ಎಐಯುಟಿಯುಸಿ ವತಿಯಿಂದ ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್, ಎಂ.ಆರ್. ಹಿರೇಮಠ್, ಮಂಜುನಾಥ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್, ರಾಘವೇಂದ್ರ ಇತರರಿದ್ದರು.
- ಕಾರ್ಮಿಕರ ಹಕ್ಕುಗಳ ಮೇಲೆ ಕೇಂದ್ರದ ದಾಳಿ
- ಎಐಯುಟಿಯುಸಿ ರಾಜ್ಯಾಧ್ಯಕ್ಷ ಸೋಮಶೇಖರ್ ಕಿಡಿ
- ಎಐಯುಟಿಯುಸಿಯಿಂದ ಮೇ ದಿನಾಚರಣೆ
ದಾವಣಗೆರೆ: ಲಕ್ಷಾಂತರ ಗುತ್ತಿಗೆ ಕಾರ್ಮಿಕರ ಸೇವಾಭದ್ರತೆ, ಕಾಯಂ, ಕನಿಷ್ಠ ವೇತನದ ಪರಿಷ್ಕರಣೆ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷೃ ತಾಳುವ ಮೂಲಕ ಮಾಲೀಕರ ಪಾದಸೇವೆಗೆ ಟೊಂಕ ಕಟ್ಟಿದೆ ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಕಿಡಿ ಕಾರಿದರು.
ಎಐಯುಟಿಯುಸಿ, ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್ ಜಿಲ್ಲಾ ಸಮಿತಿ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘಟನೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಕಾರ್ಮಿಕರ ಕಾಯ್ದೆಗಳಿಗೆ ನಿಯಮಗಳನ್ನು ರೂಪಿಸಿ ಕಾರ್ಯಗತಗೊಳಿಸುವ ತರಾತುರಿಯಲ್ಲಿದೆ. ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸುವ ಗೊಡವೆಗೆ ಹೋಗದೆ, ಅವರನ್ನು ತೀವ್ರ ಶೋಷಣೆಗೆ ಗುರಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಬಂಡವಾಳಶಾಹಿ ವ್ಯವಸ್ಥೆ ತನ್ನ ಲಾಭ ಹೆಚ್ಚಿಸಿಕೊಳ್ಳಲು ಶ್ರಮಿಕರ ಕೆಲಸದ ಹೊರೆ ಹೆಚ್ಚಿಸುತ್ತಿದ್ದು, 12 ಅಥವಾ ಅದಕ್ಕಿಂತ ಹೆಚ್ಚಿನ ತಾಸಿನ ಕೆಲಸದ ಅವಧಿ ಹೇರಲು ಪ್ರಯತ್ನಿಸುತ್ತಿದೆ. ಹೋರಾಟಗಳಿಂದ ಪಡೆದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ, 4 ಸಂಹಿತೆ ಜಾರಿಗೊಳಿಸಿ ಕಾರ್ಮಿಕರ ಹಕ್ಕುಗಳ ಮೇಲೆ ನೇರ ದಾಳಿ ನಡೆಸುತ್ತಿದೆ ಎಂದರು.
ಹೈರ್ ಆ್ಯಂಡ್ ಫೈರ್ ನೀತಿ ಮೂಲಕ ಉದ್ಯೋಗದ ಭದ್ರತೆ ಕಿತ್ತುಕೊಳ್ಳಲಾಗುತ್ತಿದೆ. ನಿಶ್ಚಿತ ಅವಧಿಯ ಉದ್ಯೋಗ ಮತ್ತು ಗುತ್ತಿಗೆ ಹಾಗೂ ಗಿಗ್ ಪ್ಲಾಟ್‌ಫಾರಂ ಕಾರ್ಮಿಕ ವ್ಯವಸ್ಥೆಗಳನ್ನು ಕಾನೂನುಬದ್ಧಗೊಳಿಸುವ ಮೂಲಕ ಶಾಶ್ವತ ಉದ್ಯೋಗವನ್ನು ದುರ್ಬಲಗೊಳಿಸಲಾಗಿದೆ. ಮುಷ್ಕರ ಹಕ್ಕಿನ ಮೇಲೂ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ ಎಂದು ಹೇಳಿದರು.
ವಿಶ್ವದ ಶಕ್ತಿಶಾಲಿ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಮಾರುಕಟ್ಟೆ ಮತ್ತು ಮಿಲಿಟರಿ ಪ್ರಾಬಲ್ಯವನ್ನು ವಿಸ್ತರಿಸಲು ಯುದ್ಧಗಳನ್ನು ಪ್ರಚೋದಿಸುತ್ತಿವೆ. ಹೀಗಾಗಿ ಮೇ ದಿನವನ್ನು ಸಾಮ್ರಾಜ್ಯಶಾಹಿ ಯುದ್ಧ, ದುರಾಕ್ರಮಣ, ಶೋಷಣೆ ಹಾಗೂ ಹಕ್ಕುಗಳ ಹರಣದ ವಿರುದ್ಧ ಪ್ರಪಂಚದಾದ್ಯಂತ ಕಾರ್ಮಿಕ ವರ್ಗದ ಏಕತೆಯ ಕಾರ್ಯಾಚರಣೆ ದಿನವಾಗಿ ಆಚರಿಸುವ ಅಗತ್ಯವಿದೆ ಎಂದು ಆಶಿಸಿದರು.
ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್‌ನ ಮಾಜಿ ಅಧ್ಯಕ್ಷ ಎಂ.ಆರ್. ಹಿರೇಮಠ್ ಮಾತನಾಡಿ ಇದುವರೆಗೂ ಬ್ಯಾಂಕ್ ಕ್ಷೇತ್ರದಲ್ಲಿ ಎಲ್ಲಾ ಹುದ್ದೆಗಳು ಕಾಯಂ ಸ್ವರೂಪವಾಗಿದ್ದವು. ಆದರೆ ಕೆಲವು ಕಾರ್ಮಿಕ ಸಂಘಟನೆಗಳ ಸಂಧಾನಪರ ಧೋರಣೆಯಿಂದಾಗಿ ಹೊರಗುತ್ತಿಗೆ ಕಾರ್ಮಿಕರ ನೇಮಕಾತಿ ನಡೆಯುತ್ತಿದೆ. ಹಾಗಾಗಿ ಕಾರ್ಮಿಕರು ಸಂಧಾನರಹಿತ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಕಟ್ಟಿ ಬೆಳೆಸಬೇಕಿದೆ ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ, ಜಂಟಿ ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು, ಜಿಲ್ಲಾ ಉಪಾಧ್ಯಕ್ಷ ಶಿವಾಜಿರಾವ್, ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್ ಸಹ ಕಾರ್ಯದರ್ಶಿ ರಾಘವೇಂದ್ರ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗವೇಣಿ, ಯುಬಿಡಿಟಿ ಕಾಲೇಜಿನ ಸಿ ಆ್ಯಂಡ್ ಡಿ ಗ್ರೂಪ್ ನೌಕರರ ಸಂಘದ ಖಜಾಂಚಿ ಪರಮೇಶ್ವರಪ್ಪ ಇದ್ದರು.