ಚನ್ನಗಿರಿ: ಪಟ್ಟಣದ ಬೈಪಾಸ್ ರಸ್ತೆ ಪಕ್ಕ ರಾತ್ರಿ ಸಮಯದಲ್ಲಿ ಜೆಸಿಬಿಯಿಂದ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದೆವ್ವ ಕಾಣಿಸಿಕೊಂಡು ಇಬ್ಬರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದೆ ಎಂಬ ಸುದ್ದಿ ತಾಲೂಕಿನೆಲ್ಲೆಡೆ ಹಬ್ಬಿದ್ದು, ಜನ ಬೈಪಾಸ್ ರಸ್ತೆಗೆ ಹೋಗಲು ಹೆದರುತ್ತಿದ್ದಾರೆ.
ಅ. 12ರಂದು ರಾತ್ರಿ ಮೂವರು ಕಾರ್ಮಿಕರು ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ದಾರಿಯ ಪಕ್ಕದಲ್ಲಿ ಬಿಳಿಸೀರೆ ಉಟ್ಟ ಮಹಿಳೆ ನಿಂತಿರುವುದನ್ನು ಕಂಡ ಜೆಸಿಬಿ ಚಾಲಕ ಮತ್ತು ಅವನ ಇಬ್ಬರು ಸ್ನೇಹಿತರು ಯಾರೋ ಮಹಿಳೆ ನಿಂತಿದ್ದಾರೆ ಎಂದು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.
ವಾಹನ ಚಾಲಕ ಏನಾದರೂ ಆಗಲಿ ಒಂದು ಫೋಟೋ ತೆಗೆದುಕೊಂಡರೆ ಆಯಿತು ಎಂದು ತನ್ನ ಬಳಿಯಲ್ಲಿದ್ದ ಮೊಬೈಲ್ನಿಂದ ೆಟೋ ತೆಗೆಯಲು ಮುಂದಾಗಿದ್ದಾನೆ. ಅದನ್ನು ಗಮನಿಸಿದ ಮಹಿಳೆ ಇಬ್ಬರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದಾಳೆ. ಒಬ್ಬನ ಬೆನ್ನ ಮೇಲೆ ಕೈಗಳ ಗುರುತು ಬಿದ್ದಿದೆ ಎಂಬ ಸುದ್ದಿ ಪಟ್ಟಣದಲ್ಲಿ ಹರಿದಾಡುತ್ತಿದೆ.
ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ ಎನ್ನಲಾದ ಫೋಟೋಗಳು ತಾಲೂಕಿನಲ್ಲಿ ವೈರಲ್ ಆಗಿವೆ. ಈ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದವರು ಬದಲಿ ರಸ್ತೆಗೆ ಹೋಗುತ್ತಿದ್ದಾರೆ. ಪಟ್ಟಣದ ಸಾಕಷ್ಟು ರೈತರ ಜಮೀನು ತೋಟ ಇರುವುದು ಬೈಪಾಸ್ ರಸ್ತೆ ಆಸುಪಾಸಿನಲ್ಲಿ. ರೈತರು ಬೆಳಗ್ಗೆ ಹೋದರೆ ಸಂಜೆ ಮನೆಗೆ ವಾಪಸ್ ಬರುತ್ತಾರೆ. ಎರಡು ದಿನದಿಂದ ಸುದ್ದಿ ಪಟ್ಟಣದಲ್ಲಿ ಹರಿದಾಡುತ್ತಿರುವುದರಿಂದ ಬೈಪಾಸ್ ರಸ್ತೆ ಕಡೆ ಹೋಗುವುದನ್ನೇ ನಿಲ್ಲಿಸಿದ್ದಾರೆ.
ಕಿಡಿಗೇಡಿಗಳು ದೆವ್ವದ ಸುದ್ದಿ ಹರಡಿ ಮೋಜು ತೆಗದುಕೊಳ್ಳುತ್ತಿರಬಹುದು ಎನ್ನುವ ಶಂಕೆ ಬಲವಾಗಿದೆ. ಕೃತಕ ಬುದ್ಧಿಮತ್ತೆಯಿಂದ ಬಿಳಿ ಸೀರೆ ಉಟ್ಟ ಮಹಿಳೆಯ ಚಿತ್ರಗಳನ್ನು ರಚನೆ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿರಬಹುದು. ಈ ವಿಷಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ತಾಲೂಕಿನ ವಿಚಾರವಾದಿಗಳು ಆಗ್ರಹಪಡಿಸಿದ್ದಾರೆ.