ಹರಿಹರದ ಗುರುಭವನದಲ್ಲಿ ಗುರುವಾರ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು. ಗ್ರಾಮಾಂತರ ಡಿವೈಎಸ್‌ಪಿ ಬಸವರಾಜ್ ಬಿ.ಎಸ್, ಬಿಇಒ ಡಿ. ದುರುಗಪ್ಪ, ಆರ್‌ಎಫ್ ದೇಸಾಯಿ, ಸುರೇಶ್ ಸಗರಿ ಇತರರಿದ್ದರು.Grievance meeting 
ದಾವಣಗೆರೆ

ಅಕ್ರಮ ಮದ್ಯ ಮಾರಾಟ-ಜೂಜಿಗೆ ಹಾಕಿ ಕಡಿವಾಣ Grievance meeting

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಇಲಾಖೆಗೆ ಮನವಿ
  • ಹರಿಹರದಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ
ಹರಿಹರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪರಿಶಿಷ್ಟ ಜಾತಿ ಪಂಗಡದ ಕುಂದು ಕೊರತೆ ಸಭೆಯಲ್ಲಿ ಸಮುದಾಯದ ಮುಖಂಡರಾದ ರಾಜನಹಳ್ಳಿ ನಾಗೇಂದ್ರಪ್ಪ, ಕೆ.ಬಿ. ಮಂಜುನಾಥ್, ಕೊಟ್ರೇಶ್ ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
ಗುರುಭವನದಲ್ಲಿ ಗುರುವಾರ ಪೊಲೀಸ್ ಇಲಾಖೆ ಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಮುಖಂಡರಾದ ಹರಳಹಳ್ಳಿ ಹನುಮಂತಪ್ಪ, ಎ.ಕೆ. ಭೂಮೇಶ್, ಎಚ್. ಸುಧಾಕರ, ತಾಲೂಕಿನ ಬಹುತೇಕ ಗ್ರಾಮಗಳ ಅಂಗಡಿ, ಹೋಟಲ್, ಮನೆಗಳಲ್ಲಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ ಎಂದು ಗಮನಸೆಳೆದರು.
ಮಟ್ಕಾ ಜೂಜಾಟದ ಆರ್ಭಟವೂ ಜೋರಾಗಿದೆ. ಮದ್ಯ ಮತ್ತು ಮಟ್ಕಾ ವ್ಯಸನಕ್ಕೆ ಬಲಿಯಾದ ಪರಿಶಿಷ್ಟರು ಹಾಗೂ ಇತರೆ ಸಮುದಾಯದ ಯುವಕರ ಬದುಕು ಬರಡಾಗುತ್ತಿದೆ. ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದರು.
ಕಡ್ಲೆಗೊಂದಿ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಗ್ರಾಮದ ನಿರ್ವಸತಿಕರಿಗೆ ವಸತಿ ಯೋಜನೆ , ಕೊಕ್ಕನೂರು ಗ್ರಾಮದ ಡಾ.ಬಾಬು ಜಗಜೀವನರಾಮ್ ಭವನಕ್ಕೆ ವಿದ್ಯುತ್ ಸೌಲಭ್ಯ, ಬೆಳ್ಳೂಡಿಯಲ್ಲಿ ಅಪೂರ್ಣವಾಗಿರುವ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣ, ಭಾನುವಳ್ಳಿಯಲ್ಲಿ ಶಿಥಿಲಗೊಂಡ ಅಂಬೇಡ್ಕರ್ ಭವನ ತೆರವುಗೊಳಿಸಿ ಹೊಸ ಭವನ ನಿರ್ಮಿಸುವಂತೆ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಒತ್ತಾಯಿಸಿದರು.
ಸಭೆಯಲ್ಲಿ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಕಾಟಾಚಾರಕ್ಕೆ ನಡೆಸ ಲಾಗುತ್ತಿದೆ. ಕಾನೂನಿನ ಬೆಂಬಲ ಇದ್ದರೂ ಅಸ್ಪಶ್ಯರ ನಿರೀಕ್ಷಿತ ಅಭಿವೃದ್ಧಿ ಆಗುತ್ತಿಲ್ಲ ಎಂದು ಮುಖಂಡ ವಿಶ್ವನಾಥ ಮೈಲಾಳ ಆರೋಪಿಸಿದರು.
ಗುತ್ತೂರು ಗ್ರಾಮದಲ್ಲಿ ಪರಿಶಿಷ್ಟರಿಗೆ ರುದ್ರಭೂಮಿ ಇಲ್ಲ. ಮಳೆಗಾಲದಲ್ಲಿ ಪ್ರವಾಹ ಬಂದಾಗ ಅಂತ್ಯಸಂಸ್ಕಾರ ಮಾಡುವುದು ದುಸ್ತರವಾಗುತ್ತಿದೆ. ತಾಲೂಕು ಮತ್ತು ಜಿಲ್ಲಾಡಳಿತ ರುದ್ರಭೂಮಿಗೆ ಜಮೀನು ಮಂಜೂರು ಮಾಡುವಂತೆ ಸಂಗೀತ ಕಲಾವಿದ ಅಣ್ಣಪ್ಪ ಅಜ್ಜೇರ್ ಹೇಳಿದರು.
ಗ್ರಾಮಾಂತರ ಡಿವೈಎಸ್‌ಪಿ ಬಸವರಾಜ್ ಬಿ.ಎಸ್ ಮಾತನಾಡಿ, ಸಭೆಯಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಕ್ರೂಢೀಕರಿಸಿ ಸಂಬಂಧಿತ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಸೂಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಇನ್ಸ್‌ಪೆಕ್ಟರ್‌ಗಳಾದ ಆರ್.ಎಫ್. ದೇಸಾಯಿ, ಸುರೇಶ್ ಸಗರಿ, ಬಿಇಒ ಡಿ. ದುರುಗಪ್ಪ, ಸಿಡಿಪಿಒ ಪ್ರಿಯದರ್ಶಿನಿ, ದಲಿತ ಮುಖಂಡರಾದ ರಾಜನಹಳ್ಳಿ ನಾಗೇಂದ್ರಪ್ಪ, ಕೆ.ಬಿ. ಮಂಜುನಾಥ್, ಕೊಟ್ರೇಶ್, ಹರಳಹಳ್ಳಿ ಹನುಮಂತಪ್ಪ, ಎ.ಕೆ. ಭೂಮೇಶ್, ಎಚ್. ಸುಧಾಕರ, ಕೊತ್ವಾಲ್ ಹನುಮಂತಪ್ಪ, ಬೇವಿನಹಳ್ಳಿ ಶಿವರಾಂ, ಧೂಳೆಹೊಳೆ ಪರಶುರಾಮ್, ತಿಪ್ಪೇಶ್, ಬೆಳ್ಳೂಡಿ ಹಾಲೇಶ್, ಆರ್. ವಿಜಯ ಕುಮಾರ್, ವೈ.ಬಿ. ಪ್ರಭಾಕರ್, ಸಂತೋಷ ನೋಟದವರ, ಜಿ.ಕೆ. ಪಂಚಾಕ್ಷರಿ ಇತರರಿದ್ದರು.