ಪ್ರಧಾನಮಂತ್ರಿ ಕುಸುಮ್ ಬಿ ಯೋಜನೆಯಡಿ ನಡೆದಿದೆ ಎನ್ನಲಾದ ಅಕ್ರಮ ಸಂಬಂಧ ಸಿಬಿಐ ತನಿಖೆ ನಡೆಸಲು ಆಗ್ರಹಿಸಿ ದಾವಣಗೆರೆಯಲ್ಲಿ ಶುಕ್ರವಾರ, ಜಿಲ್ಲಾ ರೈತರ ಒಕ್ಕೂಟದ ಶುಕ್ರವಾರ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸ್.ಕೆ. ಪಟೇಲ್ ಅವರಿಗೆ ಮನವಿಪತ್ರ ಸಲ್ಲಿಸಿತು. ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್, ಮುಖಂಡರಾದ ಲೋಕಿಕೆರೆ ನಾಗರಾಜ್, ಅಣಬೇರು ಜೀವನಮೂರ್ತಿ, ಗೋಣಿವಾಡ ಎಂ.ಡಿ.ಮಂಜುನಾಥ್ ಇತರರಿದ್ದರು.
- ಸಿಬಿಐ ತನಿಖೆಗೆ ಜಿಲ್ಲಾ ರೈತರ ಒಕ್ಕೂಟದ ಆಗ್ರಹ
- ಅಳವಡಿಸಿದ ಪರಿಕರಗಳ ಪರಿಶೀಲನೆಯಾಗಲಿ
- ಅಧೀಕ್ಷಕ ಇಂಜಿನಿಯರ್ ಪಟೇಲ್ ಅವರಿಗೆ ಮನವಿ ಸಲ್ಲಿಕೆ
ದಾವಣಗೆರೆ: ಪ್ರಧಾನಮಂತ್ರಿ ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಯಲ್ಲಿ ಅಕ್ರಮ ನಡೆದಿದ್ದು ಸಿಬಿಐ ತನಿಖೆ ನಡೆಸಲು ಆಗ್ರಹಿಸಿ ಜಿಲ್ಲಾ ರೈತರ ಒಕ್ಕೂಟ ಶುಕ್ರವಾರ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸ್.ಕೆ. ಪಟೇಲ್ ಅವರಿಗೆ ಮನವಿಪತ್ರ ಸಲ್ಲಿಸಿತು.
ಸೋಲಾರ್ ಪಂಪ್‌ಸೆಟ್ ಅಳವಡಿಕೆಗಾಗಿ ರೈತರು ಶೇ. 20ರಷ್ಟು ಮುಂಗಡ ಹಣ ಪಾವತಿಸಿದ್ದಾರೆ. ಏಜೆನ್ಸಿಯವರು ಸ್ಕೀಂನಲ್ಲಿ ರೋಲ್ ಪೈಪ್ ಇದೆ ಎಂದು ಸುಳ್ಳು ಹೇಳಿದ್ದರಿಂದ ರೈತರು ಸುಮಾರು 30ಸಾವಿರ ರೂ.ವರೆಗೆ ಸ್ವಂತ ವೆಚ್ಚ ಭರಿಸಿ ಪಿವಿಸಿ ಪೈಪ್ ಖರೀದಿಸಿ ತಂದು ಅಳವಡಿಸಿದ್ದಾರೆ. ಗುಂಡಿ ತೆಗೆಸುವ ಕೂಲಿ ಸೇರಿ ಕಾಂಕ್ರೀಟ್‌ಗೆ ಸಿಮೆಂಟ್ ಸಹ ರೈತರೇ ವ್ಯಯಿಸಿದ್ದಾರೆ. ರೈತರು ವ್ಯಯಿಸಿದ ಎಲ್ಲ ವೆಚ್ಚವನ್ನೂ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಒಂದು ಸೋಲಾರ್ ಪಂಪ್‌ಸೆಟ್ ಅಳವಡಿಸಲು ಏಜೆನ್ಸಿಗೆ ಸರ್ಕಾರದಿಂದ 2,85,536 ರೂ. ಬಿಡುಗಡೆ ಆಗುತ್ತದೆ. ಇದನ್ನು 1.20ರಿಂದ 1.30 ಲಕ್ಷ ರೂ.ನಲ್ಲಿ ಅಳವಡಿಸಬಹುದು. ಜಿಲ್ಲೆಯಲ್ಲಿ 2440 ರೈತರು ತಲಾ 58,509 ರೂ. ಮುಂಗಡ ಹಣ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯವ್ಯಾಪಿ ಸುಮಾರು 70 ಸಾವಿರ ರೈತರು ಅರ್ಜಿ ಸಲ್ಲಿಸಿದ್ದಾರೆ. ರೈತರ ಹೆಸರಿನಲ್ಲಿ ಕೋಟ್ಯಂತರ ರೂ. ಲೂಟಿ ನಡೆಯುತ್ತಿದೆ. ಇಡೀ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲವೇ ಹೈಕೋರ್ಟ್ ನ್ಯಾಯಮೂರ್ತಿಯವರಿಂದ ತನಿಖೆ ನಡೆಸಬೇಕು. ಕೆಆರ್‌ಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಮತ್ತು ಇಂಧನ ಸಚಿವ ಕೆ.ಜೆ.ಜಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಸುವ ಕಾರ್ಯದಲ್ಲಿ ಬೆಸ್ಕಾಂನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿಟ್ಟು, ಕೆಆರ್‌ಇಡಿಎಲ್ ನೇರವಾಗಿ ಅನುಷ್ಠಾನ ಮಾಡುತ್ತಿದ್ದು, ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಅಳವಡಿಸಲಾದ ಪ್ರತಿ ಸೋಲಾರ್ ಪಂಪ್‌ಸೆಟ್‌ಗಳನ್ನು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಂದ ಸಮಗ್ರ ಪರಿಶೀಲನೆ ನಡೆಸಬೇಕು.
