ಮಾಯಕೊಂಡ ಸಮೀಪದ ಹೆದ್ನೇ ಗ್ರಾಮದಲ್ಲಿ ಮೈಸೂರಿಂದ ಆಮದು ಮಾಡಿಕೊಂಡ ಸಗಣಿ ಗೊಬ್ಬರವನ್ನು ಟ್ರ್ಯಾಕ್ಟರ್‌ಗೆ ತುಂಬುತ್ತಿರುವುದು. manure
- ಕ್ಷೀಣಿಸುತ್ತಿದೆ ಜಾನುವಾರುಗಳ ಸಂಖ್ಯೆ
- ಆಧುನಿಕತೆಗೆ ಒಗ್ಗಿದ ರೈತರು
- ನಶಿಸುತ್ತಿದೆ ಪಶುಸಂಗೋಪನೆ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಆಧುನಿಕ ಕೃಷಿ ಪದ್ಧತಿ ಮತ್ತು ಯಾಂತ್ರೀಕೃತ ಕೃಷಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ.
ಇದರ ಪರಿಣಾಮ, ದಾವಣಗೆರೆ ಜಿಲ್ಲೆಯ ಅಡಕೆ ಬೆಳೆಗಾರರು ತಮ್ಮ ತೋಟಗಳಿಗೆ ಅಗತ್ಯವಿರುವ ಕೊಟ್ಟಿಗೆ ಗೊಬ್ಬರಕ್ಕಾಗಿ ಈಗ ಮೈಸೂರು ಮತ್ತು ಮಂಡ್ಯ ಭಾಗವನ್ನು ಅವಲಂಬಿಸಿದ್ದು, ದೂರದ ಜಿಲ್ಲೆಗಳಿಂದ ಲಾರಿಗಳಲ್ಲಿ ಸಗಣಿ ಗೊಬ್ಬರವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಕಳೆದ 25-30 ವರ್ಷಗಳ ಹಿಂದೆ ಪ್ರತಿ ಹಳ್ಳಿಯಲ್ಲೂ ಹೇರಳವಾಗಿದ್ದ ದನ, ಕರು, ಎತ್ತುಗಳು ಈಗ ಬೆರಳೆಣಿಕೆಯಷ್ಟೂ ಕಾಣಸಿಗುತ್ತಿಲ್ಲ. ರೈತರು ಉಳುಮೆ, ಬಿತ್ತನೆ ಸೇರಿ ಎಲ್ಲ ಕೃಷಿ ಚಟುವಟಿಕೆಗಳಿಗೂ ಟ್ರ್ಯಾಕ್ಟರ್‌ಗಳನ್ನು ಬಳಸುತ್ತಿರುವುದರಿಂದ ಎತ್ತುಗಳು, ಎತ್ತಿನ ಬಂಡಿ ಹಾಗೂ ಪಶುಸಂಗೋಪನೆಯನ್ನು ಬಹುತೇಕ ಕೈಬಿಟ್ಟಿದ್ದಾರೆ. ಇದರಿಂದ ಹಳ್ಳಿಗಾಡಿನಲ್ಲಿ ಕೊಟ್ಟಿಗೆ ಗೊಬ್ಬರದ ಕೊರತೆ ತೀವ್ರವಾಗಿದೆ.
