ದಾವಣಗೆರೆಯಲ್ಲಿ ಶುಕ್ರವಾರ ಮಹಿಳಾ ಉದ್ಯಮಿಗಳ ‘ಕುಶಲ’ ವಸ್ತು ಪ್ರದರ್ಶನವನ್ನು ದೂಡಾ ಆಯುಕ್ತೆ ರೇಣುಕಾ ಉದ್ಘಾಟಿಸಿದರು. ವನಿತಾ ಹೆಬ್ಬಾರ್, ಡಾ. ಎಂ.ಸಿ. ಶಶಿಕಾಂತ್, ಡಾ.ಬಿ.ಟಿ. ಅಚ್ಯುತ, ನಳಿನಿ ಅಚ್ಯುತ ಇತರರು ಪಾಲ್ಗೊಂಡಿದ್ದರು.
- ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಆಯೋಜನೆ
- 80ಕ್ಕೂ ಹೆಚ್ಚು ಉದ್ಯಮಿಗಳು ಭಾಗಿ
ದಾವಣಗೆರೆ : ತಾಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಮಹಿಳಾ ಉದ್ಯಮಿಗಳ ‘ಕುಶಲ’ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ ನಗರದ ನಾಗಮ್ಮ ಕೇಶವಮೂರ್ತಿ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟನೆಯಾಯಿತು.
ದೂಡಾ ಆಯುಕ್ತೆ ರೇಣುಕಾ ಮಾತನಾಡಿ, ನಗರದಲ್ಲಿ ನೀರಿನ ಅಭಾವ ನೀಗಿಸಲಾಗಿದೆ. ಇನ್ನೂ ಹೆಚ್ಚು ಒಳ್ಳೆಯ ಕೆಲಸಗಳನ್ನು ಮಾಡುವುದಾಗಿ ಹೇಳಿದರು.
ಸಮಾಜ ಸೇವಕಿ ವನಿತಾ ಹೆಬ್ಬಾರ್ ಮಾತನಾಡಿ, ಸಾಧನೆ ಮಾಡಲು ಯಾವ ಮಾರ್ಗ ಅನುಸರಿಸಬೇಕು ಎಂಬುದನ್ನು ವಿವರಿಸಿದರು. ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ಮಾತನಾಡಿ, ಉದ್ಯಮಿಗಳು ಊರಿಗಷ್ಟೆ ಸೀಮಿತವಾಗದೆ, ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದ ಅಧ್ಯಕ್ಷೆ ನಳಿನಿ ಅಚ್ಯುತ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿಭಾಗದ ಕಾರ್ಯ ಚಟುವಟಿಕೆಗಳನ್ನು ಶ್ರೀಮತಿ ಅಡಿಗ ವಿವರಿಸಿದರು.
ಸುಮಾರು 80ಕ್ಕೂ ಹೆಚ್ಚು ಉದ್ಯಮಿಗಳು ಭಾಗವಹಿಸಿದ್ದರು. ಸಾವಿತ್ರಮ್ಮ ಶಾಸ್ತ್ರಿ ಪ್ರಾರ್ಥಿಸಿದರು. ಆಶಾ ಭಾಗವತ್ ಸ್ವಾಗತಿಸಿದರು. ಅನಿತಾ ವಾಸು ನಿರೂಪಿಸಿದರು. ಸರಸ್ವತಿ ನಿರಂಜನ್ ವಂದಿಸಿದರು. ಹೇಮಾ ನಾರಾಯಣ, ದಾಕ್ಷಾಯಿಣಿ ಮೂರ್ತಿ ಮತ್ತು ನಾಗರತ್ನ ಜಗದೀಶ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗಿಯಾಗಿದ್ದರು.