ನೀರಿನ ಕೊರತೆಯ ಹಿನ್ನೆಲೆಯಲ್ಲಿ ಮಾಯಕೊಂಡ ಹೋಬಳಿಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಗದ್ದೆಗಳನ್ನು ಉಳುಮೆ ಮಾಡದೆ ಹಾಗೇ ಬಿಟ್ಟಿರುವುದು. bhadra reservoir
- ಭದ್ರಾ ಅಚ್ಚುಕಟ್ಟು ಭತ್ತದ ಬೆಳೆಗೆ ನೀರು ಅನುಮಾನ
- ಮೇವಿನ ಅಭಾವದ ಆತಂಕದಲ್ಲಿ ರೈತರು
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿರುವುದ ರಿಂದ ಮಲೆನಾಡು ಭಾಗದಿಂದ ಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಹೀಗಾಗಿ, ಈ ಬಾರಿಯ ಮಳೆಗಾಲದ ಭತ್ತದ ಬೆಳೆಗೆ ಭದ್ರಾ ನಾಲೆಯ ನೀರು ಸಿಗುವುದು ಅನುಮಾನವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಆತಂಕಕ್ಕೆ ಸಿಲುಕಿದ್ದಾರೆ.
ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಸಾಕಷ್ಟು ಮಳೆ ಸುರಿಯಬೇಕಿತ್ತು. ಆದರೆ, ಜುಲೈ ತಿಂಗಳು ಅರ್ಧ ಕಳೆದರೂ ಜಲಾಶಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ನೀರು ಬಂದಿಲ್ಲ. ಇದರಿಂದ ಬೆಳೆಗೆ ನೀರು ಸಿಗುತ್ತದೋ ಇಲ್ಲವೋ ಎಂಬುದು ಒಂದು ಕಡೆಯಾದರೆ, ಮತ್ತೊಂದೆಡೆ ದನಕರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆಯ ಭೀತಿಯೂ ಸೃಷ್ಟಿಯಾಗಿದೆ.
ನೂರಾರು ಹಳ್ಳಿಗಳಿಗೆ ತತ್ವಾರ: ಭದ್ರಾ ನಾಲೆಯ ಬಲದಂಡೆ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಟ್ಟಿರುವ ಕಂದಗಲ್ಲು, ಮಳಲ್ಕೆರೆ, ಬಾಡ, ಅತ್ತಿಗೆರೆ, ರಾಮಗೊಂಡನಹಳ್ಳಿ, ತೊಗಲೇರಿ, ಗೋಪನಾಳ, ಲೋಕಿಕೆರೆ, ಹೂವಿನಮಡು, ಗೋಣಿವಾಡ, ಹದಡಿ, ಮುದಹದಡಿ, ಮಾಗನಹಳ್ಳಿ, ಕಡ್ಲೆಬಾಳು, ದೊಡ್ಡಬಾತಿ, ಕುಂದವಾಡ, ತುರ್ಚಗಟ್ಟಗಳಿಗೆ ಈ ಬಾರಿ ನೀರಿನ ಕೊರತೆ ಎದುರಿಸುವ ಸಾಧ್ಯತೆಯಿದೆ ಎನ್ನುತ್ತಾರೆ ಕೃಷಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು. ಭತ್ತದ ನಾಟಿಗೆ ನೀರಿನ ಕೊರತೆ ಎದುರಾಗಿದ್ದು, ರೈತರು ಗದ್ದೆಗಳನ್ನು ಹದಗೊಳಿಸಲು ಮುಂದಾಗಿಲ್ಲ. ಮಾಗಡಿ ಹೋಬಳಿಯ ಬಾಡ, ಮಳಲ್ಕೆರೆ, ಅತ್ತಿಗೆರೆ ವ್ಯಾಪ್ತಿ ಯಲ್ಲಿ ನೂರಾರು ಎಕರೆ ಪ್ರದೇಶದ ಗದ್ದೆಗಳು ಕೃಷಿ ಚಟುವಟಿಕೆಗಳಿಲ್ಲದೆ ಭಣಗುಡುತ್ತಿವೆ.
ಜಾನುವಾರುಗಳಿಗೆ ಮೇವಿನ ಕೊರತೆ
ತಾಲೂಕಿನಲ್ಲಿ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ 11,110 ಹೆಕ್ಟೇರ್ ಪ್ರದೇಶವಿದ್ದು, ಈ ಬಾರಿ ಮುಂಗಾರು ಕೊರತೆಯಿಂದ ಬೆಳೆಗಳಿಗೆ ನೀರು ಪೂರೈಕೆ ಮಾಡುವುದು ಅನುಮಾನವಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಡಿ.ಎಂ. ಶ್ರೀಧರಮೂರ್ತಿ ತಿಳಿಸಿದ್ದಾರೆ. ರೈತರು ಭತ್ತದ ಜತೆಗೆ ಹೈನು ಗಾರಿಕೆಯನ್ನೂ ಉಪಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಕಳೆದ ಬೇಸಿಗೆ ಹಂಗಾಮಿನ ಭತ್ತ ಕಟಾವು ಮಾಡುವ ಸಮಯದಲ್ಲಿ
ಅಕಾಲಿಕ ಮಳೆ ಸುರಿದಿದ್ದರಿಂದ ಹುಲ್ಲು ನೀರಿನಲ್ಲಿ ಕೊಳೆತು ಹೋಗಿತ್ತು. ಇದರಿಂದ ಹುಲ್ಲಿನ ಸಮರ್ಪಕ ಶೇಖರಣೆ ಸಾಧ್ಯವಾಗಿರಲಿಲ್ಲ. ಈಗ ಮಳೆಗಾಲದ ಬೆಳೆಗೆ ನೀರಿಲ್ಲದಿದ್ದರೆ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಗೆ ಅಭಾವ ಉಂಟಾಗಲಿದೆ ಎಂಬುದು ಕೃಷಿಕರ ಕಳವಳವಾಗಿದೆ.
"
ನಮ್ಮ ಮನೆಯಲ್ಲಿ 40 ರಾಸುಗಳಿದ್ದು, ನಿತ್ಯ ಭಾರಿ ಪ್ರಮಾಣದ ಮೇವಿನ ಅವಶ್ಯಕತೆಯಿದೆ. ಕಳೆದ ಬಾರಿ ಹುಲ್ಲು ಮಳೆಗೆ ಸಿಲುಕಿ ಹಾಳಾಗಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸಿದರೆ ಮೇವು ಮತ್ತು ನೀರಿನ ಕೊರತೆ ಎದುರಾಗಿ ಹೈನುಗಾರಿಕೆ ಸಂಕಷ್ಟಕ್ಕೆ ಸಿಲುಕಲಿದೆ.
— ಮಂಜುನಾಥ್ ಗೋಣಿವಾಡ ಕೃಷಿಕ, ಗೋಣಿವಾಡ ಕ್ಯಾಂಪ್.
ಮಲೆನಾಡು ಭಾಗದಲ್ಲಿ ಮಳೆ ಇಲ್ಲದ ಕಾರಣ ಭದ್ರಾ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ. ಡ್ಯಾಂನಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕಾಗಿದೆ ಹೀಗಾಗಿ ಈ ಬಾರಿ ಬೆಳೆಗೆ ನೀರು ಸಿಗುವುದು ಕಷ್ಟ.
— ಜಿ.ಪಿ. ವಿಕಾಸ್, ಎಇಇ, ನೀರಾವರಿ ಇಲಾಖೆ, ದಾವಣಗೆರೆ.