ಹೊನ್ನಾಳಿ ಪಟ್ಟಣದಲ್ಲಿ ಗುರುವಾರ ಸಂಘದ ಜ್ಯೇಷ್ಠ ಪ್ರಚಾರಕ ದಿ. ಅಜಿತಕುಮಾರ್ ಸ್ಮರಣೆಯ ಸೇವಾದಿನ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಎಂ.ಪಿ. ರೇಣುಕಾಚಾರ್ಯ, ನಾಗರಾಜ್, ಸುರೇಶ್, ನೆಲಹೊನ್ನೆ ಮಂಜುನಾಥ್, ಎ.ಬಿ.ಹನುಮಂತಪ್ಪ, ಶಾಂತರಾಜ್‌ಪಾಟೀಲ್ ಇತರರಿದ್ದರು. Blood donation 
ದಾವಣಗೆರೆ

ಶಿಕ್ಷಣ, ಸಂಸ್ಕಾರ, ಆರೋಗ್ಯಕ್ಕೆ ಅಷ್ಟಾಂಗ ಯೋಗ ಪರಿಚಯ

ಪ್ರಮುಖ ಮುಖ್ಯಾಂಶಗಳು

  • ಆರೆಸ್ಸೆಸ್ ಕಾರ್ಯವಾಹ ಗಿರೀಶ್ ಕಾರಂತ್ ಹೇಳಿಕೆ Blood donation
  • ರಕ್ತದಾನ ಶಿಬಿರ
  • ವಾಜಪೇಯಿ ಜನ್ಮದಿನ ಆಚರಣೆ
ಹೊನ್ನಾಳಿ: ಬುದ್ಧಿ, ಮನಸ್ಸು ಹಾಗೂ ಶರೀರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಅಷ್ಟಾಂಗ ಯೋಗವನ್ನು ಸಾಧಿಸಿದ ಅಪರೂಪದ ಯೋಗ ಸಾಧಕ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ದಿ. ಅಜಿತ್‌ಕುಮಾರ್ ಎಂದು ಆರ್‌ಎಸ್‌ಎಸ್ ಶಿವಮೊಗ್ಗ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ರಾಘವೇಂದ್ರ ಸೇವಾ ಟ್ರಸ್ಟ್, ಚೇತನಾ ಟ್ರಸ್ಟ್, ಶಿವಮೊಗ್ಗ ರೋಟರಿ ರಕ್ತ ಕೇಂದ್ರದ ವತಿಯಿಂದ ಸಂಘದ ಜ್ಯೇಷ್ಠ ಪ್ರಚಾರಕ ದಿ. ಅಜಿತಕುಮಾರ್ ಸ್ಮರಣೆಯ ಸೇವಾದಿನ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಶಿಕ್ಷಣ, ಸಂಸ್ಕಾರ ಹಾಗೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಆಯ್ದ ಸೇವಾವೃತ್ತಿಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಪ್ರಾರಂಭಿಸಿದ ಮೊದಲಿಗರು ಅಜಿತ್‌ಕುಮಾರ್. ಜತೆಗೆ ಸೇವಾ ಬಸದಿಗಳಲ್ಲಿ ಮನೆಪಾಠ, ಬಾಲಗೋಕುಲ ಹಾಗೂ ಮಾತೃಮಂಡಳಿ ಪ್ರಾರಂಭಿಸಿ ಮಕ್ಕಳಿಗೆ ಹಾಗೂ ಮಾತೆಯರಿಗೆ ಮತ್ತಷ್ಟು ಸಂಸ್ಕಾರ ನೀಡುವುದಕ್ಕೆ ಪ್ರೇರಣೆ ನೀಡಿದರು. ಅವರ ಸ್ಮರಣಾರ್ಥ ದಿನವೇ ಹಿಂದು ಸೇವಾ ಪ್ರತಿಷ್ಠಾನ ಇಡೀ ರಾಜ್ಯದಲ್ಲಿ ಎಲ್ಲ ಸೇವಾ ಬಸದಿ, ದೇವಾಲಯ ಹಾಗೂ ಪ್ರಮುಖ ಕೇಂದ್ರಗಳಲ್ಲಿ ಸೇವಾ ದಿನ ಆಚರಿಸುತ್ತಾ ಬಂದಿದೆ ಎಂದರು.
ಆರ್‌ಎಸ್‌ಎಸ್‌ನ ಶ್ರೇಷ್ಠ ಪ್ರಚಾರಕ, ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದ ವಾಜಪೇಯಿ ಅವರು ಅಟಲ್‌ಜಿ ಎಂದೇ ದೇಶದುದ್ದಕ್ಕೂ ಖ್ಯಾತಿ ಪಡೆದಿದ್ದಾರೆ. ಇವರ ಭಾಷಣ ಎಂದರೆ ಪ್ರತಿಪಕ್ಷ ನಾಯಕರೂ ಮೌನದಿಂದ ಆಲಿಸುತ್ತಿದ್ದರು. ಒಬ್ಬರಿಗೂ ನೋವು ಕೊಡದೆ ಆಡಳಿತ ನಡೆಸಿದ ಅಪ್ರತಿಮ ದೇಶಭಕ್ತ ಎಂದು ಹೇಳಿದರು. ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ, ವಕೀಲ ಶ್ರೀನಿವಾಸ್‌ಮೂರ್ತಿ ಮಾತನಾಡಿ, ಈ ಇಬ್ಬರು ದೇಶಭಕ್ತರನ್ನು ಸ್ಮರಣೆಯ ಜತೆಗೆ ಇತರರ ಜೀವಗಳನ್ನು ಉಳಿಸಲು ರಕ್ತದಾನ ಶಿಬಿರ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಶಿವಮೊಗ್ಗದ ರೋಟರಿ ರಕ್ತ ಕೇಂದ್ರದ ಪಿಆರ್‌ಒ ಸತೀಶ್ ಮಾತನಾಡಿ, ಶಿಬಿರದಲ್ಲಿ 64 ಯುವಕರು ರಕ್ತದಾನ ಮಾಡಿದರು ಎಂದು ಮಾಹಿತಿ ನೀಡಿದರು.

105 ಬಾರಿ ರಕ್ತದಾನ

ಆರ್‌ಎಸ್‌ಎಸ್ ಶಿವಮೊಗ್ಗ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಮೂಲತಃ ಶಿವಮೊಗ್ಗದವರು. ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಇವರು ತಮ್ಮ 18ನೇ ವಯಸ್ಸಿನಿಂದ ಇಲ್ಲಿಯವರೆವಿಗೂ 105 ಬಾರಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ತಾಲೂಕಾಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಸುರೇಶ್, ಮುಖಂಡರಾದ ನೆಲಹೊನ್ನೆ ಮಂಜುನಾಥ್, ಎ.ಬಿ. ಹನುಮಂತಪ್ಪ, ಶಾಂತರಾಜ್‌ಪಾಟೀಲ್, ಎಂ.ಆರ್.ಮಹೇಶ್, ಲಿಂಗರಾಜ್, ಶಿವಾನಂದ್, ಮಂಜುನಾಥ್, ಕುಬೇಂದ್ರಪ್ಪ, ಜಗದೀಶ್, ದೇವರಾಜ್ ನೆಲಹೊನ್ನೆ, ಪ್ರವೀಣ್‌ರಾಂಪುರ ಇತರರು ಇದ್ದರು.