ನಮ್ಮ ಇಲಾಖೆಯಿಂದ ಪ್ರಸಕ್ತ ಮುಂಗಾರು ಹಂಗಾಮಿಗೆ ಸೋಯಾಬಿನ್ ಬೀಜವನ್ನು ಕೆಲ ರೈತರಿಗೆ ಪ್ರಾತ್ಯಕ್ಷತೆಗಾಗಿ ಉಚಿತ ವಿತರಣೆ ಮಾಡಲಾಗಿದೆ. ಈ ವರ್ಷ ಮಾಯಕೊಂಡ ಹೋಬಳಿಯ ಜಮೀನುಗಳಲ್ಲಿ ಉತ್ತಮವಾಗಿ ಫಸಲು ಬಂದರೆ ಮುಂದಿನ ವರ್ಷ ಎಲ್ಲ ರೈತರಿಗೂ ವಿತರಣೆ ಮಾಡುವ ಉದ್ದೇಶವಿದೆ ಎಂದರು.
25 ಕೆಜಿ ಬೀಜದ 25 ಪ್ಯಾಕೆಟ್ ಬಂದಿದ್ದು, ಒಬ್ಬ ರೈತನಿಗೆ 2 ಪ್ಯಾಕೆಟ್‌ನಂತೆ ಹೋಬಳಿಯ ವಿವಿಧ ಗ್ರಾಮಗಳ 12 ರೈತರಿಗೆ ವಿತರಣೆ ಮಾಡಲಾಗಿದೆ. ಒಂದು ಎಕರೆಗೆ 25 ಕೆಜಿ ಬೀಜವನ್ನು ಉತ್ತಮವಾಗಿ ಹದ ಮಳೆ ಬಂದ ನಂತರ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದರು.
ಸೋಯಾಬಿನ್ ಉತ್ತಮ ಎಣ್ಣೆ ಕಾಳು ಫಸಲಾಗಿದ್ದು, ಇದನ್ನು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಹಾಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಸಿಗಲಿದೆ ಎಂದರು. ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಸ್. ಜಿ. ರುದ್ರೇಶ್ ಮಾತನಾಡಿ, ರೈತರು ಒಂದೇ ಬೆಳೆಗೆ ಅಂಟಿಕೊಳ್ಳದೆ ಸೋಯಾಬಿನ್, ಸಿರಿಧಾನ್ಯ, ಹಣ್ಣು ತರಕಾರಿ ಬೆಳೆಗಳನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ಎಸ್.ಎನ್. ಜಯಪ್ರಕಾಶ್ ಮಾತನಾಡಿ, ರೈತರು ಬಹುಬೆಳೆ ಪದ್ಧತಿ ಅನುಸರಿಸಬೇಕು. ಇದರಿಂದ ಆರ್ಥಿಕವಾಗಿ ಸಬಲರಾಗಬಹುದು. ದುಬಾರಿ ಮೆಕ್ಕೆಜೋಳ ಬೀಜ ಮತ್ತು ರಸಗೊಬ್ಬರಕ್ಕೆ ಹಣ ವ್ಯಯಮಾಡಿ ಮುಳ್ಳು ಸಜ್ಜೆ ಕಳೆಯಲ್ಲಿ ಬೆಳೆ ಕಳೆದುಕೊಳ್ಳುವುದಕ್ಕಿಂತ ಇಂತಹ ಹೊಸ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದರು.
ಪ್ರಗತಿಪರ ಯುವ ಕೃಷಿಕ ಹೆದ್ನೆ ದಿನೇಶ್ ಮಾತನಾಡಿ, ಖುಷ್ಕಿ ಜಮೀನುಗಳಲ್ಲಿ ಸೋಯಾಬಿನ್ ಉತ್ತಮ ಬೆಳೆ ಬರುತ್ತದೆ. ರೈತರು ಇಂತಹ ಲಾಭದಾಯಕ ಬೆಳೆ ಬೆಳೆಯಬೇಕು ಎಂದರು. ರೈತರಿಂದ ಪಹಣಿ ಆಧಾರ್ ಕಾರ್ಡ್ ಪಡೆದು ಬೀಜವನ್ನು ವಿತರಣೆ ಮಾಡಲಾಯಿತು. ಈ ವೇಳೆ ಪ್ರಗತಿಪರ ಕೃಷಿಕ ಎಸ್.ಜಿ. ರುದ್ರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎನ್. ಜಯಪ್ರಕಾಶ್, ಯುವ ಕೃಷಿಕ ಎಚ್. ಎಂ.ದಿನೇಶ್, ನಿವೃತ್ತ ಶಿಕ್ಷಕ ಯಲ್ಲಪ್ಪ, ಉಲಗಪ್ಪ, ಸಂದೀಪ್, ಶಿವು ಇತರರು ಇದ್ದರು.