ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ರಕ್ಷಿಸಿದ ನಂತರ ಆತ ಕುಡಿದಿರುವ ನೀರನ್ನು ಹೊರ ಹಾಕಿಸುತ್ತಿರುವುದು.
- ತುರ್ತುಪರಿಸ್ಥಿತಿ ನಿರ್ವಹಣೆ ಬಗ್ಗೆ ಅನುಸರಿಸಬೇಕಾದ ವಿಧಾನಗಳ ಮಾಹಿತಿ
- ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡದಿಂದ ಪ್ರಾತ್ಯಕ್ಷಿಕೆ
- ಪೊಲೀಸರ ಬಂದೋಬಸ್ತ್
ಹೊನ್ನಾಳಿ: ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಹೇಗೆ ರಕ್ಷಿಸಬೇಕು ಎಂಬುದೂ ಸೇರಿ ವಿಪತ್ತು ನಿರ್ವಹಣೆ ಬಗ್ಗೆ ಪಟ್ಟಣದ ತುಂಗಭದ್ರಾ ನದಿ ತೀರದಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ಕಲ್ಪಿತ ಪ್ರದರ್ಶನ ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ನೀರಿನಲ್ಲಿ ಮುಳುಗಿದ ಅಥವಾ ಪ್ರವಾಹದಲ್ಲಿ ಸಿಲುಕಿರುವ ವ್ಯಕ್ತಿಯನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಮತ್ತು ಅನುಸರಿಸಬೇಕಾದ ವಿಧಾನಗಳನ್ನು ತಿಳಿಸಿಕೊಡಲಾಯಿತು.
ಮುಳುಗುತ್ತಿರುವ ವ್ಯಕ್ತಿಯನ್ನು ರಕ್ಷಣೆ ಮಾಡುವ ಮೊದಲು ಜಾಕೆಟ್ ಧರಿಸಬೇಕು. ಇಲ್ಲವಾದಲ್ಲಿ ಒಣಗಿದ ತೆಂಗಿನಕಾಯಿ, ಖಾಲಿ ನೀರಿನ ಬಾಟಲ್ ಅಥವಾ ಮುಚ್ಚಿದ ಕೊಡವನ್ನು ಎದೆಭಾಗದಲ್ಲಿ ಕಟ್ಟಿಕೊಂಡು ರಕ್ಷಿಸಲು ಮುಂದಾಗಬೇಕು ಹಾಗೂ ಕಾಪಾಡಿದ ವ್ಯಕ್ತಿಯನ್ನು ಯಾವ ರೀತಿ ನದಿ ತೀರಕ್ಕೆ ತರಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮಾಡಲಾಯಿತು.
ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ಕಲ್ಪಿತ ಪ್ರದರ್ಶನ ಮಾಡುತ್ತಿದ್ದಾಗ ಘಟನೆ ನಿಜವಾಗಿಯೂ ನಡೆದಿದೆ ಎನ್ನುವ ರೀತಿಯಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ ನೋಡುತ್ತಿದ್ದರು.
ಹಾಗೇ ಮುಳುಗಿದ ವ್ಯಕ್ತಿಯನ್ನು ರಕ್ಷಣೆ ಮಾಡಿ ನದಿ ತೀರಕ್ಕೆ ಕರೆ ತಂದಾಗ ಎಲ್ಲರೂ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.
ಎಡಿಸಿ ಶಿವಕುಮಾರ್ ಮಾತನಾಡಿ, ಮನೆಗಳಲ್ಲಿ ಮಕ್ಕಳು ಗೋಲಿ, ನಾಣ್ಯ ಅಥವಾ ಇತರೆ ವಸ್ತುಗಳನ್ನು ನುಂಗಿದಾಗ ಅದನ್ನು ವೈಜ್ಞಾನಿಕವಾಗಿ ಸುಲಭವಾಗಿ ಹೊರ ತೆಗೆಯಬಹುದು. ಇಂತಹ ವಿಧಾನವನ್ನು ತಿಳಿದುಕೊಂಡಿರಬೇಕು ಎಂದರು.
ನದಿ ತೀರದಲ್ಲಿ ನಡೆದ ಕಲ್ಪಿತ ಪ್ರದರ್ಶನ ವೀಕ್ಷಿಸಲು ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದರಿಂದ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ತಹಸೀಲ್ದಾರ್ ರಾಜೇಶ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್, ತಾಪಂ ಇಒ ಪ್ರಕಾಶ್, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡದ ಅಸ್ಲಮ್ ಆಹ್ಮದ್, ಇನ್ಸ್‌ಪೆಕ್ಟರ್ ರಾಮು, ಎಎಸ್‌ಐ ಸುಭಾಷ್, ಶಂಕರಪ್ಪ, ರಾಘವೇಂದ್ರ ನಾಯಕ್, ಸಂಜಯ್, ಪ್ರದೀಪ್ ಕುಮಾರ್, ವಜ್ರಚೇತನ ಪಾಟೀಲ್ ಇತರರು ಇದ್ದರು.
ತುರ್ತು ಪರಿಸ್ಥಿಯಲ್ಲಿ ತಾಳ್ಮೆ ಕಳೆದುಕೊಳ್ಳದಿರಿ
ರೈಲ್ವೇ- ವಾಹನಗಳ ಅಪಘಾತ, ನೀರಿನಲ್ಲಿ ಮುಳುಗುವುದು, ಬೆಂಕಿ ಜ್ವಾಲೆ ವ್ಯಾಪಿಸುವುದು ಇಂತಹ ತುರ್ತು ಸಂದರ್ಭದಲ್ಲಿ ಯುವಕರು ತಾಳ್ಮೆ ಕಳೆದುಕೊಳ್ಳದೆ ಹೇಗೆ ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು. ಆದರೆ ರಕ್ಷಣೆಗೆ ಮುಂದಾಗುವ ವ್ಯಕ್ತಿ ಧೈರ್ಯವಂತನಾಗಿರಬೇಕು ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು.
ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅವಘಡಗಳು ಸಂಭವಿಸಿದಾಗ ರಕ್ಷಕರು ಕೂಡಲೇ ಬರಲು ಸಾಧ್ಯವಾಗದಿರಬಹುದು. ಅಂತಹ ಸಂದರ್ಭದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಎದೆಗುಂದದೆ ರಕ್ಷಣೆ ಮಾಡಲು ಮುಂದಾಗಬೇಕು ಎನ್ನುವ ಕಾರಣಕ್ಕೆ ಇಂತಹ ಚಟುವಟಿಕೆಗಳನ್ನು ಮಾಡಲಾಗುತ್ತದೆ ಎಂದರು.