ಅಳವಡಿಸಿರುವ ಉಪಕರಣಗಳ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆಯೂ ಪರಿಶೀಲನೆ ಆಗಬೇಕು. ರೈತರು ಮತ್ತು ಅನುಷ್ಠಾನ ಏಜೆನ್ಸಿಗಳ ನಡುವೆ ಸಂಪರ್ಕ ಇಲ್ಲ. ರೈತರು ಯಾರಿಗೆ ಪೋನ್ ಮಾಡಬೇಕು ಎಂಬುದು ತಿಳಿಯದಾಗಿದೆ.
ಏಜೆನ್ಸಿಯವರು ತಾಲ್ಲೂಕು ಕೇಂದ್ರಗಳಲ್ಲಿ ಕಚೇರಿ ತೆರೆದು, ರೈತರಿಗೆ ಸಹಾಯವಾಣಿ ಸಂಖ್ಯೆ ನೀಡಲು ಕ್ರಮವಹಿಸಬೇಕು. ಸೋಲಾರ್ ಪಂಪ್‌ಸೆಟ್ ಅಳವಡಿಸಲು ರಾಜ್ಯಾದ್ಯಂತ 13 ಅನುಷ್ಠಾನ ಸಂಸ್ಥೆ(ಏಜೆನ್ಸಿ)ಗಳನ್ನು ಆಯ್ಕೆ ಮಾಡಿರುವುದು ಅನುಮಾನಾಸ್ಪದವಾಗಿದೆ. ಈ ಏಜೆನ್ಸಿಗಳನ್ನು ಆಯ್ಕೆ ಮಾಡಿರುವುದು ಇ-ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆದು ಆಯ್ಕೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಹಾಗೆ ಕರೆದು ಆಯ್ಕೆ ಮಾಡಿದ್ದರೆ, ಆಯ್ಕೆಯಾದ 13 ಏಜೆನ್ಸಿಗಳ ತಾಂತ್ರಿಕ ಬಿಡ್ ಮತ್ತು ಆರ್ಥಿಕ ಬಿಡ್ಡನ್ನು ಪರಿಶೀಲಿಸಬೇಕು. ಈಗ ನಿಗದಿ ಮಾಡಿರುವ ಪ್ರಾಜೆಕ್ಟ್ ಮೊತ್ತ ಸ್ಥಳೀಯ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಆಗಿದೆ. ಇದನ್ನು ಪರಿಶೀಲಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್, ಮುಖಂಡರಾದ ಲೋಕಿಕೆರೆ ನಾಗರಾಜ್, ಅಣಬೇರು ಜೀವನಮೂರ್ತಿ, ಗೋಣಿವಾಡ ಎಂ.ಡಿ.ಮಂಜುನಾಥ್, ವಡ್ನಳ್ಳಿ ಸಿದ್ದೇಶ್, ಕೆ.ಆರ್. ಶಿವಶಂಕರ್, ಎಚ್.ಬಸಾಪುರ ಸುರೇಂದ್ರಪ್ಪ , ತುಂಬಿಗೆರೆ ದಿನೇಶಗೌಡ್ರು ಇದ್ದರು.
ಪ್ರಧಾನಮಂತ್ರಿ ಕುಸುಮ್ ಬಿ ಯೋಜನೆಯಡಿ ನಡೆದಿದೆ ಎನ್ನಲಾದ ಅಕ್ರಮ ಸಂಬಂಧ ಸಿಬಿಐ ತನಿಖೆ ನಡೆಸಲು ಆಗ್ರಹಿಸಿ ದಾವಣಗೆರೆಯಲ್ಲಿ ಶುಕ್ರವಾರ, ಜಿಲ್ಲಾ ರೈತರ ಒಕ್ಕೂಟದ ಶುಕ್ರವಾರ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸ್.ಕೆ. ಪಟೇಲ್ ಅವರಿಗೆ ಮನವಿಪತ್ರ ಸಲ್ಲಿಸಿತು. ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್, ಮುಖಂಡರಾದ ಲೋಕಿಕೆರೆ ನಾಗರಾಜ್, ಅಣಬೇರು ಜೀವನಮೂರ್ತಿ, ಗೋಣಿವಾಡ ಎಂ.ಡಿ.ಮಂಜುನಾಥ್ ಇತರರಿದ್ದರು.