ಮಾಯಕೊಂಡ, ಆನಗೋಡು ಮತ್ತು ಅಣಜಿ ಹೋಬಳಿಗಳಲ್ಲಿ ಬೋರ್‌ವೆಲ್ ನೀರಾವರಿ ಆಧಾರಿತ ಅಡಕೆ ತೋಟಗಳು ವ್ಯಾಪಕವಾಗಿವೆ. ಅಡಕೆ ಬೆಳೆಗೆ ಉತ್ತಮ ಗುಣಮಟ್ಟದ ಕೊಟ್ಟಿಗೆ ಗೊಬ್ಬರ ಅತ್ಯಗತ್ಯ. ಆದರೆ, ಸ್ಥಳೀಯವಾಗಿ ಗೊಬ್ಬರ ಲಭ್ಯವಿಲ್ಲದ ಕಾರಣ, ಮಾಯಕೊಂಡ ಸುತ್ತಮುತ್ತಲ ಗ್ರಾಮಗಳ ರೈತರು ಇದಕ್ಕಾಗಿ ಮೈಸೂರು, ಮಂಡ್ಯ ಮತ್ತು ಮದ್ದೂರು ಭಾಗಗಳನ್ನು ಅವಲಂಬಿಸಿದ್ದಾರೆ. ಅಲ್ಲಿ ಹೆಚ್ಚು ಎಮ್ಮೆ, ಹಸುಗಳನ್ನು ಸಾಕಣೆ ಮಾಡುವುದರಿಂದ, ರೈತರು 10 ಮತ್ತು 12 ಗಾಲಿಗಳ ದೊಡ್ಡ ಲಾರಿಗಳಲ್ಲಿ ಹಸಿ ಸಗಣಿ ಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.
ಒಂದು ಲಾರಿ ಲೋಡ್ ಸಗಣಿ ಗೊಬ್ಬರಕ್ಕೆ ಸುಮಾರು 45 ರಿಂದ 55 ಸಾವಿರದವರೆಗೆ ಖರ್ಚು ಬರುತ್ತದೆ. ಇದರಲ್ಲಿ ಲಾರಿಗೆ ತುಂಬುವುದು ಮತ್ತು ಇಳಿಸುವ ವೆಚ್ಚವೂ ಸೇರಿರುತ್ತದೆ. ಒಂದು ಲಾರಿ ಗೊಬ್ಬರವು ಟ್ರ್ಯಾಕ್ಟರ್‌ನಲ್ಲಿ 5 ರಿಂದ 6 ಲೋಡ್ ತುಂಬುತ್ತದೆ. ಪ್ರತಿ ಲೋಡ್ ಗೊಬ್ಬರವನ್ನು 600 ರಿಂದ 650 ಅಡಕೆ ಮರಗಳಿಗೆ ಬಳಸಬಹುದು ಎನ್ನುತ್ತಾರೆ ಕೃಷಿಕರು.
ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆ ಯಾಗಿದೆ. ರೈತರು ತಮ್ಮ ಮನೆಗಳಲ್ಲಿ ಹಸು, ಕುರಿ, ಕೋಳಿ, ಎತ್ತುಗಳನ್ನು ಸಾಕಿದರೆ ಉತ್ತಮ ಆದಾಯ ಪಡೆಯುವುದರೊಂದಿಗೆ ಆರ್ಥಿಕವಾಗಿ ಸಬಲರಾಗಬಹುದು. ಜತೆಗೆ, ಸಗಣಿ ಗೊಬ್ಬರಕ್ಕೆ ಅನುಕೂಲ ಆಗುತ್ತದೆ ಮತ್ತು ನಿರಂತರ ಜಾನುವಾರುಗಳ ಕೆಲಸ ಮಾಡುವುದರಿಂದ ಆರೋಗ್ಯವನ್ನೂ ಚೆನ್ನಾಗಿ ಕಾಪಾಡಿಕೊಳ್ಳಬಹುದು.
ಅಡಕೆ ತೋಟಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚು ಬಳಸಿದರೆ ಮರಗಳ ಬಾಳಿಕೆ ಕ್ಷೀಣಿಸುತ್ತದೆ. ಹಾಗಾಗಿ ಅಡಕೆ, ದಾಳಿಂಬೆ ಮತ್ತು ಪೇರಲೆ ತೋಟಗಳಿಗೆ ಪ್ರತಿ ವರ್ಷ ದೂರದ ಮೈಸೂರು, ಮಂಡ್ಯ ಜಿಲ್ಲೆಗಳಿಂದ 15 ರಿಂದ 20 ಲೋಡ್ ಸಗಣಿ ಗೊಬ್ಬರವನ್ನು ಆಮದು ಮಾಡಿಕೊಂಡು ಬಳಸುತ್ತೇವೆ.